ಶ್ರೀನಿವಾಸಪುರ: ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ಮಾವು ವಹಿವಾಟು ನಡೆಸುವ ಬಗ್ಗೆ, ಅದಕ್ಕೆ ಬೇಕಾದ ಸಕಲ ಸಿದ್ಧತೆ, ಒಂದು ವೇಳೆ ಯಾರ್ಡ್‌ನಲ್ಲಿ ಕೋವಿಡ್ 19 ಪಾಸಿಟಿವ್ ಕಂಡು ಬಂದರೆ ಪರ್ಯಾಯ ವ್ಯವಸ್ಥೆ ಬಗ್ಗೆ ಟ್ರೇಡರ್ಸ್ ಜೊತೆ ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಚರ್ಚಿಸಿದರು.
ವರ್ತಕರು ಎಪಿಎಂಸಿನಲ್ಲಿ ವಹಿವಾಟು ನಡೆಸಬೇಕೆಂದು ಸೋಮವಾರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ ತಹಶೀಲ್ದಾರ್, ಮಾವು ಮಂಡಿಗಳ ವರ್ತಕರ ಸಭೆ ನಡೆಸಿದರು. ಈಗಾಗಲೇ ನಾಲ್ಕೈದು ಸಭೆ ನಡೆಸಲಾಗಿದೆ. ಕೋವಿಡ್ 19 ಬಗ್ಗೆ ಎಲ್ಲರಿಗೂ ಗೊತ್ತಿದೆ.
ಈಗಾಗಲೇ ಜಿಲ್ಲೆಯಲ್ಲಿ 9 ಪ್ರಕರಣ ದಾಖಲಾಗಿವೆ. ಇದರಲ್ಲಿ 7 ಮಂದಿ ವಾಹನಗಳ ಚಾಲಕರೇ ಆಗಿದ್ದಾರೆ. ಎಪಿಎಂಸಿನಲ್ಲಿ ವಹಿವಾಟು ನಡೆಸಿದರೆ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಆಂಧ್ರ, ತಮಿಳುನಾಡು ಭಾಗಗಳಿಂದ ಲಾರಿಗಳು ಬರುತ್ತವೆ. ಆದ್ದರಿಂದ ಎಪಿಎಂಸಿ ಆಡಳಿತ ತಮಗೆ ಸಹಕಾರ ನೀಡಿದರೂ ಮಂಡಿಗಳಲ್ಲಿ ವರ್ತಕರು ಎಚ್ಚರ ವಹಿಸಬೇಕು.
ಸ್ಯಾನಿಟೈಸರ್, ಮಾಸ್ಕ್ ಧರಿಸುವುದು, ಸೋಪು ಬಳಕೆ ಮಾಡಲು ಸೂಚನೆ ನೀಡಿದರು. ಇಲ್ಲಿ ರೈತರು, ವರ್ತಕರು ಬೇರೆ ಅಲ್ಲ. ಒಂದು ವೇಳೆ ಕೋವಿಡ್ 19 ಸೋಂಕು ಕಾಣಿಸಿಕೊಂಡು ಎಪಿಎಂಸಿ ಸೀಲ್ ಡೌನ್ ಆದರೆ, ಕಾಯಿ ಕಿತ್ತು ತಂದವರಿಗೂ, ವರ್ತಕರಿಗೂ ಸಮಸ್ಯೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಪರ್ಯಾ ಯವಾಗಿ ವಹಿವಾಟು ನಡೆಸಲು ಸಾಧ್ಯ ವಾಗುತ್ತದೆಯೇ ಎಂದು ಪ್ರಶ್ನಿಸಿದರು.
ಯಾವುದೇ ಸಂದರ್ಭದಲ್ಲಿ ಸರ್ಕಾರ ದ ಸೂಚನೆಗೆ ಎಲ್ಲರೂ ಬದ್ಧರಾಗಿ ನಡೆದುಕೊಳ್ಳಬೇಕೆಂದು ತಹಶೀಲ್ದಾರರು ತಿಳಿಸಿದರು. ಎಪಿಎಂಸಿ ಅಧ್ಯಕ್ಷ ಎನ್. ರಾಜೆಂದ್ರಪ್ರಸಾದ್, ಇಒ ಎಸ್.ಆನಂದ್, ಸಿಪಿಐ ರಾಘವೇಂದ್ರ ಪ್ರಕಾಶ್, ಪುರಸಭೆ ಮುಖ್ಯಾಧಿಕಾರಿ ವಿ.ಮೋಹನ್‌ಕುಮಾರ್, ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಶ್ರೀನಿವಾಸ್, ನಿರ್ದೇಶಕರು ಇದ್ದರು.