Advertisement

ಬೆಸ್ತರ ಪತ್ತೆ ಹೊಣೆ ಸರ್ಕಾರದ್ದು

12:30 AM Jan 17, 2019 | Team Udayavani |

ಕಳೆದ ಕೆಲವಾರು ದಿನಗಳಿಂದ ಮೀನುಗಾರರಲ್ಲಿ ಮೂಡಿದ್ದ, ಆತಂಕ, ದುಃಖ ದುಮ್ಮಾನ ಇನ್ನೂ ಬಗೆಹರಿದಿಲ್ಲ. ಆ ಆತಂಕ, ದುಃಖ ದಿನಕಳೆದಂತೆ ಆಕ್ರೋಶಗಳಾಗಿ ಬದಲಾಗುತ್ತಿದೆ. ಬಾಳಿ ಬದುಕಬೇಕಾಗಿದ್ದ ಯುವ ಜೀವಗಳು ತೂಗುಯ್ನಾಲೆಯಲ್ಲಿ ಜೋಕಾಲಿ ಆಡಿದಂತೆ ಇನ್ನೂ ನೇತಾಡುತ್ತಲೇ ಇವೆ. ಇಂದು ಸಿಕ್ಕೀತು, ನಾಳೆ ಸಿಕ್ಕೀತು ಎಂಬ ಕಾತರ ಹೆಚ್ಚುತ್ತಿದೆ. ಮನೆಯವರ, ತಂದೆ, ತಾಯಿ, ಹೆಂಡತಿ, ಮಕ್ಕಳ ದುಃಖದ ಕಡಲು ದಿನೇ ದಿನೇ ಉಕ್ಕುತ್ತಿದೆ. ಅವರಿಗೆ ಸಾಂತ್ವನ ಹೇಳ ಹೊರಟ ಧ್ವನಿಗಳು ಅಡಗುತ್ತಿವೆ. ಪ್ರತಿಭಟನೆಯ ಅಸ್ತ್ರಗಳು ಬೀದಿಗಿಳಿಯುವಂತೆ ಮಾಡುತ್ತಿದೆ. ಕೇಂದ್ರ, ರಾಜ್ಯ ಸರಕಾರ ಇನ್ನೂ ಈ ಬಗ್ಗೆ ಸ್ಪಷ್ಟ ನಿಲುವುಗಳನ್ನು ವ್ಯಕ್ತ ಪಡಿಸುತ್ತಿಲ್ಲ. ಕಳೆದ ಕೆಲವು ದಿನಗಳಿಂದ ಕಂಡ ಕಂಡವರ ಮನೆ ಬಾಗಿಲುಗಳಿಗೆ ಅಲೆದಾಡುವ ಪರಿಸ್ಥಿತಿ ಮೀನುಗಾರ ಮುಖಂಡರ ಪಾಲಿಗೆ ಒದಗಿದೆ. ಅದು ಕೇಂದ್ರ ಸರಕಾರದ ಮಂತ್ರಿಗಳಿರಬಹುದು, ಸಂಸದರಿರಬಹುದು, ರಾಜ್ಯ ಸರಕಾರದ ಶಾಸಕರು, ಮಂತ್ರಿಗಳಿರಬಹುದು, ತಮ್ಮವರ ಬಿಡುಗಡೆಗಾಗಿ ಅಂಗಲಾಚುತ್ತಿದೆ. ತಮ್ಮ ಬೇಡಿಕೆಯನ್ನು ಈಡೇರಿಸುವರೆಂಬ ಭರವಸೆಯೊಂದಿಗೆ ಜಿಲ್ಲಾಧಿಕಾರಿಗಳು, ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ದಿನನಿತ್ಯದ ಕಾಯಕವೆಂಬಂತೆ ಭೇಟಿಯಾಗುತ್ತಿದ್ದಾರೆ. ಅವರಿಂದ ಕೇವಲ ಭರವಸೆಯ ಮಾತು ಮಾತ್ರ. ಬಡ ಮೀನುಗಾರರ ನೋವು ಅವರಿಗೆ ತಟ್ಟುವುದಿಲ್ಲ. ಅವರು ರೈತರ ಮಕ್ಕಳಾಗಿರುತ್ತಿದ್ದರೆ ಅವರೂ ತಕ್ಷಣ ಎಚ್ಚೆತ್ತುಕೊಳ್ಳುತ್ತಿದ್ದರು. ಇಡೀ ಸರಕಾರಿ ವ್ಯವಸ್ಥೆ ಅವರ ಬೆಂಬಲಕ್ಕೆ ನಿಲ್ಲುತ್ತಿತ್ತು. ಕೆಲವೇ ದಿನಗಳಲ್ಲಿ ಅವರ ಬೇಡಿಕೆ ಈಡೇರುತ್ತಿತ್ತು. ಮೀನುಗಾರರು ರೈತರಂತೆ ಹೊಲ ಗದ್ದೆಗಳಲ್ಲಿ ದುಡಿಯುವವರಲ್ಲದಿದ್ದರೂ, ಅವರಷ್ಟು ಸಂಖ್ಯೆ, ರಾಜಕೀಯ ಬೆಂಬಲ ಅವರಲ್ಲಿಲ್ಲದಿದ್ದರೂ ಅವರೂ ಮನುಷ್ಯರೇ. ಬೆಳ್ಳಂಬೆಳಗ್ಗೆ 4 ಗಂಟೆಗೆ ಎದ್ದು, ಒಂದರ ಹಿಂದೆ ಒಂದರಂತೆ ಏರಿ ಬರುವ ತೆರೆಗಳನ್ನು ಸಾಹಸದಿಂದ ದಾಟಿ ಸಾಗರದಲ್ಲಿ ಇರುವ ಮೀನುಗಳನ್ನು ಹಿಡಿದು ತರುವ ಕಷ್ಟ ಜೀವಿಗಳು. ಸಮುದ್ರಕ್ಕೆ ಇಳಿದ ಮೇಲೆ ಹಿಂದೆ ಬರುವರೆಂಬ ಭರವಸೆ ಇಲ್ಲ. ಎಷ್ಟೋ ಸಲ ಹೀಗೆಯೇ ಆಗಿದೆ. ಅವರ ಬದುಕೇ ಹಾಗೇ ನೀರ ಮೇಲಿನ ಗುಳ್ಳೆಯ ಹಾಗೆ.

