Advertisement

ಬಜೆಟ್‌ನಲ್ಲಿ ಸಿಗುವುದೇ ಕಡಬ ತಾಲೂಕಿಗೆ ಅನುದಾನ?

10:36 PM Feb 22, 2020 | mahesh |

ಕಡಬ: ರಾಜ್ಯದಲ್ಲಿ ಘೋಷಣೆಯಾಗಿರುವ ಎಲ್ಲ 50 ನೂತನ ತಾಲೂಕುಗಳು ಅನುದಾನದ ಕೊರತೆಯಿಂದ ಕಾರ್ಯಾರಂಭ ಮಾಡಿಲ್ಲ. ಆರು ದಶಕಗಳ ಹೋರಾಟದ ಫಲವಾಗಿ ಘೋಷಣೆಯಾದ ಕಡಬ ತಾಲೂಕಿನ ಕಥೆಯೂ ಇದಕ್ಕೆ ಭಿನ್ನವಾಗಿಲ್ಲ. ಹೊಸ ತಾಲೂಕುಗಳ ಉದ್ಘಾಟನೆಗೆ ತೋರಿದ ಉತ್ಸಾಹ ಅನುಷ್ಠಾನಕ್ಕೆ ತೋರದೇ ಇರುವುದರಿಂದ ಹೆಸರಿಗೆ ಮಾತ್ರ ಹೊಸ ತಾಲೂಕು ಎನ್ನುವಂತಾಗಿದೆ. ರಾಜ್ಯ ಸರಕಾರದ ಬಜೆಟ್‌ ಅಧಿವೇಶನ ಇದೇ ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಅಧಿವೇಶನದಲ್ಲಿ ನೂತನ ತಾಲೂಕು ಅನುಷ್ಠಾನಕ್ಕೆ ಅಗತ್ಯ ಅನುದಾನ ಸಿಗಬಹುದೇ ಎನ್ನುವ ನಿರೀಕ್ಷೆಯಲ್ಲಿ ಕಡಬ ಜನರು ಇದ್ದಾರೆ.

Advertisement

ಈ ಹಿಂದೆ ತನ್ನ ಆಡಳಿತಾವಧಿಯ ಕೊನೆಯಲ್ಲಿ ಕಡಬವನ್ನು ತಾಲೂಕು ಎಂದು ಘೋಷಣೆ ಮಾಡಿದ್ದ ಬಿಜೆಪಿ ಸರಕಾರ ಈಗ ಮತ್ತೆ ಅಧಿಕಾರದಲ್ಲಿದೆ. ಬಿಜೆಪಿ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಾಗ ಆಡಳಿತಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರವೂ ಹೊಸ ತಾಲೂಕುಗಳ ಕಾರ್ಯಾರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳುವ ಬದಲು ಕೊನೆ ಗಳಿಗೆಯಲ್ಲಿ ಮತ್ತೂಮ್ಮೆ ಹೊಸ ತಾಲೂಕು ಗಳನ್ನು ಘೋಷಿಸಿ ಕೈ ತೊಳೆದು ಕೊಂಡಿತ್ತು. ಬಳಿಕ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರಕಾರ ಹೊಸ ತಾಲೂಕುಗಳ ಉದ್ಘಾಟನೆ ನೆರವೇರಿಸುವಲ್ಲಿ ಯಶಸ್ವಿಯಾಯಿತು. ಇದೀಗ ಮತ್ತೆ ಬಿಜೆಪಿ ನೇತೃತ್ವದ ಸರಕಾರ ರಾಜ್ಯದಲ್ಲಿದೆ. ಮುಂದಿನ ಬಜೆಟ್‌ನಲ್ಲಿಯಾದರೂ ಹೊಸ ತಾಲೂಕುಗಳ ಕಾರ್ಯಾರಂಭಕ್ಕೆ ಅನುದಾನ ಸಿಗುವುದೇ ಎನ್ನುವುದು ಜನರ ನಿರೀಕ್ಷೆ.

