ಬೆಂಗಳೂರು: ಅನುದಾನಿತ ಖಾಸಗಿ ಪ್ರೌಢಶಾಲೆಯಲ್ಲಿ ನಿಗದಿತ ಕಾರ್ಯಭಾರ ಇಲ್ಲದ ಶಿಕ್ಷಕರನ್ನು ಹೆಚ್ಚುವರಿ ಎಂದು ಗುರುತಿಸಿ, ಕಾರ್ಯಭಾರ ಇರುವ ಅನುದಾನಿತ ಪ್ರೌಢಶಾಲೆಗಳಿಗೆ ಮರು ಹೊಂದಾಣಿಕೆ ಮಾಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಆಡಳಿತ ಮಂಡಳಿ ವತಿಯಿಂದ ನಡೆಸುತ್ತಿರುವ ಹಲವು ಪ್ರೌಢಶಾಲೆಗಳಲ್ಲಿ ಹೆಚ್ಚುವರಿಯಾಗಿರುವ ಶಿಕ್ಷಕರನ್ನು ಖಾಲಿ ಇರುವ ಅವರದ್ದೇ ಪ್ರೌಢಶಾಲೆಗೆ ಜು.20ರೊಳಗೆ ಮರು ಹೊಂದಾಣಿಕೆ ಮಾಡಿಕೊಳ್ಳಬಹುದು. ಜು.25ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಹೆಚ್ಚುವರಿ ಶಿಕ್ಷಕರನ್ನು ಗುರುತಿಸಲಿದ್ದಾರೆ.
ಜು.28ರಂದು ಬಿಇಒಗಳು ಪ್ರಸ್ತಾವನೆ ಸಲ್ಲಿಸಿದ ನಂತರ, ಉಪನಿರ್ದೇಶಕರು ತಮ್ಮ ವ್ಯಾಪ್ತಿಯ ಹೆಚ್ಚುವರಿ ಶಿಕ್ಷಕರ ಹಾಗೂ ಖಾಲಿ ಹುದ್ದೆಗಳನ್ನು ಗುರುತಿಸುತ್ತಾರೆ. ಆಗಸ್ಟ್ 3ರಂದು ಜಿಲ್ಲಾ ವ್ಯಾಪ್ತಿಯ ಹೆಚ್ಚುವರಿ ಶಿಕ್ಷಕರ ಪಟ್ಟಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ಆ.8ರಂದು ಜಿಲ್ಲಾ ಮಟ್ಟದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ.
ಕೌನ್ಸೆಲಿಂಗ್ ನಡೆಸಿ ಆದೇಶ: ಆ.16ರಂದು ಉಪನಿರ್ದೇಶಕರ ಹಂತದಲ್ಲಿ ಕೌನ್ಸೆಲಿಂಗ್ ನಡೆಸಿ, ಸ್ಥಳಾಂತರಗೊಂಡ ಶಿಕ್ಷಕರಿಗೆ ಆದೇಶ ನೀಡಲಾಗುತ್ತದೆ. ಆ.19ರಂದು ಸ್ಥಳ ಹಂಚಿಕೆಯಾಗದೆ ಉಳಿದ ಹೆಚ್ಚುವರಿ ಶಿಕ್ಷಕರ ಹಾಗೂ ಖಾಲಿ ಹುದ್ದೆಯ ಮಾಹಿತಿಯನ್ನು ಪ್ರೌಢಶಿಕ್ಷಣ ನಿರ್ದೇಶಕರಿಗೆ ನೀಡಲಾಗುತ್ತದೆ.
ಆ.26ರಂದು ರಾಜ್ಯಮಟ್ಟದ ಹೆಚ್ಚುವರಿ ಶಿಕ್ಷಕರ ತಾತ್ಕಾಲಿಕ ಪಟ್ಟಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗುತ್ತದೆ. ಆ.28ರಂದು ಆಕ್ಷೇಪಣೆ ಪರಿಶೀಲಿಸಿ, ಅಂತಿಮ ಪಟ್ಟಿ ಪ್ರಕಟಿಸಲಾಗುತ್ತದೆ. ಆ.31ರಂದು ಪ್ರೌಢಶಿಕ್ಷಣ ನಿರ್ದೇಶಕರು ಕೌನ್ಸೆಲಿಂಗ್ ನಡೆಸಿ, ಸ್ಥಳಾಂತರಗೊಂಡ ಶಿಕ್ಷಕರಿಗೆ ಆದೇಶ ನೀಡಲಾಗುತ್ತದೆ.
ಹೆಚ್ಚುವರಿ ಶಿಕ್ಷಕರ ಗುರುತಿಸಿ, ಮರು ಹಂಚಿಕೆ ಸಂದರ್ಭದಲ್ಲಿ ಆಡಳಿತ ಮಂಡಳಿಯವರು ವಹಿಸಬೇಕಾದ ಕ್ರಮ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಜವಾಬ್ದಾರಿ, ಉಪ ನಿರ್ದೇಶಕರು ಮಾಡಬೇಕಾದ ಕಾರ್ಯ ಸೇರಿದಂತೆ ಯಾವೆಲ್ಲ ಹಂತದಲ್ಲಿ ಪರಿಶೀಲನೆ ನಡೆಸಿ, ಹೆಚ್ಚುವರಿ ಶಿಕ್ಷಕರನ್ನು ಗುರುತಿಸಬೇಕು ಎಂಬಿತ್ಯಾದಿ ಎಲ್ಲಾ ಮಾಹಿತಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಉಪ ನಿರ್ದೇಶಕರಿಗೆ ಇಲಾಖೆಯಿಂದ ನೀಡಲಾಗಿದೆ.