Advertisement

ಯಕ್ಷಗಾನ ಸೇವೆಯಿಂದ ದೇವಿಯ ಅನುಗ್ರಹ ಪ್ರಾಪ್ತಿ: ಗುರುಪ್ರಸಾದ್‌

12:40 PM Jul 29, 2019 | Team Udayavani |

ಮುಂಬಯಿ, ಜು. 28: ಒಂದು ಗಿಡ ನೆಟ್ಟು ಅದು ಬೆಳೆಯಬೇಕಾದರೆ ಅದಕ್ಕೆ ನೀರು, ಗೊಬ್ಬರ ನೀಡಿ ಪೋಷಿಸುತ್ತಾ ಬಂದರೆ ಮಾತ್ರ ಅದು ಹೆಮ್ಮರವಾಗಿ ಬೆಳೆಯಲು ಸಾಧ್ಯ. ಅದೇ ರೀತಿ ನಮ್ಮ ಕರ್ನಾಟಕದ ಗಂಡುಕಲೆ ಎನಿಸಿದ ಯಕ್ಷಗಾನ ಬೆಳಗಬೇಕಾದರೆ ಅದಕ್ಕೆ ಕಲಾಪೋಷಕರು ಹಾಗೂ ಪ್ರೇಕ್ಷಕರು ಅಗತ್ಯ. ಆದ್ದರಿಂದ ನಾವು ಇಂತಹ ಯಕ್ಷಗಾನ ಕಲೆಗೆ ಸದಾ ಪ್ರೋತ್ಸಾಹ ನೀಡಬೇಕು. ತಾಯಿ ಮೂಕಾಂಬಿಕೆಯ ಸನ್ನಿಧಿಯಲ್ಲಿ ಯಕ್ಷಗಾನ ಸೇವೆ ನೀಡಿದ್ದರಿಂದ ದೇವರ ಅನುಗ್ರಹ ಖಂಡಿತಾ ದೊರಕುತ್ತದೆ. ನಿಮಗೆಲ್ಲರಿಗೂ ತಾಯಿ ಮೂಕಾಂಬಿಕೆಯ ಕೃಪಾಕಟಾಕ್ಷ ಸದಾ ಇರಲಿ ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಪ್ರಧಾನ ಅರ್ಚಕ ಗುರುಪ್ರಸಾದ್‌ ಭಟ್ ಅವರು ನುಡಿದರು.

Advertisement

ಯಕ್ಷಸೌರಭ ಪ್ರವಾಸಿ ಮೇಳದ ಯಕ್ಷ ದಶಮಾನೋತ್ಸವದ ಅಂಗವಾಗಿ ಶ್ರೀ ರಾಘವೇಂದ್ರ ಎಂಟರ್‌ಪ್ರೈಸಸ್‌ ಘನ್ಸೋಲಿ ಇದರ ಮಾಲಕರಾದ ರಾಜೇಂದ್ರ ಶೆಟ್ಟಿ ಉಗ್ಗರಬೆಟ್ಟು ಇವರ ಪ್ರಾಯೋಜಕತ್ವದಲ್ಲಿ ಜು. 27 ರಂದು ಘನ್ಸೋಲಿ ಶ್ರೀ ಶನೀಶ್ವರ ಮಂದಿರದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶ್ರೀ ಶನೀಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶನ ಮತ್ತು ಸಮ್ಮಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಅವರು ಶುಭ ಹಾರೈಸಿದರು.

ದೇವಾಲಯದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಗಳಾಗಿ ಉದ್ಯಮಿ ಆನಂದ್‌ ಶೆಟ್ಟಿ, ಉದ್ಯಮಿಗಳಾದ ಸತೀಶ್‌ ಆರ್‌. ಶೆಟ್ಟಿ, ದೇವಾಲಯದ ಜತೆ ಕೋಶಾಧಿಕಾರಿ ದೆಪ್ಪುಣಿಗುತ್ತು ಚಂದ್ರಹಾಸ್‌ ಶೆಟ್ಟಿ, ಮಂಡಳದ ಕಾರ್ಯಕಾರಿ ಸಮಿತಿಯ ಸದಸ್ಯೆ ರಾಧಾ ಎಸ್‌. ಪೂಜಾರಿ, ಉಪ ಸಮಿತಿಯ ಉಪ ಕಾರ್ಯಾಧ್ಯಕ್ಷ ಧೀರಜ್‌ ಕೋಟ್ಯಾನ್‌, ಯಕ್ಷ ಸೌರಭ ಮೇಳದ ಸಂಚಾಲಕ ಮೊಹಮ್ಮದ್‌ ಗೌಸ್‌ ಅವರು ಉಪಸ್ಥಿತರಿದ್ದರು.