ಮಿನಿ ವಿಧಾನಸೌಧ: ಶಂಕುಸ್ಥಾಪನೆಗೆ ಸೀಮಿತ
ಪಕ್ಷಗಳ ಮೇಲಾಟ, ರಾಜಕೀಯ ಪ್ರಹಸನದ ಮಧ್ಯೆ ಹೇಗೋ ಹೊಸ ತಾಲೂಕು ಉದ್ಘಾಟನೆ ಭಾಗ್ಯ ಕಂಡಾಗ ಇನ್ನು ಕಡಬದ ಪಾಲಿಗೆ ಶುಕ್ರ ದೆಸೆ ಪ್ರಾರಂಭವಾಯಿತು ಎಂದು ಜನರು ನಂಬಿದ್ದರು. ಆದರೆ ತಾಲೂಕು ಉದ್ಘಾಟನೆಗೊಂಡು ವರ್ಷವಾದರೂ ಪೂರ್ಣ ಪ್ರಮಾಣದ ತಾಲೂಕು ಆಗಲೇ ಇಲ್ಲ. ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ. ಘೋಷಿತ ಮಿನಿ ವಿಧಾನಸೌಧಕ್ಕೆ ಅಡಿಗಲ್ಲು ಹಾಕಿ ವರ್ಷ ಕಳೆದರೂ ತಾಂತ್ರಿಕ ತೊಂದರೆಗಳ ನೆಪದಲ್ಲಿ ಅದು ಇನ್ನೂ ಕನಸಾಗಿಯೇ ಉಳಿದಿದೆ. ಕಡಬದ ತಹಶೀಲ್ದಾರ್‌ ಕಚೇರಿ ಬಳಿ ಕಾದಿರಿಸಿರುವ 1.60 ಎಕ್ರೆ ಜಮೀನಿನಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಅಂದಿನ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಶಿಲಾನ್ಯಾಸ ನೆರವೇರಿಸಿದ್ದರು. ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಪ್ರಕಟಿಸಲಾಯಿತು. ಬಳಿಕ ಬಿಡುಗಡೆಯಾಗಿರುವುದು 2 ಕೋಟಿ ರೂ. ಮಾತ್ರ ಎಂದು ತಿಳಿದುಬಂತು. ತಹಶೀಲ್ದಾರರ ಕಚೇರಿ, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಶಾಸಕರ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಸರ್ವೆ ಇಲಾಖೆ ಕಚೇರಿಗಳನ್ನೊಳಗೊಂಡ ಮಿನಿ ವಿಧಾನಸೌಧದ ನಿರ್ಮಾಣದ ಕನಸು ಸದ್ಯ ಈಡೇರುವ ಮಾತು ದೂರವಿದೆ.

11.40 ಎಕ್ರೆ ಜಮೀನು ಇದೆ
ಪ್ರತ್ಯೇಕ ಕಡಬ ತಾ.ಪಂ. ಅನುಷ್ಠಾನಕ್ಕೆ ಸರಕಾರ ಸಿಬಂದಿ ಮಂಜೂರಾತಿ ಆದೇಶ ನೀಡಿದರೂ ಕಾರ್ಯರೂಪಕ್ಕೆ ಬಂದಿಲ್ಲ. ಕಡಬದಲ್ಲಿ ನ್ಯಾಯಾಲಯ ಕಾರ್ಯಾರಂಭಿಸಲು ನಿರ್ಧರಿಸಲಾಗಿದ್ದರೂ ಕಟ್ಟಡದ ಕೊರತೆಯಿಂದ ಅದೂ ಸಾಧ್ಯವಾಗಿಲ್ಲ. ಇತರ ಸರಕಾರಿ ಕಚೇರಿಗಳನ್ನು ತೆರೆಯುವ ಕುರಿತು ಅಧಿಕೃತ ಮಾಹಿತಿ ಇನ್ನೂ ಬಂದಿಲ್ಲ.

ವಿವಿಧ ಇಲಾಖೆಗಳಿಗೆ ತಾಲೂಕು ಮಟ್ಟದ ಕಚೇರಿ ತೆರೆಯಲು ಬಂಟ್ರ ಗ್ರಾಮದ ಮುಂಚಿಕಾಪು ಎಂಬಲ್ಲಿ ಒಟ್ಟು 11.40 ಎಕ್ರೆ ಜಮೀನನ್ನು ಕಾದಿರಿಸಲಾಗಿದೆ. ಈ ನಡುವೆ ಕಡಬ ಹಾಗೂ ಕೋಡಿಂಬಾಳ ಗ್ರಾಮಗಳನ್ನೊಳಗೊಂಡ ಕಡಬ ಗ್ರಾ.ಪಂ. ಅನ್ನು ಪಟ್ಟಣ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿಸಲು ಸರಕಾರದ ಆದೇಶ ಹೊರಬಿದ್ದಿದೆ.

