ಬೀದರ್: ಕನ್ನಡ ನಾಮಫಲಕ ವಿಷಯದಲ್ಲಿ ಸರ್ಕಾರ ಕನ್ನಡ ಪರ ಸಂಘಟನೆಗಳ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಮಾತೃ ಭಾಷೆ ಕಡ್ಡಾಯ ಮಾಡಿದ್ದರೆ ಹೋರಾಟ ಯಾಕೆ ಮಾಡುತ್ತಿದ್ದರು ಎಂದು ಸಭಾಪತಿ ಬಸವರಾಜ ಹೊರಟ್ಟಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕನ್ನಡವೇ ಅಂದರೆ ಹೇಗೆ. ಬೆಂಗಳೂರಿನಲ್ಲಿ ಬೇರೆ ರಾಜ್ಯದವರು ಬಂದು ಕನ್ನಡ ನಾಮಫಲಕ ಹಾಕದೆ ಇಂಗ್ಲಿಷ್ ನಲ್ಲಿ ಹಾಕುತ್ತಾರೆ. ಅವರ ರಾಜ್ಯದಲ್ಲಿ ಅವರು ಅನ್ಯ ಭಾಷೆಯ ಫಲಕಗಳನ್ನು ಹಾಕುತ್ತಾರಾ? ಹೂಡಿಕೆದಾರರು ಆಂಗ್ಲ ಭಾಷೆ ಬೋರ್ಡ್ ನೋಡಿ ರಾಜ್ಯಕ್ಕೆ ಬರುತ್ತಾರಾ ಎಂದು ಕಿಡಿಕಾರಿದರು.
ನಾಮ ಫಲಕದಲ್ಲಿ 60:40 ಅನುಪಾತ ಯಾಕೆ ಬೇಕು. ನೂರಕ್ಕೆ ನೂರು ರಾಜ್ಯದಲ್ಲಿ ಕನ್ನಡ ಫಲಕ ಇರಬೇಕು. ಕರ್ನಾಟಕದಲ್ಲಿ ಕನ್ನಡ ಕಾವಲು ಸಮಿತಿ ಇಟ್ಟಿದ್ದು ವಿಚಿತ್ರ ಎಂದು ಬೇಸರ ವ್ಯಕ್ತಪಡಿಸಿದರು.
ದೇವಸ್ಥಾನದಲ್ಲಿ ರಾಜಕೀಯ ಬರಬಾರದು. ರಾಮ ಮಂದಿರ ಉದ್ಘಾಟನೆಗಾಗಿ ಅಯೋಧ್ಯೆಗೆ ಹೋಗುವುದು ಬಿಡುವುದು ಅವರವರ ಇಷ್ಟ. ದೇವರಿಗೆ ಜಾತಿ, ಧರ್ಮವೆಂದು ಬರಬಾರದು. ದೇವರು ಎಲ್ಲರಿಗೂ ಅಷ್ಟೇ, ಅವರವರ ನಂಬಿಕೆ ಮೇಲೆ ಇರುತ್ತಾನೆ ಎಂದು ಹೇಳುವ ಮೂಲಕ ವಿಪಕ್ಷಗಳ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಇಂದು ಸದನದ ಮಹತ್ವ ಕಳೆದುಕೊಂಡಿದೆ. ರಾಜಕೀಯ ಪಕ್ಷಗಳು ಒಬ್ಬರಿಗೊಬ್ಬರು ಬೈಯುವುದೇ ಆಗಿದ್ದು, ಇಂದಿನ ರಾಜಕೀಯ ನಡೆ ಸಮಧಾನಕರವಾಗಿಲ್ಲ ಎಂದು ಹೊರಟ್ಟಿ ಹೇಳಿದರು.