ಆಳಂದ: ಸರ್ಕಾರ ಪ್ರಕಟಿಸಿರುವ ಕೊರೊನಾ ಲಾಕ್‌ಡೌನ್ ಪರಿಹಾರ ಸಂಕಷ್ಟದಲ್ಲಿರುವ ಜನತೆಯನ್ನು ಅಣಕಿಸಿದಂತೆ ಕಂಡು ಬರುತ್ತಿದೆ ಎಂದು ಕಿಸಾನಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ ಆಕ್ರೋಶ ವ್ಯಕ್ತಪಡಿಸಿದರು.
ಸಿಪಿಐ (ಎಂ), ಸಿಪಿಐ ಸೋಷಲಿಷ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್ ಮತ್ತು ಆರ್‌ಪಿಐ, ಸ್ವರಾಜ್ ಇಂಡಿಯಾ ಜಿಲ್ಲಾ ಘಟಕದ ಆಶ್ರಯದಲ್ಲಿ ಮುಖಂಡರು ಕೋವಿಡ್ ವಿರುದ್ಧ ಸರ್ಕಾರದ ನಿರ್ಲಕ್ಷé ಖಂಡಿಸಿ ತಹಶೀಲ್ದಾರ್ ಕಚೇರಿ ಎದುರು ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು. ಸಾರ್ವಜನಿಕರಂಗದ ಉದ್ದಿಮೆ, ಸಂಸ್ಥೆಗಳ ಖಾಸಗೀಕರಣ ರದ್ದು ಮಾಡಬೇಕು ಎಂದು ಆಗ್ರಹಿಸಿದರು. ಕಿಸಾನಸಭಾ ತಾಲೂಕು ಅಧ್ಯಕ್ಷ ಚಂದ್ರಕಾಂತ ಖೋಬ್ರೆ ಮಾತನಾಡಿ, 18 ವರ್ಷ ಮೇಲ್ಪಟ್ಟ ಜನತೆಗೆ ಉಚಿತ ಸಾರ್ವತ್ರಿಕ ಕೋವಿಡ್ ಲಸಿಕೆಯನ್ನು ತಕ್ಷಣವೇ ಒದಗಿಸಬೇಕು. ಅದಾಯ ತೆರಿಗೆ ವ್ಯಾಪ್ತಿಗೆ ಒಳಪಡದ ಎಲ್ಲ ಕುಟುಂಬಗಳಿಗೆ ಮಾಸಿಕ ತಲಾ 10 ಕೆಜಿ ಸಮಗ್ರ ಆಹಾರಧಾನ್ಯ, ಸುರಕ್ಷಾ ಪೊಟ್ಟಣ ಹಾಗೂ 10 ಸಾವಿರ ರೂ. ನೆರವು ಕೊಡಬೇಕು ಎಂದು ಆಗ್ರಹಿಸಿದರು.
ಸಿಪಿಐಎಂ ಜಿಲ್ಲಾ ಮುಖಂಡ ಸುಧಾಮ ಧನ್ನಿ ಮಾತನಾಡಿ, ಇಂದಿರಾ ಕ್ಯಾಂಟಿನ್‌ಗಳನ್ನು ವಿಸ್ತರಿಸಿ ಬಲಗೊಳಿಸಬೇಕು. ತೋಟಗಾರಿಕೆ ಬೆಳೆ ಹಾನಿಗೆ ಕನಿಷ್ಠ 25 ಸಾವಿರ ರೂ. ನೀಡಬೇಕು. ರಾಜ್ಯದ ಎಲ್ಲ ರೈತರು, ಕೂಲಿಕಾರರು, ಕಾರ್ಮಿಕರು, ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರ ಖುಣಮುಕ್ತ ಕಾಯ್ದೆಯಡಿ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು. ಮುಖಂಡ ಪಾಂಡುರಂಗ ಮಾವೀನಕರ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಿ ಮಾನವ ದಿನಗಳನ್ನು ಹೆಚ್ಚಿಸಿ, ಕೂಲಿಯನ್ನು ಹೆಚ್ಚಿಸಬೇಕು. ಕೂಲಿ ಕಾರ್ಮಿಕರಿಗೆ ವಿಮೆ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ನಂತರ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಸಾಯಬಣ್ಣಾ ಪೂಜಾರಿ, ಅಲ್ತಾಪ್ ಮುಲ್ಲಾ, ವಿಶ್ವನಾಥ ಕೆ. ಜಮಾದಾರ ಮತ್ತಿತರರು ಪಾಲ್ಗೊಂಡಿದ್ದರು.