Advertisement

ಆಳ ಸಮುದ್ರ ಮೀನುಗಾರಿಕೆಯ “ಸುವರ್ಣ ತ್ರಿಭುಜ’ ಎಂಬ ಬೋಟು ಮಲ್ಪೆಯ ಕಡಲ ತೀರದಿಂದ ಹೊರಟು ಹೋಗಿ ತಿಂಗಳಾದರೂ ಇನ್ನೂ ಪತ್ತೆಯಾಗಿಲ್ಲ. ಮಲ್ಪೆಯ ಇಬ್ಬರು, ಉತ್ತರ ಕನ್ನಡದ ಐವರು ಈ ದೋಣಿಯಲ್ಲಿದ್ದರು. ಆ ಮೀನುಗಾರರು ಏನಾದರು, ಎಲ್ಲಿ ಹೋದರು ಎಂಬ ಪತ್ತೆಯೇ ಇಲ್ಲ. ಕನಿಷ್ಠ ದೋಣಿಯ ಅವಶೇಷವಾದರೂ ಪತ್ತೆಯಾಗಿಲ್ಲ. ಸರಕಾರದ ಬೊಕ್ಕಸಕ್ಕೆ ಲಕ್ಷ ಕೋಟಿಗಳಲ್ಲಿ ಉತ್ಪತ್ತಿ ಮಾಡಿಕೊಡುವ ಈ ಮೀನುಗಾರರು ಸರಕಾರಕ್ಕೆ ಏನೂ ಅಲ್ಲ. ಆಧುನಿಕ ತಂತ್ರಜ್ಞಾನದ ಈ ಪ್ರಸ್ತುತ ಪರಿಸ್ಥಿತಿಯಲ್ಲಿ ಸರಕಾರವು ಕೈ ಚೆಲ್ಲಿ ಕುಳಿತಿದೆ. ಕೋಸ್ಟ್‌ಗಾರ್ಡ್‌ ಬೋಟುಗಳು, ಕಸ್ಟಮ್ಸ್‌ ಬೋಟುಗಳು, ಭಾರತೀಯ ನೌಕಪಡೆಯ ಬೋಟುಗಳು ಕಾರ್ಯಾಚರಣೆ ಆರಂಭಿಸಿದರೂ ಯಾವ ಪ್ರಯೋಜನವೂ ಆಗಿಲ್ಲ. ಸಪ್ತ ಸಾಗರವನ್ನು ದಾಟಿ, ಅಲ್ಲಿರುವ ಎಂತಹ ವಸ್ತುಗಳನ್ನೂ ಹೆಕ್ಕಿ ತರುವ ಸಾಮರ್ಥ್ಯವಿರುವ ಈ ಆಧುನಿಕ ತಂತ್ರಜ್ಞಾನದ ಬೋಟು, ಹಡಗುಗಳಿಗೆ ಮೀನುಗಾರರನ್ನು ಮತ್ತು ಅವರ ದೋಣಿಯನ್ನು ಪತ್ತೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದೇ ಆಶ್ಚರ್ಯದ ಸಂಗತಿ. ಉಳಾಲದಿಂದ ಕಾರವಾರದ ತನಕ ವ್ಯಾಪಿಸಿರುವ ಕರ್ನಾಟಕ ಕರಾವಳಿಯ ಮೀನುಗಾರರ ಬದುಕೇ ಅತಂತ್ರ ಸ್ಥಿತಿಯಲ್ಲಿದೆ. ಈಗ ಮೀನುಗಾರರು