Advertisement

ರಾಜ್ಯಪಾಲರನ್ನೇ ಮರೆತ ಕೇಂದ್ರ ವಿವಿ

12:24 PM Mar 06, 2018 | Team Udayavani |

ಬೆಂಗಳೂರು: ಹೊಸದಾಗಿ ರಚನೆಯಾಗಿರುವ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಉದ್ಘಾಟನೆಗೆ ಕುಲಾಧಿಪತಿಯಾಗಿರುವ ರಾಜ್ಯಪಾಲರನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂ ಸಲಾಗಿದೆ. ಮಾ.7ರಂದು ನಡೆಯುವ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಉದ್ಘಾಟನಾ ಸಮಾರಂಭಕ್ಕೆ ರಾಜ್ಯಪಾಲರಿಗೆ ಆಹ್ವಾನ ನೀಡಿಲ್ಲ. ಮಾತ್ರವಲ್ಲ, ಸಮಾರಂಭದ ಆಹ್ವಾನ ಪತ್ರಿಕೆಯಲ್ಲೂ ರಾಜ್ಯಪಾಲರ ಹೆಸರಿಲ್ಲ.

Advertisement

ಬೆಂಗಳೂರು ಕೇಂದ್ರ ವಿವಿಯ ಆಡಳಿತ ಮಂಡಳಿಯ ಈ ನಡೆಗೆ ವಿಶ್ರಾಂತ ಕುಲಪತಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯದ ವಿಶ್ವವಿದ್ಯಾಲಯಕ್ಕೆ ರಾಜ್ಯಪಾಲರು ಕುಲಾಧಿಪತಿಗಳಾಗಿರುತ್ತಾರೆ. ಹೀಗಿರುವಾಗ ವಿಶ್ವವಿದ್ಯಾಲಯದ ಉದ್ಘಾಟನೆಗೆ ಅವರನ್ನು ಆಹ್ವಾನಿಸದೇ ಇದ್ದರೆ ತಪ್ಪಾಗುತ್ತದೆ ಎಂದು ವಿಶ್ರಾಂತ ಕುಲಪತಿ ಡಾ.ಎನ್‌.ಪ್ರಭುದೇವ್‌ ಬೇಸರ ವ್ಯಕ್ತಪಡಿಸಿದ್ದಾರೆ.

ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ರಾಜ್ಯಪಾಲರನ್ನು ಆಹ್ವಾನಿಸಲೇ ಬೇಕು. ಆದರೆ, ಉದ್ಘಾಟನೆಗೆ ಆಹ್ವಾನಿಸಬೇಕು ಎಂಬ ನಿಮಯ ಇಲ್ಲ. ಹಾಗಂತ ಆಹ್ವಾನಿಸದೇ ಇರುವುದು ಸರಿಯಲ್ಲ ಎಂದು ವಿಶ್ರಾಂತ ಕುಲಪತಿ ಡಾ.ಎನ್‌.ಆರ್‌.ಶೆಟ್ಟಿ ಹೇಳಿದರು.

ರಾಜಕೀಯ ಸಮಾರಂಭ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಮುಖ್ಯಮಂತ್ರಿಗಳ ಪೋಸ್ಟರ್‌, ಕಟೌಟ್‌ ಹಾಕಲು ಸಿದ್ಧತೆ ನಡೆದಿದೆ. ಶೈಕ್ಷಣಿಕ ಕಾರ್ಯಕ್ರಮವನ್ನು ರಾಜಕೀಯ ಸಮಾವೇಶವಾಗಿ ಪರಿವರ್ತಿಸುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

ಸಮಯದ ಅಭಾವವಂತೆ: ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬೆಂಗಳೂರು ಕೇಂದ್ರ ವಿವಿ ಕುಲಪತಿ ಪ್ರೊ.ಜಾಫೆಟ್‌, ರಾಜ್ಯಪಾಲರನ್ನು ಆಹ್ವಾನಿಸುವಾಗ ಸಾಕಷ್ಟು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ವಿವಿಯ ಉದ್ಘಾಟನೆ ಸಾರ್ವಜನಿಕ ಸಮಾರಂಭ. ಶಿಕ್ಷಣ ಜಾತ್ರೆಯಂತೆ ಆಚರಣೆ ಮಾಡುತ್ತೇವೆ.

Advertisement

ರಾಜ್ಯಪಾಲರು ವೇದಿಕೆಯಲ್ಲಿದಾಗ ಮೂರ್‍ನಾಲ್ಕು ಗಣ್ಯರು ಹೊರತುಪಡಿಸಿ ಬೇರೆ ಯಾರಿಗೂ ಅವಕಾಶ ಇರುವುದಿಲ್ಲ. ರಾಜ್ಯಪಾಲರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸ ಬಾರದು ಎಂಬ ಯಾವ ದುರುದ್ದೇಶವೂ ನಮ್ಮಲ್ಲಿ ಇರಲಿಲ್ಲ. ಸಮಯದ ಅಭಾವದಿಂದಾಗಿ ಸಾಧ್ಯವಾಗಿಲ್ಲ. ಬೇರೊಂದು ಕಾರ್ಯಕ್ರಮ ಮಾಡಿ ಅವರನ್ನು ಆಹ್ವಾನಿಸುತ್ತೇವೆ ಎಂದು ಸ್ಪಷ್ಟೀಕರಣ ನೀಡಿದರು.

ಕಾರ್ಪೊರೇಟರ್‌ ಹೆಸರೂ ಇದೆ!: ವಿಶ್ವವಿದ್ಯಾಲಯದ ಉದ್ಘಾಟನೆ ಹಾಗೂ ಘಟಿಕೋತ್ಸವ ಸೇರಿ ವಿಶ್ವವಿದ್ಯಾಲಯದ ಪ್ರಮುಖ ಕಾರ್ಯಕ್ರಮಗಳಿಗೆ ರಾಜ್ಯಪಾಲರನ್ನು ಆಹ್ವಾನಿಸುವುದು ಶಿಷ್ಟಾಚಾರ. ಆದರೆ, ಬೆಂಗಳೂರು ಕೇಂದ್ರ ವಿವಿಯ ಉದ್ಘಾಟನೆಗೆ ರಾಜ್ಯಪಾಲರನ್ನು ಆಹ್ವಾನಿಸಿಲ್ಲ. ಸೆಂಟ್ರಲ್‌ ಕಾಲೇಜು ಕ್ರಿಕೆಟ್‌ ಮೈದಾನದಲ್ಲಿ ಸಮಾರಂಭ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಸೇರಿ ಕೇಂದ್ರ ಸಚಿವರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ರಾಜ್ಯಸಭಾ ಸದಸ್ಯರು ಮಾತ್ರವಲ್ಲದೆ, ಬಿಬಿಎಂಪಿ ಮೇಯರ್‌, ಉಪ ಮೇಯರ್‌, ಸದಸ್ಯರ ಹೆಸರೂ. ಆಹ್ವಾನ ಪತ್ರಿಕೆಯಲ್ಲಿವೆ. ಆದರೆ ರಾಜ್ಯಪಾಲರ ಹೆಸರೇ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next