ಕೆ.ಆರ್.ನಗರ: ಪಟ್ಟಣದ ಕೃಷ್ಣರಾಜೇಂದ್ರ ಕ್ರೀಡಾಂಗಣದಲ್ಲಿ ಸಾರ್ವಜನಿಕರು ಮತ್ತು ಕ್ರೀಡಾಪಟುಗಳಿಗೆ ಅಗತ್ಯ ಮೂಲಭೂತ ಸವಲತ್ತುಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.
ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಸುರೇಶ್‌ಕುಮಾರ್ ಮತ್ತು ಇತರ ಅಧಿಕಾರಿಗಳೊಂದಿಗೆ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕ್ರೀಡಾ ಸೌಲಭ್ಯ ಮತ್ತು ಭದ್ರತೆಯ ಬಗ್ಗೆ ನಿಗಾ ವಹಿಸಲು ನಮ್ಮೊಂದಿಗೆ ನಗರದ ನಾಗರಿಕರು ಅಗತ್ಯ ಸಹಕಾರ ನೀಡಬೇಕು ಎಂದರು.
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕ್ರೀಡಾಂಗಣದ ಸಮಗ್ರ ಅಭಿವೃದ್ದಿಗೆ 7 ಕೋಟಿ ರೂ. ಅಂದಾಜು ಪಟ್ಟಿಯನ್ನು ತಯಾರಿಸಿ ಆಡಳಿತಾತ್ಮಕ ಮಂಜೂರಾತಿಗಾಗಿ ಹಣಕಾಸು ಇಲಾಖೆಗೆ ಕಳುಹಿಸಿ ಕೊಡಲಾಗಿತ್ತು. ಆದರೆ, ಕಾಮಗಾರಿಗೆ ಮಂಜೂರಾತಿ ದೊರೆಯುವಷ್ಟರಲ್ಲಿ ಸರ್ಕಾರ ಪತನವಾಯಿತು. ಆದರೂ ಸರ್ಕಾರದ ಮೇಲೆ ಒತ್ತಡ ಹೇರಿ ನನ್ನ ನಿರೀಕ್ಷೆಯ ಎಲ್ಲಾ ಕೆಲಸಗಳನ್ನು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಮೊದಲನೆಯ ಹಂತದಲ್ಲಿ ಆಧುನಿಕ ಮಾದರಿಯ ಶೌಚಾಲಯ ನಿರ್ಮಾಣ, ಶುದ್ಧ ಕುಡಿಯುವ ನೀರು ಸರಬರಾಜು, ಜಿಮ್ ನವೀಕರಣ, ವಾಕ್‌ಮ್ಯಾಟ್ ಪೂರೈಕೆ, ಕ್ರೀಡಾಂಗಣದ ಸುತ್ತ ತಂತಿಬೇಲಿ ನಿರ್ಮಾಣ ಸೇರಿದಂತೆ ಇತರ ಅನೂಕೂಲಗಳನ್ನು ಕಲ್ಪಿಸಲಾಗುವುದು. ಬಳಿಕ ಹಂತ ಹಂತವಾಗಿ ಇತರ ಎಲ್ಲಾ ಸವಲತ್ತುಗಳನ್ನು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಕ್ರೀಡಾಪಟುಗಳು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಶಾಸಕರು, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ ಸುರೇಶ್‌ಕುಮಾರ್, ನಿರ್ಮಿತಿ ಕೇಂದ್ರದ ಅಭಿಯಂತರ ಮಹೇಶ್ ಮತ್ತು ಪುರಸಭಾ ಮುಖ್ಯಾಧಿಕಾರಿ ಕೆ.ಶಿವಣ್ಣ ಅವರಿಗೆ ಕೆಲವು ಸೂಚನೆಗಳನ್ನು ನೀಡಿದರು. ಕೂಡಲೇ ಅಗತ್ಯ ಕಾಮಗಾರಿಗಳಿಗೆ ಚಾಲನೆ ನೀಡಬೇಕು ಎಂದು ಆದೇಶಿಸಿದರು.
ಈ ವೇಳೆ ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ವಕ್ತಾರ ಕೆ.ಎಲ್.ರಮೇಶ್, ಪುರಸಭಾ ಸದಸ್ಯ ಕೆ.ಪಿ.ಪ್ರಭುಶಂಕರ್, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಭೋಜರಾಜು, ತಹಶೀಲ್ದಾರ್ ಎಂ.ಮಂಜುಳಾ, ತಾಪಂ ಇಒ ಎಂ.ಎಸ್.ರಮೇಶ್, ಗ್ರಾಪಂ ಅಧ್ಯಕ್ಷ ಶಿವಶಂಕರ್, ಸದಸ್ಯ ಪುಟ್ಟರಾಜು, ಜೆಡಿಎಸ್ ಮುಖಂಡರಾದ ಹರೀಶ್, ಆಯಾಜ್‌ಅಹಮದ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಇತರರಿದ್ದರು.