Advertisement

ಸರ್ಕಾರ ನಿಮ್ಮೊಂದಿಗಿದೆ, ಆತ್ಮಹತ್ಯೆ ಮಾಡ್ಕೊಬೇಡಿ

12:43 PM Nov 17, 2018 | Team Udayavani |

ಬೆಂಗಳೂರು: ರೈತರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ಸದಾ ರೈತರೊಂದಿಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆ ನಿರ್ಧಾರ ಕೈಗೊಳ್ಳಬಾರದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಮನವಿ ಮಾಡಿದರು.

Advertisement

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಯೋಜಿಸಿರುವ “ಕೃಷಿಮೇಳ-2018’ರ ಎರಡನೇ ದಿನ ನಡೆದ ಯಶಸ್ವಿ ರೈತರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಿಗದಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗಿಲ್ಲ. ಇದರಿಂದ ಸುಮಾರು 100 ತಾಲೂಕುಗಳಲ್ಲಿ ಬರದ ಛಾಯೆ ಆವರಿಸಿದೆ. ಆ ಹಿನ್ನೆಲೆಯಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಸರ್ಕಾರ ನಿಮ್ಮೊಂದಿಗಿದ್ದು, ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ತೆಗೆದುಕೊಳ್ಳಬಾರದು ಎಂದರು. 

ಕೃಷ್ಣ ಹಾಗೂ ಘಟಪ್ರಭಾ ನದಿಗಳಿಗೆ ಬ್ಯಾರೇಜ್‌ ನಿರ್ಮಿಸಿ ನೀರಾವರಿ ಸೌಲಭ್ಯ ಕಲ್ಪಿಸಿದ್ದರಿಂದ ಆ ಭಾಗದ ರೈತರು ಆರ್ಥಿಕವಾಗಿ ಸಬಲರಾಗಿದ್ದಾರೆ. ಸುಮಾರು 45 ಸಾವಿರ ಎಕರೆ ಜಾಗದಲ್ಲಿ ಕೃಷಿ ಚಟುವಟಿಕೆಗಳು ನಡೆಯುತ್ತಿದ್ದು, ಉಳಿದ ಜಿಲ್ಲೆಗಳಿಗೂ ನೀರಾವರಿ ಸೌಲಭ್ಯ ಒದಗಿಸಿದರೆ ರೈತರು ಆರ್ಥಿಕವಾಗಿ ಅಭಿವೃದ್ಧಿಯಾಗಲಿದ್ದಾರೆ ಎಂದು ಹೇಳಿದರು.

ಕೃಷಿಕರು ಹಾಗೂ ವಿಜ್ಞಾನಿಗಳಿಂದ ಭಾರತ ಇಂದು ಆಹಾರ ಉತ್ಪನ್ನಗಳ ಉತ್ಪಾದನೆಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ. 1960ರಲ್ಲಿ ದೇಶದಲ್ಲಿ ಅಗತ್ಯದಷ್ಟು ಆಹಾರ ಉತ್ಪನ್ನಗಳಿಲ್ಲದೆ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಸ್ಥಿತಿ ಇತ್ತು. ಆದರಿಂದು ಅದಕ್ಕೆ ಮೂರು ಪಟ್ಟು ಉತ್ಪನ್ನಗಳನ್ನು ರಪು¤ ಮಾಡುವ ಸಾಮರ್ಥ್ಯವನ್ನು ಭಾರತ ಪಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ಚಾಮರಾಜನಗರ ಹಾಗೂ ಮೈಸೂರು ಭಾಗದ ಯಶಸ್ವಿ ರೈತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಸಂಸದ ಮುದ್ದಹನುಮೇಗೌಡ, ಕೃಷಿ ವಿಶ್ವವಿದ್ಯಾಲಯದ ಡೀನ್‌ (ಸ್ನಾತಕೋತ್ತರ) ಡಾ.ಬಿ.ಎನ್‌.ಸತ್ಯನಾರಾಯಣ, ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣಗೌಡ, ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌ ಸೇರಿದಂತೆ ಪ್ರಮುಖರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next