Advertisement
ಕಳೆದೆರಡು ವರ್ಷಗಳಲ್ಲಿ ಸರಕಾರಿ ಶಾಲೆಗಳಲ್ಲಿ 3.30 ಲಕ್ಷ ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ. ಅಂಕಿಅಂಶಗಳ ಪ್ರಕಾರ ಸರಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಯವರೆಗೆ 2017-18 ರಲ್ಲಿ. 44,575,35 ಮಂದಿ ವಿದ್ಯಾರ್ಥಿಗಳಿದ್ದರೆ 2019-20 ರಲ್ಲಿ ಅಂದರೆ ಈ ಶೈಕ್ಷಣಿಕ ವರ್ಷದಲ್ಲಿ 42,73,871ಕ್ಕೆ ಕುಸಿದಿದೆ. ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳಲ್ಲಿ 41,10,402 ಇದ್ದ ವಿದ್ಯಾರ್ಥಿಗಳ ಸಂಖ್ಯೆ 2019-20ರಲ್ಲಿ 42,73,871ಕ್ಕೆ ಏರಿದೆ. ಶಾಲೆಗಳ ಸಂಖ್ಯೆಯ ಬಗ್ಗೆ ಹೇಳುವುದಿದ್ದರೆ ಸರಕಾರಿ ಶಾಲೆಗಳು 48,690 ಇದ್ದರೆ ಖಾಸಗಿ ಶಾಲೆಗಳು 21,104 ಮಾತ್ರ. ಇದು ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯಾ ವರದಿ.
Related Articles
Advertisement
ಯಾವಾಗ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳನ್ನು ಹೊರಗಿಟ್ಟು ಸರಕಾರಿ ಶಾಲೆಗಳನ್ನು ಸುಧಾರಿಸುವ ಯೋಜನೆ ತಯಾರಿಸಲಾಯಿತೋ, ಘೋಷಣೆ ಕೂಗಲಾರಂಭಿಸಿದರೋ ಅಲ್ಲಿಂದ ಅದರ ಕುಸಿತ ಆರಂಭವಾಗಿದೆ. ಹೆಜ್ಜೆಹೆಜ್ಜೆಗೂ ಸರಕಾರಿ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳೆಂಬ ತಾರತಮ್ಯ ನೀತಿ, ಶೈಕ್ಷಣಿಕ ವ್ಯವಸ್ಥೆ ಮಾತ್ರವಲ್ಲ , ಸಾಮಾಜಿಕ ವ್ಯವಸ್ಥೆಯ ಮೇಲೂ ನಕಾರಾತ್ಮಕ ಪರಿಣಾಮ ಬೀರಿದೆ. ಸ್ಪರ್ಧಾತ್ಮಕ ಜಗತ್ತು, ಔದ್ಯೋಗಿಕ ಅವಕಾಶವೆನ್ನುತ್ತಾ ನಮ್ಮ ಶಾಲೆಗಳನ್ನೆಲ್ಲಾ ಅಂಕಾಲಯಗಳನ್ನಾಗಿ ಪರಿವರ್ತಿಸಲಾಗಿದೆ. ಅಂಕಾಧಾರಿತ ಫಲಿತಾಂಶವನ್ನೇ ಗುಣಾತ್ಮಕ ಶಿಕ್ಷಣವೆಂದು