ತಮ್ಮ ಬದುಕಿಗಾಗಿ, ತಮ್ಮ ಆತ್ಮಸ್ಥೈರ್ಯಕ್ಕಾಗಿ, ತಮ್ಮ ಅಸ್ತಿತ್ವಕ್ಕಾಗಿ ನ್ಯಾಯಯುತ ಬೇಡಿಕೆಗಾಗಿ ಹೋರಾಟ ಮಾಡುವ ಪರಿಸ್ಥಿತಿ ಒದಗಿ ಬಂದಿವೆ. ಇಂದು “ಸುವರ್ಣ ತ್ರಿಭುಜ’ ಬೋಟಿಗೆ, ನಾಳೆ ಇನ್ನೊಂದು ಬೋಟಿಗೆ ಇದೇ ಪರಿಸ್ಥಿತಿ ಒದಗಿದರೆ ಮೀನುಗಾರರ ಪಾಡೇನು? ಕಡಲುಗಳ್ಳರ, ನೆರೆರಾಜ್ಯದವರ ಉಪಟಳ ಎದುರಿಸುತ್ತಿರುವ ಈ ಮೀನುಗಾರರ ಬದುಕೇ ಒಂದು ಹೋರಾಟ. ಕರ್ನಾಟಕದ ಗಡಿ ದಾಟಿ ಗೋವಾ, ಮಹಾರಾಷ್ಟ್ರದ ಕಡೆ ಹೋದರೆ, ಅತ್ತ ಕೇರಳ, ತಮಿಳುನಾಡು ಗಡಿ ದಾಟಿದರೆ ಈ ಅಪಾಯ ತಪ್ಪಿದ್ದಲ್ಲ. ಇದು ಹೀಗೆಯೇ ಆಗಿರಬೇಕು. ಕರ್ನಾಟಕದ ಮೀನುಗಾರರು ವಿಶಾಲ ಹೃದಯದವರು. ಅವರನ್ನು ಯಾವುದೇ ಕಾರಣಕ್ಕೂ ದಂಡಿಸುವುದಿಲ್ಲ. 7 ಜನರಿರುವ ಈ ಬೋಟಿನ ಮಾಲಕ ಸಹಿತ ಕೆಲಸಗಾರರ ನೆರವಿಗಾಗಿ ಸಹಾಯಹಸ್ತ ಬೇಡುತ್ತಿದ್ದಾರೆ. ಮೂರು ಜಿಲ್ಲೆಯ ಮೀನುಗಾರರೆಲ್ಲ ಒಟ್ಟು ಸೇರಿ ಮಲ್ಪೆಯಲ್ಲಿ ಈ ಬಗ್ಗೆ ಹೋರಾಟದ ಧ್ವನಿ ಎತ್ತಿದ್ದಾರೆ. ತಮ್ಮ ಕಷ್ಟಗಳ ಬಗ್ಗೆ ಸರಕಾರದ ಗಮನ ಸೆಳೆದಿದ್ದಾರೆ. ಮೀನುಗಾರರ ಶಾಸಕರು, ಮುಖಂಡರುಗಳು, ವಿವಿಧ ರಾಜಕೀಯ ಪಕ್ಷದ ಶಾಸಕರು, ಸಂಸದರು ಕೈ ಜೋಡಿಸಿದ್ದಾರೆ. ಕಳೆದು ಹೋದ ಮೀನುಗಾರರ ಮನೆಯವರಿಗೆ ಸಾಂತ್ವನ ಹೇಳಿದ್ದಾರೆ. ಮೀನುಗಾರರ ನಿಯೋಗವೊಂದು ಪ್ರಧಾನಮಂತ್ರಿಯನ್ನು ಭೇಟಿಯಾಗಿದೆ. 

