Advertisement

ಚರ್ಚೆಗೆಡೆ ಮಾಡಿದ ರಾಜ್ಯಪಾಲರ ಹಿಂದಿ ಭಾಷಣ

07:09 AM Feb 14, 2017 | Team Udayavani |

ವಿಧಾನ ಪರಿಷತ್‌: ವಿಧಾನಮಂಡಲ ಜಂಟಿ ಅಧಿವೇಶನದ ವೇಳೆ ರಾಜ್ಯಪಾಲ ವಿ.ಆರ್‌.ವಾಲಾ ಅವರು ಹಿಂದಿಯಲ್ಲಿ ಭಾಷಣ ಮಾಡಿದ ಬಗ್ಗೆ ಸೋಮವಾರ ಕಲಾಪದ ವೇಳೆ ಚರ್ಚೆ ನಡೆಯಿತು. 

Advertisement

ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಬಸವರಾಜ ಹೊರಟ್ಟಿ,  “ರಾಜ್ಯಪಾಲರು ಎರಡನೇ ಬಾರಿ ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ. ಅವರು ಹಿಂದಿಯಲ್ಲಿ ಭಾಷಣ ಮಾಡಿದ್ದರಿಂದ ಹಲವರಿಗೆ ಗಂಭೀರತೆಯನ್ನೇ ಮೂಡಿಸಲಿಲ್ಲ. ಹಾಗಾಗಿ ಹಲವರು ಪರಸ್ಪರ ಮಾತುಕತೆಯಲ್ಲಿ ತೊಡಗಿದ್ದರು. ರಾಷ್ಟ್ರಭಾಷೆಗೆ ಆದ್ಯತೆ ನೀಡಬೇಕು. ಹಿಂದಿಯಲ್ಲೇ ಭಾಷಣ ಮಾಡಬೇಕೆಂದರೆ ಹಿಂದಿ ಬಾರದ ಸದಸ್ಯರಿಗೆ ಹಿಂದಿ ತರಬೇತಿ ಕೊಡಿಸಬೇಕು. ಇಲ್ಲವೇ ರಾಜ್ಯಪಾಲರಿಗೆ ಕನ್ನಡವನ್ನು ಹಿಂದಿಯಲ್ಲಿ ಬರೆದಾದರೂ ನೀಡಬೇಕು. ಮುಂದಿನ ಬಾರಿಯಾದರೂ ಈ ಸಮಸ್ಯೆ ಬಗೆಹರಿಸಬೇಕು’ ಎಂದರು. ಇದಕ್ಕೆ ಆಕ್ಷೇಪಿಸಿದ ಬಿಜೆಪಿಯ ಎಸ್‌ .ವಿ.ಸಂಕನೂರ, “ರಾಷ್ಟ್ರಭಾಷೆಯನ್ನು ನಾವು ಬಳಸದೆ ಇನ್ಯಾರು ಬಳಸುತ್ತಾರೆ’ ಎಂದರು. ದನಿಗೂಡಿಸಿದ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, “ಜನ
ಹಿಂದಿಯನ್ನು ಹೆಚ್ಚಾಗಿ ಬಳಸುತ್ತಿದ್ದು, ಆಡುಭಾಷೆಯಂತಾಗುತ್ತಿದೆ. ಇನ್ನೂ ಇಂಗ್ಲಿಷ್‌ ಸರಿಯಾಗಿ ಅರ್ಥವಾಗದು ಎಂದರೆ ಒಪ್ಪಬಹುದು. ರಾಜ್ಯಪಾಲರು ಕನ್ನಡ ಕಲಿಯಲಿ. ಆದರೆ ಹಿಂದಿ ಭಾಷಣ ಅರ್ಥವಾಗದು ಎನ್ನುವುದು ಸರಿಯಲ್ಲ’ ಎಂದು ಹೇಳಿದರು.

ಆಗ ಜೆಡಿಎಸ್‌ನ ರಮೇಶ್‌ಬಾಬು, “ರಾಜ್ಯಪಾಲರ ಹಿಂದಿ ಭಾಷಣವನ್ನು ಸ್ಪಷ್ಟವಾಗಿ ವಿರೋಧಿಸುತ್ತೇನೆ’ ಎಂದರು. ಇದನ್ನು ಬೆಂಬಲಿಸಿದ ಕಾಂಗ್ರೆಸ್‌ನ ಎಚ್‌.ಎಂ.ರೇವಣ್ಣ, “ಹಿಂದಿಗೆ ವಿರೋಧವಿಲ್ಲ. ಆದರೆ ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಾಗಿರುವುದರಿಂದ ಕನ್ನಡದಲ್ಲಿ ಭಾಷಣ ಮಾಡುವುದು ಸೂಕ್ತ. ತಮಿಳುನಾಡಿನಲ್ಲಿ ಈ ರೀತಿ ನಡೆದಿದ್ದರೆ ಎಲ್ಲ ಜನಪ್ರತಿನಿಧಿಗಳು ಒಂದಾಗಿ ವಿರೋಧಿಸುತ್ತಿದ್ದರು’ ಎಂದರು. ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್‌ನ ವಿ.ಎಸ್‌. ಉಗ್ರಪ್ಪ, “ತ್ರಿಭಾಷಾ ಸೂತ್ರವಿದ್ದರೂ ಕನ್ನಡ ಆಡಳಿತ ಭಾಷೆಯಾಗಿರುವುದರಿಂದ ಕನ್ನಡಕ್ಕೆ ಆದ್ಯತೆ ಕೊಡಲೇಬೇಕು’ ಎಂದರು. ಕೊನೆಗೆ ಬಸವರಾಜ ಹೊರಟ್ಟಿ, “ರಾಜ್ಯಪಾಲರು ಹಿಂದಿಯಲ್ಲಿ ಭಾಷಣ ಮಾಡಬಾರದು ಎಂದಿಲ್ಲ. ಹಿಂದೆಲ್ಲಾ ಭಾಷಣದ ಆರಂಭ ಹಾಗೂ ಅಂತ್ಯದಲ್ಲಿ ಕನ್ನಡದ ಸಾಲುಗಳನ್ನು ಹಿಂದಿನ ರಾಜ್ಯಪಾಲರು ಉತ್ತೇಖೀಸುತ್ತಿದ್ದರು. ಆದರೆ ಈ ರಾಜ್ಯಪಾಲರು ಎಲ್ಲಿಯೂ ಕನ್ನಡ ಬಳಸಲಿಲ್ಲ. 
ಕೆಲ ಹೊಸ ಶಾಸಕರು ಹೇಳಿದ ಅಭಿಪ್ರಾಯವನ್ನು ಸದನದಲ್ಲಿ ಪ್ರಸ್ತಾಪಿಸಿದೆ’ ಎಂದು ಹೇಳುವ ಮೂಲಕ ಚರ್ಚೆಗೆ ಅಂತ್ಯ ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next