ಪರಿಗಣಿಸಲಾಯಿತು. ಹೆಚ್ಚು ಫಲಿತಾಂಶ ಅತಿ ಹೆಚ್ಚು ಅಂಕ ಪಡೆದ, ಹೆಚ್ಚು ಬಹುಮಾನ ಪಡೆದ, ಹೆಚ್ಚು ಫಸ್ಟ್ ಬಂದ ಶಾಲೆಗಳೇ ಶ್ರೇಷ್ಠವೆಂದು ಬಿಂಬಿಸಿ ಸನ್ಮಾನಿಸಲಾಯಿತು. ಇಂತಹ ಶೈಕ್ಷಣಿಕ ಅಂಶಗಳು ನಮ್ಮ ಶಾಲೆಗಳನ್ನು ಕಳಪೆಯೆಂದು ಪರಿಗಣಿಸಲು, ಆ ಮೂಲಕ ಜನರನ್ನು ಶಾಲೆಗಳಿಂದ ವಿಮುಖರನ್ನಾಗಿಸಲು ಕಾರಣವಾಯಿತು. ಕನಿಷ್ಠ ಕಲಿಕಾ ಖಾತ್ರಿಯನ್ನೇ ನೀಡಲು ವಿಫಲವಾಗಿದ್ದೇವೆ. ಸರಿಯಾಗಿ ಭಾಷೆ ಕಲಿಸಲಾರದ ಸ್ಥಿತಿಗೆ ನಮ್ಮ ಶಾಲೆಗಳು ಬಂದು ತಲುಪಿದವು. ಒಂದನೇ ತರಗತಿಯಿಂದ ಆಂಗ್ಲ ಭಾಷಾ ಕಲಿಕೆಯನ್ನು ಪರಿಣಾಮಕಾರಿಯಾಗಿಸುವಲ್ಲಿ ಸೋತೆವು.
ತರಗತಿಗೊಬ್ಬ ಶಿಕ್ಷಕರ ಕಲ್ಪನೆ ನಮಗೆ ಬರುವುದೇ ಇಲ್ಲ. ಇನ್ನೂ ಶಾಲೆಗಳಿಗೆ ಮೂಲಭೂತ ವ್ಯವಸ್ಥೆಗಳನ್ನು ಕೊಡುವಲ್ಲಿ ಎಡವುತ್ತಲೇ ಇದ್ದೇವೆ. ಕ್ರೀಡೆ, ಕಲೆಯಂತಹ ಸೃಜನಶೀಲ ಚಟುವಟಿಕೆಗಳು ಆದ್ಯತೆ ಪಡೆಯುವುದೇ ಇಲ್ಲ. ಈ ಎಲ್ಲಾ ಕೊರತೆ, ವೈಫಲ್ಯಗಳನ್ನು ಮುಚ್ಚಿಟ್ಟು ಹೇಳಿಕೆಗಳನ್ನೇ ಸುಧಾರಣೆಯೆನ್ನುವ ದುಃಸ್ಥಿತಿ ನಮ್ಮ ಶಿಕ್ಷಣ ವ್ಯವಸ್ಥೆಯದ್ದಾಯಿತು.
ಕನ್ನಡ ಶಾಲೆಗಳಲ್ಲಿ (ಸರಕಾರಿ ಮತ್ತು ಖಾಸಗಿ ಕನ್ನಡ ಮಾಧ್ಯಮ) ದಾಖಲಾತಿ ಕಡಿಮೆಯಾಗುತ್ತಿದೆಯೆಂಬ ವಿಚಾರ ಅರಿವಿಗೆ ಬಂದಾಗಲೇ ಇಲಾಖೆಯಾಗಲಿ, ಸರಕಾರವಾಗಲಿ ಎಚ್ಚೆತ್ತುಕೊಳ್ಳಬೇಕಿತ್ತು. ಮಾಧ್ಯಮ ಮತ್ತು ಶಿಕ್ಷಣದ ನಿಜ ಆಶಯಗಳನ್ನು ಅರ್ಥ ಮಾಡಿಕೊಳ್ಳದೆ ಶಿಕ್ಷಣ ನೀತಿಗಳನ್ನು ರೂಪಿಸುವವರೇ ಶಿಕ್ಷಣವನ್ನು ಉದ್ಯಮವಾಗಿಸಿದ್ದರ ಫಲ ಈಗ ಕಾಣುತ್ತಿದೆ ಅಷ್ಟೆ. ಹೂರಣದ ಬಗ್ಗೆ ಮಾತನಾಡದೆ ಆವರಣವನ್ನೇ ಬಿಗಿಗೊಳಿಸುತ್ತಾ ಬಂದು ಶಾಲೆಗಳು ದಾಖಲೆಗಳ ಮತ್ತು ವಿತರಣೆಗಳ ಕೊಠಡಿಗಳಾಗಿ, ಮಾಹಿತಿಗಳ ವಿನಿಮಯ ಕೇಂದ್ರಗಳಾಗಿ ಪರಿವರ್ತಿತವಾಯಿತು.
