ಮಾಗಡಿ: ದೇಶಕ್ಕಾಗಿ ಹಗಲಿರುಳು ದುಡಿದು ಮಡಿದ ಸಂತರು, ಗುರುಗಳ, ಮಹಾನೀಯರ ಸ್ಮರಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಜಯಂತಿ ಆಚರಣೆ ಘೋಷಣೆ ಮಾಡುತ್ತದೆ. ಕೆಲವು ಜಯಂತಿಗಳನ್ನು ಅದ್ಧೂರಿಯಾಗಿಯೂ ಆಚರಿಸುತ್ತದೆ. ಆದರೆ ಜಯಂತಿಗೆ ಸಂಬಂಧಿಸಿದ ಬಿಡುಗಡೆ ಮಾಡದೆ ವಿಳಂಬ ನೀತಿ ಅನುಸರಿಸುತ್ತದೆ ಎಂಬ ದೂರುಗಳು ಸಮುದಾಯಗಳಿಂದ ಕೇಳಿ ಬರುತ್ತಿವೆ.
ಅಧಿಕಾರಿಗಳು ಕೆಂಗಣ್ಣಿಗೆ ಗುರಿ: 2019 ರ ಫೆಬ್ರವರಿಯಿಂದ ಜುಲೈವರೆಗೆ ಆಚರಿಸಿದ ಮಹನೀಯರ ಜಯಂತಿಗಳಿಗೆ ಸರ್ಕಾರ ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ. ಸರ್ಕಾರ ಅನುದಾನ ಬಿಡುಗಡೆಗೊಳಿಸುವವರೆಗೆ ಅಧಿಕಾರಿಗಳು ನಿಸ್ಸಹಾಯಕರು. ಆದರೆ ಅನುದಾನಕ್ಕೆಂದು ಬರುವ ಸಮುದಾಯದ ಕೆಂಗಣ್ಣಿಗೆ ಅಧಿಕಾರಿಗಳು ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಧಿಕಾರಿಗಳು ಅನುದಾನ ಬಿಡುಗಡೆಗೊಳಿಸುತ್ತಿಲ್ಲ ಎಂಬ ದೂರು ಸಮುದಾಯಗಳಿಂದ ಕೇಳಿ ಬರುತ್ತಿವೆ.
ಪ್ರತಿವರ್ಷದಂತೆ ಈ ವರ್ಷವೂ ಮಡಿವಾಳ ಮಾಚೀದೇವ, ದೇವರ ದಾಸಿಮಯ್ಯ, ಬಸವ, ಶಂಕರ, ಕೆಂಪೇಗೌಡ, ಹೇಮರಡ್ಡಿ ಮಲ್ಲಮ್ಮ, ಭಗೀರಥ, ಅಡಪದ ಅಪ್ಪಣ್ಣ, ಸವಿತಾ ಮಹರ್ಷಿ, ಸರ್ವಜ್ಞ, ಸಂತ ಸೇವಾಲಾಲ್, ಕನಕದಾಸ, ಪುರಂದರದಾಸ, ತ್ಯಾಗರಾಜ, ಶಿವಾಜಿ ಜಯಂತಿ ಹೀಗೆ ಅನೇಕ ಸಂತರ, ಗುರುಗಳ, ಮಹಾನೀಯರ ಜಯಂತಿಗಳನ್ನು ಆಚರಿಸಿಕೊಂಡು ಬರಲಾಗಿದೆ. ಮುಂದೆಯೂ ಜಯಂತಿಗಳನ್ನು ಆಚರಿಸಲಾಗುತ್ತದೆ.
ಅನುದಾನಕ್ಕಾಗಿ ಸಮುದಾಯದವರ ಪರದಾಟ: ಸರ್ಕಾರ ಜಯಂತಿಗಳಿಗಾಗಿಯೇ ಅನುದಾನ ಮೀಸಲಿರಿಸಿ, ಘೋಷಣೆ ಮಾಡಿದೆ. ಆದರೆ ಪ್ರಸಕ್ತ ಸಾಲಿನ ಜಯಂತಿ ಆಚರಣೆಯಾಗಿರುವ ಜಯಂತಿಗಳ ಅನುದಾನ ಮಾತ್ರ ಬಿಡುಗಡೆಯೇ ಆಗಿಲ್ಲ. ಆಚರಣೆ ನಿರ್ವಹಣೆ ವಹಿಸಿಕೊಂಡಿರುವ ಇಲಾಖೆ ಅಧಿಕಾರಿಗಳ ಜೇಬಿಗೆ ಅಕ್ಷರಶಃ ಕತ್ತರಿ ಬಿದ್ದಿದೆ. ಆದರೂ ಸಂಬಂಧಪಟ್ಟ ಅನುದಾನ ನೀಡುವಂತೆ ವಿವಿಧ ಸಮಾಜದವರು ರಾಮನಗರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರ ಕಚೇರಿಗೆ ಎಡತಾಕುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸರ್ಕಾರ ಅನುದಾನ ಬಿಡುಗಡೆ ಮಾಡದ ಕಾರಣ ಅನುದಾನಕ್ಕಾಗಿ ಸಂಬಂಧಪಟ್ಟ ಆರ್ಥಿಕ ಇಲಾಖೆಗೆ ರಾಮನಗರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರು ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಸರ್ಕಾರ ಅನುದಾನ ಬಿಡುಗಡೆಯಾದರೆ ಮಾತ್ರ ಸಂಬಂಧಪಟ್ಟ ಸಮುದಾಯಗಳಿಗೆ ಅನುದಾನ ನೀಡಲು ಸಾಧ್ಯ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರ್ಕಾರದ ವಿಳಂಬ ನೀತಿಗೆ ಆಕ್ರೋಶ: ತಾಲೂಕು ಮಟ್ಟದಲ್ಲಿ ವಿವಿಧ ಸಮುದಾಯದವರು ಅದ್ಧೂರಿಯಾಗಿ ಮಹನೀಯರ ಜಯಂತಿ ಆಚರಿಸಿದ್ದಾರೆ. ವಿವಿಧ ಸಮಾಜದ ಸಂಘ, ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಪದಾಧಿಕಾರಿಗಳು ಜೇಬು ಖಾಲಿ ಮಾಡಿಕೊಂಡು ಸರ್ಕಾರದ ಅನುದಾನಕ್ಕಾಗಿ ರಾಮನಗರ ಜಿಲ್ಲಾಧಿಕಾರಿ ಕಚೇರಿಗೆ ಅಲೆದು ಅಲೆದು ಬೆಂಡಾಗಿ ಹೋಗಿರುವುದಂತೂ ಅಕ್ಷರಶಃ ಸತ್ಯ. ಸರ್ಕಾರದ ಈ ವಿಳಂಬ ನೀತಿಯ ವಿರುದ್ಧ ವಿವಿಧ ಸಮುದಾಯದವರಿಂದ ಆಕ್ರೋಶ ಮಾತುಗಳು ಸಹ ಕೇಳಿಬರುತ್ತಿವೆ.