ದೇವಾಲಯದ ಪ್ರಧಾನ ಕಾರ್ಯದರ್ಶಿ ಸುರೇಶ್‌ ಎಸ್‌. ಕೋಟ್ಯಾನ್‌ ಅವರು ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಮ್ಮದ್‌ ಗೌಸ್‌ ಅವರು ಅತಿಥಿಗಳನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಯಕ್ಷಗಾನ ಹಾಗೂ ಅನ್ನದಾನ ಸೇವೆ ನೀಡಿದ ರಾಜೇಂದ್ರ ಶೆಟ್ಟಿ ಮತ್ತು ಪ್ರವೀಣಾ ರಾಜೇಂದ್ರ ಶೆಟ್ಟಿ ದಂಪತಿಯನ್ನು ಸಮ್ಮಾನಿಸಲಾಯಿತು.

ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಮಾತನಾಡಿ, ಮಹಮ್ಮದ್‌ ಗೌಸ್‌ ಅವರು ಕಳೆದ 10 ವರ್ಷ ಗಳಿಂದ ಊರಿನಿಂದ ಮೇಳವನ್ನು ಮುಂಬಯಿಗೆ ತಂದು ತಾಯಿಯ ಸನ್ನಿಧಿಯಲ್ಲಿ ಯಕ್ಷ ಪಂಚಮಿ, ಯಕ್ಷ ಸಪ್ತಮಿ, ಯಕ್ಷದಶಮಿ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಈ ವರ್ಷ ಯಕ್ಷ ದಶಮಾನೋತ್ಸವದ ಅಂಗವಾಗಿ 15 ಯಕ್ಷಗಾನ ಪ್ರದರ್ಶನವನ್ನು ಹಮ್ಮಿಕೊಂಡಿದ್ದಾರೆ. ಅವರ ಎಲ್ಲ ಪ್ರದರ್ಶನ ಚೆನ್ನಾಗಿ ನಡೆಯುತ್ತಾ ಇದೆ. ರಾಜೇಂದ್ರ ಶೆಟ್ಟಿಯವರು ಕಳೆದ 5-6 ವರ್ಷದಿಂದ ಯಕ್ಷಗಾನ ಸೇವೆ ನೀಡುತ್ತಾ ಬಂದಿದ್ದಾರೆ. ಅವರಿಗೆ ಗೌಸ್‌ರವರಲ್ಲಿ ತುಂಬಾ ಅಭಿಮಾನವಿದೆ. ನಾವು ಸದಾ ಯಕ್ಷಗಾನಕ್ಕೆ ಹಾಗೂ ಮಹಮ್ಮದ್‌ ಗೌಸ್‌ ಅವರಿಗೆ ಪ್ರೋತ್ಸಾಹ ನೀಡೋಣ. ನಿಮಗೆಲ್ಲರಿಗೂ ತಾಯಿ ಮೂಕಾಂಬಿಕೆಯ ಅನುಗ್ರಹ ಸದಾ ಇರಲಿ ಎಂದು ನುಡಿದರು.

Advertisement

ಸುರೇಶ್‌ ಕೋಟ್ಯಾನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಮಹಮ್ಮದ್‌ ಗೌಸ್‌ ವಂದಿಸಿ, ಈ ಮಳೆಯ ನಡುವೆಯೂ ಪ್ರತೀ ದಿನದ ಕಾರ್ಯಕ್ರಮಕ್ಕೆ ಬಂದು ಸಹಕರಿಸಿದ ಕಲಾಭಿಮಾನಿಗಳು ಕಲಾಭಿಮಾನಿಗಳಿಗೆ, ಕಲಾಪೋಷಕರಿಗೆ ನನ್ನ ಹೃದಯ ತುಂಬಿದ ಅಭಿನಂದನೆಗಳು ಎಂದು ನುಡಿದರು.ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ಅನ್ನಪ್ರಸಾದ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next