ಸರಕಾರಿ ಶಾಲೆಗಳಲ್ಲಿ (ಕನ್ನಡ ಶಾಲೆಗಳಲ್ಲಿ) ಸರಿಯಾಗಿ ಪಾಠ ನಡೆಯುವುದಿಲ್ಲ, ಶಿಕ್ಷಕರು ನಿತ್ಯ ತರಬೇತಿ, ವರದಿ, ಮೀಟಿಂಗ್ ಎನ್ನುತ್ತಾರೆಂಬ ಪೋಷಕರ ನಂಬುಗೆಯಿಂದಾಗಿ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿತು.
ಉನ್ನತ ಶಿಕ್ಷಣಕ್ಕೆ, ಔದ್ಯೋಗಿಕ ಅವಕಾಶಕ್ಕೆ ಆಂಗ್ಲ ಭಾಷೆ ಇದ್ದರೆ ಸುಲಭವೆನ್ನುತ್ತಾ ಅನಂತರ ಆಂಗ್ಲ ಮಾಧ್ಯಮದಲ್ಲಿ ಓದಿದರೆ ಮಾತ್ರ ಲಭ್ಯ ಎಂಬಲ್ಲಿಯವರೆಗೆ ಶೈಕ್ಷಣಿಕ ವಾತಾವರಣ ಬದಲಾಯಿತು. ಪಿ.ಯು.ಸಿ. ಹಂತಕ್ಕಾಗಲಿ, ಉನ್ನತ ಶಿಕ್ಷಣಕ್ಕಾಗಲಿ, ಸ್ಪರ್ಧಾತ್ಮಕ ಹಾಗೂ ವಿವಿಧ ಪ್ರವೇಶ ಪರೀಕ್ಷೆಗಳಿಗಾಗಿ ಕನ್ನಡ ಭಾಷೆಯನ್ನು ಜ್ಞಾನ ಶಾಖೆಯಾಗಿ, ಒಂದು ಸಲಕರಣೆಯಾಗಿ ಮತ್ತು ಮಾಧ್ಯಮವಾಗಿ ಬೆಳೆಸುವುದರಲ್ಲಿ, ಬಳಸುವುದರಲ್ಲಿ ಪೂರ್ಣ ವಿಫಲರಾಗಿದ್ದೇವೆ. ಇದಕ್ಕೆಲ್ಲ ಆಡಳಿತದ ನೀತಿಯೇ ಕಾರಣ. ಇದನ್ನು ಅರ್ಥೈಸಿಕೊಳ್ಳಲು ಬೃಹಸ್ಪತಿಜ್ಞಾನ ಬೇಕಿಲ್ಲ. ಸಾಮಾನ್ಯ ಜ್ಞಾನದ ಅರಿವಿನಿಂದ ಮೂಲಕ್ಕೆ ಚಿಕಿತ್ಸೆ ನೀಡುವ ಗಟ್ಟಿತನ ಬೇಕಾಗಿದೆ. ಅದಿಲ್ಲದೆ ಸುಧಾರಣೆಗಳನ್ನು ಮಾಡಹೊರಡುವುದೆಂದರೆ ಬಯಲಲ್ಲಿ ಬೆತ್ತಲಾದಂತೆ.
– ರಾಮಕೃಷ್ಣ ಭಟ್, ಚೊಕ್ಕಾಡಿ