Advertisement

ರಾಜ್ಯಪಾಲರು ಮಧ್ಯಪ್ರವೇಶಿಸಿ ರಾಜ್ಯ ಸರ್ಕಾರವನ್ನು ವಜಾಗೊಳಿಸಬೇಕು: ಸಿದ್ದರಾಮಯ್ಯ

03:05 PM Jun 17, 2021 | Team Udayavani |

ಬೆಂಗಳೂರು: ಭಾರತೀಯ ಜನತಾ ಪಕ್ಷದ ಒಳಜಗಳದಿಂದಾಗಿ ರಾಜ್ಯದ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರು ತಕ್ಷಣ ಮಧ್ಯೆಪ್ರವೇಶಿಸಿ ರಾಜ್ಯದ ಬಿಜೆಪಿ ಸರ್ಕಾರವನ್ನು ವಜಾಗೊಳಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Advertisement

ಕೋವಿಡ್ ನಿಯಂತ್ರಣದ ಮೇಲುಸ್ತುವಾರಿ ನೋಡಿಕೊಳ್ಳಬೇಕಾಗಿರುವ ರಾಜ್ಯದ ಸಚಿವರು ತಮ್ಮ ಕಚೇರಿಗೆ ಹೋಗದೆ ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಬೀಡುಬಿಟ್ಟಿದ್ದಾರೆ. ತಮ್ಮ ಸ್ವಂತ ಕ್ಷೇತ್ರದಲ್ಲಿ ಜನರ ನೋವು-ಕಷ್ಟಗಳಿಗೆ ಸ್ಪಂದಿಸಬೇಕಾಗಿರುವ ಬಿಜೆಪಿ ಶಾಸಕರು ಬೆಂಗಳೂರಿನ ಪಕ್ಷದ ಕಚೇರಿಗೆ ಸುತ್ತುಹಾಕುತ್ತಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಸರ್ಕಾರವೇ ಇಲ್ಲದ ಅರಾಜಕ ಪರಿಸ್ಥಿತಿ ನೆಲೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ:ಯಾರೋ ಒಂದಿರಿಬ್ಬರು ಬಿಟ್ಟರೆ, ಬೇರೆ ಯಾರು ಕೂಡ ಸಿಎಂ ವಿರುದ್ಧ ಮಾತಾಡ್ತಿಲ್ಲ: ರೇಣುಕಾಚಾರ್ಯ

ರಾಜ್ಯದಲ್ಲಿ ಮತ್ತೆ ಕೋವಿಡ್ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಸೋಂಕಿನ ನಿಯಂತ್ರಣದ ಬಗ್ಗೆ ನಿಗಾವಹಿಸುವವರೇ ಇಲ್ಲವಾಗಿದೆ. ಕೋವಿಡ್ ಸೋಂಕಿನ ಮೂರನೇ ಅಲೆ ನಿರೀಕ್ಷೆಗಿಂತಲೂ ಬೇಗನೇ ಬಂದು ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸುತ್ತಲೇ ಇದ್ದಾರೆ. ವ್ಯಾಕ್ಸಿನ್ ಪೂರೈಕೆಯಲ್ಲಿನ ಕೊರತೆ, ಡೋಸ್ ಅವಧಿಯ ಬಗೆಗಿನ ಗೊಂದಲ ಮತ್ತು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ನಡುವಿನ ತಿಕ್ಕಾಟಗಳಿಂದಾಗಿ ವ್ಯಾಕ್ಸಿನ್ ನೀಡುವ ಕೆಲಸವೂ ಕುಂಟುತ್ತಾ ಸಾಗಿದೆ. ಮಳೆಗಾಲವಾಗಿರುವ ಕಾರಣ ಶೀತ-ಜ್ವರದ ಕಾಯಿಲೆಯೂ ಸಾಮಾನ್ಯವಾಗಿರುವ ಕಾರಣ ಸೋಂಕನ್ನು ನಿಖರವಾಗಿ ಪತ್ತೆಹಚ್ಚುವುದು ಕೂಡಾ ಸಮಸ್ಯೆಯಾಗಲಿದೆ. ಇನ್ನೊಂದೆಡೆ ಶಾಲಾ ಪರೀಕ್ಷೆ ಮತ್ತು ಬೋದನಾ ಶುಲ್ಕದ ಗೊಂದಲ ಇನ್ನೂ ಬಗೆಹರಿದಿಲ್ಲ. ಈ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳು ಸಚಿವರೆಲ್ಲರನ್ನೂ ವಿಶ್ವಾಸಕ್ಕೆ ಪಡೆದು ಒಗ್ಗಟ್ಟಿನಿಂದ ಇಂದಿನ ಆರೋಗ್ಯ ಸಂಬಂಧಿ ತುರ್ತುಪರಿಸ್ಥಿತಿಯನ್ನು ಎದುರಿಸಿ ರಾಜ್ಯದ ಜನತೆಯ ಹಿತಕಾಪಾಡಲು ಮುಂದಾಗಬೇಕಾಗಿತ್ತು. ಆದರೆ ಮುಖ್ಯಮಂತ್ರಿಗಳು ಶಾಸಕರು-ಸಚಿವರು ಮತ್ತು ಪಕ್ಷದ ಹೈಕಮಾಂಡ್ ನಾಯಕರ ಕೈಕಾಲು ಹಿಡಿದು ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಪರಸ್ಪರ ಕಚ್ಚಾಟದಲ್ಲಿ ತೊಡಗಿರುವ ರಾಜ್ಯದ ಬಿಜೆಪಿ ನಾಯಕರಿಗೆ ಕಿವಿ ಹಿಂಡಿ ಬುದ್ದಿ ಹೇಳಬೇಕಾದ ಬಿಜೆಪಿಯ ಹೈಕಮಾಂಡ್ ತಾನೇ ರಾಜ್ಯದ ನಾಯಕರನ್ನು ಪರಸ್ಪರ ಎತ್ತಿಕಟ್ಟಿ ಕಳ್ಳಾಟ ಆಡುತ್ತಿದೆ. ರಾಜ್ಯದ ಹಿತಾಸಕ್ತಿಗೆ ಮಾರಕವಾಗಿರುವ ಈ ಭಿನ್ನಮತವನ್ನು ನಿಯಂತ್ರಿಸಲಿಕ್ಕಾಗದ ನರೇಂದ್ರ ಮೋದಿಯವರು ತಾವೊಬ್ಬ ದುರ್ಬಲ ನಾಯಕನೆಂದು ತಾವೇ ಸಾಬೀತುಪಡಿಸಿಕೊಳ್ಳುತ್ತಿದ್ದಾರೆ. 56 ಇಂಚಿನ ಎದೆಯವನು ಎಂದು ಕೊಚ್ಚಿಕೊಳ್ಳುತ್ತಿರುವ ನರೇಂದ್ರ ಮೋದಿಯವರು ತನ್ನ ಎದೆ ಸುತ್ತಳತೆ ಎಷ್ಟಿದೆ ಎನ್ನುವುದನ್ನಾದರೂ ಅವರು ಸ್ಪಷ್ಟಪಡಿಸಲಿ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next