ರಾಯಚೂರು: ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಕರ್ನಾಟಕ ರಾಜ್ಯಪಾಲರು ಕೈಗೊಂಡ ಅಸಂವಿಧಾನಿಕ ನಿರ್ಧಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ಸಿಪಿಐ(ಎಂ) ಹಾಗೂ ಎಸ್‌ಯುಸಿಐ(ಸಿ) ಕಾರ್ಯಕರ್ತರು ಶುಕ್ರವಾರ ಜಿಲ್ಲಾ ಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಕುರಿತು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿ, ಬಹುಮತ ಪಡೆದ ಪಕ್ಷಗಳಿಗೆ ಸರ್ಕಾರ ರಚಿಸಲು ಅವಕಾಶ ನೀಡದಿರುವ ರಾಜ್ಯಪಾಲರ ನಡೆ ಬಗ್ಗೆ ಖಂಡಿಸಿದರು. ರಾಜ್ಯ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಇಂಥ ವೇಳೆ ರಾಜ್ಯಪಾಲರು ತುಂಬಾ ಜವಾಬ್ದಾರಿಯಿಂದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.
ಒಂದು ವೇಳೆ ಯಾವುದೇ ಪಕ್ಷಕ್ಕೆ ಬಹುಮತ ಸಿಗದಿದ್ದಾಗ ಸಂಖ್ಯಾಬಲದೊಂದಿಗೆ ಸರ್ಕಾರ ರಚಿಸಲು ಸಂವಿಧಾನ ಅವಕಾಶ ಕಲ್ಪಿಸಿದೆ. ಈಗಾಗಲೇ ಮಣಿಪುರ, ಗೋವಾ, ಮೇಘಾಲಯ ರಾಜ್ಯಗಳಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಸಿಗದಿದ್ದಾಗ ಸಮ್ಮಿಶ್ರ ಸರ್ಕಾರ ರಚಿಸಲು ಹಲವು ಪಕ್ಷಗಳು ಒಗ್ಗೂಡಿ ಹಕ್ಕು ಮಂಡಿಸಿದ್ದು, ಅವುಗಳೇ ಸರ್ಕಾರ ರಚಿಸಿವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ಸರ್ಕಾರ ರಚಿಸಲು ಮನವಿ ಮಾಡಿದ್ದಾಗ್ಯೂ ರಾಜ್ಯಪಾಲರು ಬಹುಮತವಿಲ್ಲದ ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ಬಹುಮತ ಇಲ್ಲದ ಬಿಜೆಪಿ ಜನಪ್ರತಿನಿಧಿ ಗಳ ಖರೀದಿಗೆ ಮುಂದಾಗಿದ್ದಾರೆ.
ಸಿಎಂ ಸ್ಥಾನಕ್ಕೆ ಗೌರವ ಇಲ್ಲದಂತೆ ಮಾಡಿದ್ದಾರೆ ಎಂದು ದೂರಿದರು. ಕರ್ನಾಟದಲ್ಲಿ ಇನ್ನೂ 2 ಕ್ಷೇತ್ರದಲ್ಲಿ ಚುನಾವಣೆ ನಡೆಯಬೇಕಿದೆ. ಆದರೆ, ಈಗಾಗಲೇ ರೆಸಾರ್ಟ್ ರಾಜಕಾರಣ ಆರಂಭಗೊಂಡಿದೆ. ಮುಂದೆ ಹಲವು ಕ್ಷೇತ್ರಗಳಲ್ಲಿ ಚುನಾವಣೆ ನಡೆಯವಂತೆ ಮಾಡುವ ಹುನ್ನಾರ ನಡೆದಿದೆ. ಇಂಥ ಕ್ರಮದಿಂದ ಸಾರ್ವಜನಿಕರ ಹಣವು ಅನಾವಶ್ಯಕವಾಗಿ ಪೋಲಾಗುವ ಹಾಗೂ ಕಲುಷಿತ ರಾಜಕೀಯ ನಡೆಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶ ಮಾಡಿ ಕಾಂಗ್ರೆಸ್, ಜೆಡಿಎಸ್‌ಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ಜಿ. ವೀರೇಶ, ಜಿಲ್ಲಾ ಸಮಿತಿ ಸದಸ್ಯರಾದ ಡಿ.ಎಸ್. ಶರಣಬಸವ, ಕರಿಯಪ್ಪ ಅಚ್ಚೊಳ್ಳಿ, ಎಚ್. ಪದ್ಮಾ, ವರಲಕ್ಷ್ಮೀ, ಯಂಕಪ್ಪ, ಸುಲೋಚನಾ, ಪಾರ್ವತಿ, ಶರಣಗೌಡ, ಶ್ರೀಧರ, ಕುಮಾರ, ಎಸ್‌ಯುಸಿಐ(ಸಿ) ಸಂಘಟನೆ ಜಿಲ್ಲಾ ಸಮಿತಿ ಸದಸ್ಯರಾದ ಅಪರ್ಣಾ ಬಿ.ಆರ್., ವೀರೇಶ, ಎನ್.ಎಸ್. ಚನ್ನಬಸವ ಜಾನೇಕಲ್, ಶ್ಯಾಮಸುಂದರ, ಚೇತನಾ ಬನಾರೆ, ಪ್ರಮೋದ ಕುಮಾರ, ಸರೋಜಾ, ಅಪೂರ್ವ, ಈರಮ್ಮ, ಉದಯ, ಅಜಯಕುಮಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.