ಕರ್ನಾಟಕದಲ್ಲಿ ಮೀನುಗಾರಿಕೆ ಮಾಡುವ ಪರ್ಶಿಯನ್‌ , ಟ್ರಾಲ್‌ಬೋಟ್‌, ಹಿಲ್‌ನೆಟ್‌, ಸಾಂಪ್ರದಾಯಿಕ ಮೀನುಗಾರಿಕೆಯ ನಾಡದೋಣಿ ಈ ಎಲ್ಲ ಮೀನುಗಾರರು ಸೆಟೆದು ನಿಂತಿದ್ದಾರೆ. ಹಿಂದೊಮ್ಮೆ ಎಂಆರ್‌ಪಿಎಲ್‌ ಹೋರಾಟ ನೋಡಿದವರಿಗೆ ಗೊತ್ತಾಗಬಹುದು, ಮೀನುಗಾರರ ಶಕ್ತಿ ಎಂತಹದು ಎಂದು. ಇಡೀ ದೇಶವೇ ಬೆಚ್ಚಿ ಬೀಳುವಂತೆ ಮಾಡಿದ ಆ ಮೀನುಗಾರರ ಶಕ್ತಿ ಪ್ರದರ್ಶನದ ಕಾಲ ಸನ್ನಿಹಿತವಾಗುತ್ತಿದೆ. ಮೀನುಗಾರರು ಕೇವಲ ಓಟು ಬ್ಯಾಂಕುಗಳಲ್ಲ. ಅವರ ತಾಳ್ಮೆಗೂ ಒಂದು ಮಿತಿಯಿದೆ ಎಂದು ತೋರಿಸಿಕೊಡುವ ಸಮಯ ಬಂದಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸ್ವಯಂ ಇಚ್ಛಾಶಕ್ತಿಯು ಅವರಲ್ಲಿದೆ. ಸರಕಾರವು ಇತ್ತ ಕಡೆ ಗಮನ ಹರಿಸಿ, ಅವರಿಗೆ ಬಂದ ಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯ ಪ್ರವರ್ತವಾಗಲಿ. 

ಯೋಗೀಶ್‌ ಕಾಂಚನ್‌, ಬೈಕಂಪಾಡಿ

Advertisement

Udayavani is now on Telegram. Click here to join our channel and stay updated with the latest news.

Next