Advertisement

ಸದನಕ್ಕೆ ರಾಜ್ಯಪಾಲರು ಮಾರ್ಗದರ್ಶಕರಲ್ಲ

11:38 PM Jul 19, 2019 | Team Udayavani |

ನವದೆಹಲಿ: 2016 ರಲ್ಲಿ ಅರುಣಾಚಲ ಪ್ರದೇಶ ರಾಜ್ಯ ಸರ್ಕಾರದಲ್ಲಿ ಉಂಟಾದ ಬಿಕ್ಕಟ್ಟಿನ ವೇಳೆ ಸುಪ್ರೀಂಕೋರ್ಟ್‌ ನೀಡಿದ ತೀರ್ಪು ಈಗ ಕರ್ನಾಟಕದಲ್ಲಿನ ರಾಜ್ಯಪಾಲರು ಹಾಗೂ ಸ್ಪೀಕರ್‌ ಮಧ್ಯದ ಸಂಘರ್ಷದಲ್ಲಿ ಮತ್ತೆ ಚರ್ಚೆಗೆ ಬಂದಿದೆ. ರಾಜ್ಯಪಾಲರು ರಾಜ್ಯದ ಮಾರ್ಗದರ್ಶಕರೂ ಅಲ್ಲ, ಸಲಹೆಗಾರರೂ ಅಲ್ಲ. ಸ್ಪೀಕರ್‌ ಕಾರ್ಯದಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿತ್ತು.

Advertisement

ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಆಗ ವಜಾಗೊಂಡಿದ್ದ ನಬಂ ತುಕಿ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಮರುಸ್ಥಾಪಿಸಿತ್ತು. ಅಷ್ಟೇ ಅಲ್ಲ, ಸಂವಿಧಾನದಲ್ಲಿ ರಾಜ್ಯಪಾಲರ ಅಧಿಕಾರದ ಬಗ್ಗೆಯೂ ವಿವರವಾಗಿ ವ್ಯಾಖ್ಯಾನಿಸಿತ್ತು. ಸ್ಪೀಕರ್‌ ಅಥವಾ ಡೆಪ್ಯುಟಿ ಸ್ಪೀಕರ್‌ರನ್ನು ತೆಗೆದುಹಾಕಲು ರಾಜ್ಯಪಾಲರಿಗೆ ಅಧಿಕಾರವಿಲ್ಲ. ರಾಜ್ಯಪಾಲರು ಮತ್ತು ಸ್ಪೀಕರ್‌ ಎರಡೂ ಸ್ವತಂತ್ರ ಸಾಂವಿಧಾನಿಕ ಜವಾಬ್ದಾರಿಗಳಾಗಿವೆ ಎಂದು ತೀರ್ಪಿನಲ್ಲಿ ಪೀಠ ಉಲ್ಲೇಖೀಸಿತ್ತು.

ರಾಜ್ಯಪಾಲರು ಜನಪ್ರತಿನಿಧಿಗಳಿಗಿಂತ ಮೇಲಿನವರಲ್ಲ ಹಾಗೂ ಬಹುಮತದ ಸರ್ಕಾರವು ಅಸ್ತಿತ್ವದಲ್ಲಿರುವವರೆಗೂ ತನ್ನ ಮನಸಿಗೆ ಬಂದಂತೆ ಅವರು ಮಧ್ಯಪ್ರವೇಶ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿತ್ತು. ಒಂದು ರಾಜಕೀಯ ಪಕ್ಷದಲ್ಲಿ ನಡೆಯುತ್ತಿರುವ ಚಟುವಟಿಕೆಗಳು, ಸಂಘರ್ಷ ಅಥವಾ ಪಕ್ಷದೊಳಗಿನ ಅಶಾಂತಿಯು ರಾಜ್ಯಪಾಲರ ಅವಗಾಹನೆಗೆ ಒಳಪಡುವುದಿಲ್ಲ. ರಾಜಕೀಯ ಕುದುರೆ ವ್ಯಾಪಾರ ನಡೆಯದಂತೆ ಹಾಗೂ ರಾಜಕೀಯ ವಿಪ್ಲವಗಳು ಆಗದಂತೆ ತಡೆಯುವುದು ರಾಜ್ಯಪಾಲರ ಕರ್ತವ್ಯವಾಗಿದೆ ಎಂದು ತೀರ್ಪಿನಲ್ಲಿ ಉಲ್ಲೇಖೀಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next