Advertisement

Education: ಪ್ರತಿಭಾ ಕಾರಂಜಿ, ಕ್ರೀಡಾ ಚಟುವಟಿಕೆ ಪ್ರತ್ಯೇಕ ಆಯೋಜನೆಗೆ ಸರಕಾರ ಚಿಂತನೆ

10:35 PM Dec 24, 2023 | Team Udayavani |

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರತಿಭಾ ಕಾರಂಜಿ ಮತ್ತು ಕ್ರೀಡಾ ಚಟುವಟಿಕೆಯನ್ನು ಪ್ರತ್ಯೇಕ ಅವಧಿಯಲ್ಲಿ ಸಂಘಟಿಸುವ ಪ್ರಸ್ತಾವ ಶಿಕ್ಷಣ ಇಲಾಖೆ ಮುಂದಿದೆ.
ಸದ್ಯದ ವೇಳಾಪಟ್ಟಿಯಂತೆ ರಾಜ್ಯದಲ್ಲಿ ಜೂನ್‌ನಲ್ಲಿ ಕ್ರೀಡಾ ಚಟುವಟಿಕೆಗಳು ಮತ್ತು ಜುಲೈ ತಿಂಗಳಿನಿಂದ ಪ್ರತಿಭಾ ಕಾರಂಜಿ ಆರಂಭಗೊಳ್ಳುತ್ತವೆ. ಈ ಎರಡು ಚಟುವಟಿಕೆಗಳ ಜತೆಗೆ ಪಠ್ಯ ಚಟುವಟಿಕೆಗಳು, ಮಳೆಯ ಕಾರಣದಿಂದ ಸಿಗುವ ರಜೆಗಳು, ದಾಖಲಾತಿ ಪ್ರಕ್ರಿಯೆ ಹೀಗೆ ಜೂನ್‌ನಿಂದ ಅಕ್ಟೋಬರ್‌ವರೆಗಿನ ಶೈಕ್ಷಣಿಕ ಅವಧಿಯಲ್ಲಿ ಮಕ್ಕಳ ಶೈಕ್ಷಣಿಕ ಚಟುವಟಿಕೆ ಹೆಚ್ಚು ಒತ್ತಡದಿಂದ ಕೂಡಿರುತ್ತದೆ.

Advertisement

ಜತೆಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳಿಗೆ ಈ ಎರಡೂ ಚಟುವಟಿಕೆಯನ್ನು ಸರಿದೂಗಿಸಿಕೊಂಡು, ಪಠ್ಯ ಚಟುವಟಿಕೆಯನ್ನು ನಿರ್ವಹಿಸುವ ಅನಿವಾರ್ಯತೆ ಸೃಷ್ಟಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷದ ಮೊದಲ ಭಾಗದಲ್ಲಿ ಕ್ರೀಡಾ ಚಟುವಟಿಕೆ ಮತ್ತು ಎರಡನೇ ಭಾಗದಲ್ಲಿ ಪ್ರತಿಭಾ ಕಾರಂಜಿ ಆಯೋಜಿಸಿದರೆ ಹೇಗೆ ಎಂಬ ಬಗ್ಗೆ ಶಿಕ್ಷಣ ಇಲಾಖೆಯಲ್ಲಿ ಚಿಂತನೆ ನಡೆಯುತ್ತಿದೆ.

ವಾಲಿಬಾಲ್‌, ಕಬಡ್ಡಿ, ಹ್ಯಾಂಡ್‌ಬಾಲ್‌, ತ್ರೋಬಾಲ್‌, ಫ‌ುಟ್ಬಾಲ್‌, ಕೊಕೊ ಮುಂತಾದ ಪಂದ್ಯಾಟಗಳು, ವಿವಿಧ ಮಟ್ಟದ ಓಟಗಳು, ಚಾವೆಲಿನ್‌, ಶಾಟ್‌ಪುಟ್‌ ಮುಂತಾದವುಗಳಲ್ಲಿ ರಾಷ್ಟ್ರಮಟ್ಟದ ಸ್ಪರ್ಧೆ ಇರುವುದರಿಂದ ನಿಗದಿತ ಅವಧಿಯೊಳಗೆ ರಾಜ್ಯಮಟ್ಟದ ತನಕ ಸ್ಪರ್ಧೆಗಳು ಮುಕ್ತಾಯಗೊಳ್ಳುತ್ತವೆ.

ಆದರೆ ಆಗಸ್ಟ್‌ನಲ್ಲಿ ಆರಂಭ ಗೊಳ್ಳುವ ಪ್ರತಿಭಾ ಕಾರಂಜಿ ಸ್ಪರ್ಧೆಯ ಅಂತಿಮ ಹಂತವಾದ ರಾಜ್ಯಮಟ್ಟದ ಸ್ಪರ್ಧೆ ಇನ್ನೂ ಮುಕ್ತಾಯಗೊಂಡಿಲ್ಲ. ಇದಕ್ಕೆ ವೇಳಾಪಟ್ಟಿಯನ್ನು ಸರಿ ಯಾಗಿ ಪಾಲಿಸದಿರುವುದೇ ಕಾರಣ.

ಆದ್ದರಿಂದ ಕಟ್ಟುನಿಟ್ಟಾಗಿ ಸಮಯ ಪಾಲನೆ ಮಾಡಿದರೆ ನವೆಂಬರ್‌ನಿಂದ ವಲಯ ಮಟ್ಟದ ಪ್ರತಿಭಾ ಕಾರಂಜಿಯನ್ನು ಆರಂಭಿಸಿ ಜನವರಿ 15ರೊಳಗೆ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯನ್ನು ಮುಕ್ತಾಯಗೊಳಿಸಲು ಸಾಧ್ಯ ಎಂಬ ಅಭಿಪ್ರಾಯ ಶಿಕ್ಷಣ ಇಲಾಖೆಯಲ್ಲಿದೆ.

Advertisement

ಈ ಹಿನ್ನೆಲೆಯಲ್ಲಿ ಮೊದಲಾರ್ಧ ದಲ್ಲಿ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ, ದ್ವಿತೀಯಾರ್ಧದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ನಡೆಸುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ಶಿಕ್ಷಣ ಇಲಾಖೆ ಮಟ್ಟದಲ್ಲಿ ನಡೆಯುತ್ತಿದೆ.

ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಶೈಕ್ಷಣಿಕ ಭಾಗದ ಆರಂಭದ ತಿಂಗಳಿನಲ್ಲಿ ಹಲವು ಚಟುವಟಿಕೆಗಳನ್ನು ನಿರ್ವಹಿಸುವ ಒತ್ತಡ ಇರುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಭಾ ಕಾರಂಜಿಯನ್ನು ಎರಡನೇ ಭಾಗದಲ್ಲಿ ಆಯೋಜಿಸಿದರೆ ಒಳ್ಳೆಯದು. ಈ ಬಗ್ಗೆ ನಾವು ಶಾಲಾ ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದೇವೆ. ಶಿಕ್ಷಣ ಇಲಾಖೆಯಿಂದ ಧನಾತ್ಮಕ ಸ್ಪಂದನೆ ಸಿಗುವ ನಿರೀಕ್ಷೆಯಿದೆ.
– ಚಂದ್ರಶೇಖರ್‌ ನುಗ್ಗಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next