Advertisement

42 ಗ್ರಾಮಗಳ ಕಡಬ ತಾಲೂಕು
ಪುತ್ತೂರು ತಾಲೂಕಿನ ವ್ಯಾಪ್ತಿಯಲ್ಲಿದ್ದ ಒಟ್ಟು 35 ಗ್ರಾಮಗಳಾದ ಕಡಬ, ಕೋಡಿಂಬಾಳ, ಬಂಟ್ರ, 102 ನೆಕ್ಕಿಲಾಡಿ, ಐತ್ತೂರು, ಬಿಳಿನೆಲೆ, ಕೊಂಬಾರು, ನೂಜಿಬಾಳ್ತಿಲ, ರೆಂಜಿಲಾಡಿ, ಕುಟ್ರಾಪ್ಪಾಡಿ, ಬಲ್ಯ, ಪೆರಾಬೆ, ಕುಂತೂರು, ಆಲಂಕಾರು, ರಾಮಕುಂಜ, ಹಳೆನೇರೆಂಕಿ, ಕೊçಲ, ದೋಳ್ಪಾಡಿ, ಕಾಣಿಯೂರು, ಚಾರ್ವಾಕ, ಬೆಳಂದೂರು, ಕಾçಮಣ, ಕುದ್ಮಾರು, ಸವಣೂರು, ಪುಣcಪ್ಪಾಡಿ, ಪಾಲ್ತಾಡಿ, ಕೊಣಾಜೆ, ಶಿರಿಬಾಗಿಲು, ಗೊಳಿತೊಟ್ಟು, ಕೊಣಾಲು, ಆಲಂತಾಯ, ನೆಲ್ಯಾಡಿ, ಕೌಕ್ರಾಡಿ, ಇಚ್ಲಂಪಾಡಿ, ಶಿರಾಡಿ ಹಾಗೂ ಸುಳ್ಯ ತಾಲೂಕಿನ 7 ಗ್ರಾಮಗಳಾದ ಏನೆಕಲ್‌, ಸುಬ್ರಹ್ಮಣ್ಯ, ಐನೆಕಿದು, ಬಳ್ಪ, ಕೇನ್ಯ, ಎಣ್ಮೂರು ಹಾಗೂ ಎಡಮಂಗಲ ಹೀಗೆ ಒಟ್ಟು 42 ಗ್ರಾಮಗಳ ನೂತನ ಕಡಬ ತಾಲೂಕು ರೂಪುಗೊಂಡಿದೆ.

ಅಗತ್ಯ ಅನುದಾನ ಬರುವ ವಿಶ್ವಾಸವಿದೆ
ಕಡಬ ತಾಲೂಕು ಅನುಷ್ಠಾನಕ್ಕೆ ಸರಕಾರ ಬದ್ಧವಾಗಿದೆ. ಮಿನಿ ವಿಧಾನಸೌಧ ನಿರ್ಮಾಣಕ್ಕೆ ಪೂರಕ ಅನುದಾನ ಒದಗಿಸಲಾಗುವುದು. ಹಂತ ಹಂತವಾಗಿ ತಾಲೂಕು ಮಟ್ಟದ ಇಲಾಖಾ ಕಚೇರಿಗಳನ್ನು ಪ್ರಾರಂಭಿಸುವ ಪ್ರಕ್ರಿಯೆಗೆ ಅಗತ್ಯ ಸಿದ್ಧತೆಗಳು ಸರಕಾರದ ಮಟ್ಟದಲ್ಲಿ ನಡೆಯುತ್ತಿವೆ. ಮುಂಬರುವ ಬಜೆಟ್‌ ಅಧಿವೇಶನದಲ್ಲಿ ತಾಲೂಕು ಅನುಷ್ಠಾನಕ್ಕೆ ಅಗತ್ಯ ಅನುದಾನ ಘೋಷಣೆಯಾಗಲಿದೆ ಎನ್ನುವ ಭರವಸೆ ಇದೆ.
– ಎಸ್‌. ಅಂಗಾರ, ಶಾಸಕ, ಸುಳ್ಯ ವಿಧಾನಸಭಾ ಕ್ಷೇತ್ರ

ನಾಗರಾಜ್‌ ಎನ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next