ಮೈಸೂರು: ಗ್ಯಾರೆಂಟಿ ವಿಚಾರದಲ್ಲಿ ನಮಗೆ ಬದ್ಧತೆ ಇತ್ತು. ಹೀಗಾಗಿ ಅವುಗಳ ಜಾರಿ ಕಠಿಣವಾಗಿಲಿಲ್ಲ. ಮಾತು ಕೊಟ್ಟಂತೆ ಗ್ಯಾರೆಂಟಿಗಳ ಜಾರಿ ಮಾಡುತ್ತಿದ್ದೇವೆ. ಖುದ್ದು ಪಿಎಂ ಕೂಡ ಗ್ಯಾರೆಂಟಿಗಳ ಬಗ್ಗೆ ಆರೋಪ ಮಾಡುತ್ತಿದ್ದರು. ಆದರೆ ಸರ್ಕಾರ ರಾಜ್ಯ ಯಾವ ದಿವಾಳಿಯೂ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲವನ್ನೂ ವ್ಯವಸ್ಥಿತವಾಗಿ ಜಾರಿ ಮಾಡುತ್ತಿದ್ದೇವೆ. ಗೃಹ ಲಕ್ಷ್ಮೀ ಯೋಜನೆಗೆ ವಾರ್ಷಿಕ 32 ಸಾವಿರ ಕೋಟಿ ಖರ್ಚಾಗುತ್ತದೆ. ದೇಶದ ಇತಿಹಾಸದಲ್ಲೇ ಒಂದು ಯೋಜನೆ ಇಷ್ಟು ದೊಡ್ಡ ಪ್ರಮಾಣದ ಹಣ ಖರ್ಚು ಮಾಡುತ್ತಿರುವುದು ಇದೇ ಮೊದಲು ಎಂದರು.
ಇದನ್ನೂ ಓದಿ:Naga Chaitanya: ಮಾಜಿ ಪತ್ನಿ ಸಮಂತಾರ ʼಖುಷಿʼ ಟ್ರೇಲರ್ ನೋಡಿ ಥಿಯೇಟರ್‌ನಿಂದ ಹೊರನಡೆದ ಚೇ?
ಬಿಜೆಪಿಯಿಂದ ಇಂದು ಚಾರ್ಜ್ ಶೀಟ್ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ನಾಲ್ಕು ವರ್ಷ ಅಧಿಕಾರದಲ್ಲಿದ್ದರು. ಭ್ರಷ್ಟಾಚಾರದಲ್ಲೇ ಇವರು ಅಧಿಕಾರ ನಡೆಸಿದ್ದರು. ನಮ್ಮ ಮೇಲೆ ಆರೋಪ ಮಾಡುವ ನೈತಿಕತೆ ಅವರಿಗಿಲ್ಲ. ಅವರು ಅಧಿಕಾರದಲ್ಲಿ ಇದ್ದಾಗ ಹಲವು ಹಗರಣಗಳಾಗಿದ್ದವು. ಇದರ ಮರು ತನಿಖೆ ಮಾಡಲು ನಮ್ಮ ಸರ್ಕಾರ ಮುಂದಾಗಿದೆ ಎಂದರು.
ಅವರ ಸರ್ಕಾರದ ಎಲ್ಲಾ ಹಗರಣಗಳ ಬಗ್ಗೆಯೂ ತನಿಖೆ ಮಾಡುತ್ತೇವೆ. ಇದರಲ್ಲಿ ಟಾರ್ಗೆಟ್ ಎಂಬ ಪ್ರಶ್ನೆಯೇ ಇಲ್ಲ. ಪಿಎಸ್ಐ ಹಗರಣ, 40% ಹಗರಣ, ಕೋವಿಡ್ ಹಗರಣ ಎಲ್ಲದನ್ನೂ ತನಿಖೆಗೆ ಒಳಪಡಿಸಿದ್ದೇವೆ. ಹಗರಣದ ಬಗ್ಗೆ ತನಿಖೆ ಮಾಡಿಸಿದೆ ಇವರು ತಿಂದುಕೊಂಡು ಹಾಗೇ ಹೋಗಲಿ ಎಂದು ಬಿಡಬೇಕೇ?ಅವರ ಕಾಲದಲ್ಲೇ ಹಗರಣ ತನಿಖೆಗೆ ಆಗ್ರಹಿಸಿದ್ದೇವೆ. ಅವರು ತನಿಖೆ ಮಾಡಿಸಲಿಲ್ಲ. ನಾವು ತನಿಖೆ ಮಾಡಿಸುತ್ತಿದ್ದೇವೆ ಎಂದರು.