ರಾಮದುರ್ಗ: ಮುಂದಿನ ಮೂರ್‍ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಸುಭದ್ರ ಆಡಳಿತ ಹಾಗೂ ಜನಪರ ಚಿಂತನೆಗೆ ಸ್ಪಂದಿಸುವ ಸರಕಾರ ತರುವ ಶಕ್ತಿ ರಾಜ್ಯದ ಜನರ ಕೈಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದ ಹೊರವಲಯದಲ್ಲಿರುವ ಪ್ರಗತಿ ಶಾಲೆಯ ಎದುರಿನ ಮೈದಾನದಲ್ಲಿ ರವಿವಾರ ಹಮ್ಮಿಕೊಂಡಿದ್ದ ಜೆಡಿಎಸ್ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಕಳೆದ 10 ವರ್ಷಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಆಡಳಿತವನ್ನು ರಾಜ್ಯದ ಜನರು ನೋಡಿದ್ದಾರೆ. ಎರಡೂ ಪಕ್ಷಗಳ ನಾಲ್ಕು ಜನ ಮುಖ್ಯ ಮಂತ್ರಿಗಳು ಆಡಳಿತ ಯಾವ ರೀತಿ ನೀಡಿದ್ದಾರೆನ್ನುವುದು ನಿಮ್ಮ ಕಣ್ಮುಂದೆ ಇದ್ದು, ಈ ಬಾರಿ ಜೆಡಿಎಸ್ ಬೆಂಬಲಿಸುವ ಮೂಲಕ ಜನಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಬಿಜೆಪಿ ಪರಿವರ್ತನಾ ಯಾತ್ರೆ ಹಾಗೂ ಕಾಂಗ್ರೆಸ್ ಸಾಧನಾ ಸಮಾವೇಶ ಮಾಡುತ್ತಿರುವ ಎರಡೂ ರಾಷ್ಟ್ರೀಯ ಪಕ್ಷಗಳ ಮುಖಂಡರು ಜೈಲಿಗೆ ಕಳಿಸುವ ಮಾತುಗಳನ್ನಾಡುತ್ತಿದ್ದಾರೆ ಇವರೇನು ಜೈಲಿನೊಂದಿಗೆ ನೆಂಟಸ್ಥಿಕೆ ಮಾಡಲು ಹೊರಟಿದ್ದಾರಾ ಎಂದು ಪ್ರಶ್ನಿಸಿದ ಅವರು ಇವರ ಅಜೆಂಡಾಗಳಿಂದ ಸಾಮಾನ್ಯ ಜನರಿಗೇನು ಲಾಭ ಎನ್ನುವುದನ್ನು ಅರಿಯಬೇಕು ಎಂದರು.
ರಾಜ್ಯದಲ್ಲಿನ ಜನರು ನಾಲ್ಕೈದು ದಶಕಗಳಿಂದ ಮಹಾದಾಯಿಗಾಗಿ ಹೋರಾಟ ನಡೆಸುತ್ತಿದ್ದರೂ ಸಮಸ್ಯೆ ಬಗೆಹರಿಸುವ ಮಾತು ಇವರಲ್ಲಿಲ್ಲ. ಸಾಲ ಮನ್ನಾ ಮಾಡಿರುವುದಾಗಿ ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನೂ ಒಂದು ರೂಪಾಯಿ ಹಣವನ್ನು ಸಹಕಾರಿ ಸಂಘಗಳಿಗೆ ನೀಡಿಲ್ಲ. ಇವರಿಗೆ ಸಾಲ ಮನ್ನಾ ಬಗ್ಗೆ ಹೇಳಲು ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ನಿಮ್ಮ ಆಶೀರ್ವಾದದಿಂದ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮಾತ್ರವಲ್ಲ ನೇಕಾರ, ಮೀನುಗಾರರ ಸಾಲ ಮನ್ನಾ ಮಾಡಿ ಅವರನ್ನು ಋಣಮುಕ್ತಗೊಳಿಸುವುದರ ಜೊತೆಗೆ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಹಾಗೂ ನೇಕಾರರಿಗೆ ಸಿಗಬೇಕಾದ ಸೌಲಭ್ಯ ಕಲ್ಪಿಸಲಾಗುವುದು ಎಂದರು.