ಹೊಸದಿಲ್ಲಿ: ಕಳೆದ ಮೇ ತಿಂಗಳಲ್ಲಿ ಕೇಂದ್ರ ಸರಕಾರದ ಒಪ್ಪಿಗೆ ದೊರೆತ ಬಳಿಕವೇ ಭಾರತೀಯ ಸೇನೆಯು ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ)ಯುದ್ದಕ್ಕೂ 6 ರಿಂದ 7 ಪ್ರಮುಖ ಪ್ರದೇಶಗಳನ್ನು ಗುರುತಿಸಿ, ಅಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿ ಚೀನಗೆ ಸಡ್ಡು ಹೊಡೆಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ರಾಜಕೀಯ ಮಟ್ಟದಿಂದ ಅನುಮತಿ ದೊರೆತ ಕೂಡಲೇ ಸೇನೆಯು ಅದಕ್ಕೆ ತಕ್ಕುದಾದ ಕಾರ್ಯತಂತ್ರ ರೂಪಿಸಿತು. ಬಳಿಕ ಆಗಸ್ಟ್ ಅಂತ್ಯದಲ್ಲಿ ಮುಖ್‌ಪರಿ, ರೆಜಾಂಗ್ ಲಾ, ರೆಚಿನ್ ಲಾ, ಗುರುಂಗ್ ಹಿಲ್, ಪ್ಯಾಂಗಾಂಗ್ ಸೋ ಸರೋವರದ ದಕ್ಷಿಣ ತಟ ಪ್ರದೇಶವನ್ನು ಆಕ್ರಮಿಸಿಕೊಳ್ಳುವಲ್ಲಿ ಸೇನೆಯು ಯಶಸ್ವಿಯಾಯಿತು.
ನಾವು ಯಾವ ಪ್ರದೇಶದಲ್ಲಿ ಮುನ್ನುಗ್ಗಬಹುದು ಎಂಬುದನ್ನು ಮೊದಲು ನಿರ್ಧರಿಸಿ. ನಂತರ ಚುಶುಲ್ ಉಪವಲಯದಲ್ಲಿನ ಪ್ರಮುಖ ಪ್ರದೇಶಗಳಲ್ಲಿ ಪ್ರಾಬಲ್ಯ ಸಾಧಿಸುವ ಮೂಲಕ ಚೀನ ಸೇನೆಗೆ ಶಾಕ್ ನೀಡಿ ಎಂದು ಮೇ ತಿಂಗ ಳಲ್ಲಿ ರಾಜಕೀಯ ನಾಯಕತ್ವವು ಸೇನಾ ಪಡೆಗಳಿಗೆ ನಿರ್ದೇಶನ ನೀಡಿತ್ತು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ನ.6ರವರೆಗೆ ಭಾರತ ಮತ್ತು ಚೀನ ನಡುವೆ 8 ಸುತ್ತುಗಳ ಮಾತುಕತೆ ನಡೆದಿದೆ. ಆರಂಭದಲ್ಲಿ ಚೀನವು ಫಿಂಗರ್ 4ರಿಂದ 8ರವರೆಗೆ ತನ್ನ ಸೇನೆಯನ್ನು ಹಿಂಪಡೆದುಕೊಳ್ಳಲು ಒಪ್ಪಿತ್ತು. ಆದರೆ, ನಂತರದಲ್ಲಿ ರಾಗ ಬದಲಿಸಿತು. ಸೆಪ್ಟೆಂಬರ್‌ನಿಂದೀಚೆಗೆ ಭಾರತೀಯ ಸೇನೆಯು ಚುಷುಲ್ ವಲಯದಿಂದ ಹಿಂದೆ ಸರಿಯಲಿ ಎಂಬ ಬೇಡಿಕೆಯನ್ನು ಚೀನ ಇಡ ತೊಡಗಿತು. ಆದರೆ, ದಕ್ಷಿಣ ಭಾಗವನ್ನು ಮೊದಲು ತೆರವುಗೊಳಿಸುವ ಪ್ರಶ್ನೆಯೇ ಇಲ್ಲ. ಸಮಸ್ಯೆಗೆ ಪರಿಹಾರವು ಪ್ಯಾಕೇಜ್ ರೀತಿಯೇ ಇರಬೇಕಾಗುತ್ತದೆ. ಎರಡೂ ಪಡೆಗಳು ಪರಸ್ಪರ ಒಪ್ಪಿಕೊಂಡು ಹಿಂದೆ ಸರಿಯುವವರೆಗೂ ನಾವು ಹಿಂದೆ ಸರಿಯಲ್ಲ ಎಂದು ಭಾರತ ಸ್ಪಷ್ಟವಾಗಿ ನುಡಿಯಿತು ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜ.ನರವಣೆ ಪ್ರವಾಸ ಶುರು
ಕೊಲ್ಲಿ ರಾಷ್ಟ್ರಗಳ ಜತೆಗೆ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಭೂಸೇನಾ ಮುಖ್ಯಸ್ಥ ಜ. ಎಂ.ಎಂ.ನರವಣೆ ಯುಎಇ, ಸೌದಿ ಅರೇಬಿಯಾಕ್ಕೆ ಆರು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಭಾರತದ ಭೂಸೇನಾ ಮುಖ್ಯಸ್ಥರು ಇದೇ ಮೊದಲ ಬಾರಿಗೆ ಎರಡು ಕೊಲ್ಲಿ ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಪಾಕಿಸ್ಥಾನ ಮತ್ತು ಚೀನಗಳು ದೇಶದ ವಿರುದ್ಧ ವಿವಿಧ ರೀತಿಯಲ್ಲಿ ಮಸಲತ್ತು ನಡೆಸಿರುವಂತೆಯೇ ಈ ಪ್ರವಾಸ ಕೈಗೊಂಡಿದ್ದಾರೆ.