ಹೊಸದಿಲ್ಲಿ: ಸಣ್ಣ ಯೋಜನೆ ಉಳಿತಾಯದಾರರಿಗೆ ಸರಕಾರ ಶಾಕಿಂಗ್ ಸುದ್ದಿ ನೀಡಿದ್ದು, ಜನವರಿ-ಮಾರ್ಚ್ ತ್ತೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಶೀಘ್ರ ಪ್ರಕಟಿಸುವ ಮುನ್ಸೂಚನೆ ನೀಡಿದೆ.
ಅಂಚೆ ಇಲಾಖೆಯಡಿಯಲ್ಲಿ ಬರುವ ಹಲವಾರು ಉಳಿತಾಯ ಖಾತೆ ಯೋಜನೆಗಳ ಬಡ್ಡಿ ದರ ಇಳಿಕೆಯಾಗುವ ಸಾಧ್ಯತೆ ಇದ್ದು, ಸಾಮಾನ್ಯವಾಗಿ ಪ್ರತಿ ತ್ತೈಮಾಸಿಕ ಶುರುವಾಗುವುದಕ್ಕೆ ಮುಂಗಡವೇ ಸರಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪ್ರಕಟಿಸುತ್ತದೆ ಎನ್ನಲಾಗುತ್ತಿದೆ.
ಬಹುತೇಕ ವಾಣಿಜ್ಯ ಬ್ಯಾಂಕ್‌ಗಳ ನಿಶ್ಚಿತ ಬಡ್ಡಿ ದರ ವಾರ್ಷಿಕ ಶೇ.6.25ರಿಂದ ಶೇ.6.50ರ ವ್ಯಾಪ್ತಿಯಲ್ಲಿದ್ದು, ಅಂಚೆ ಇಲಾಖೆಯ ಬಡ್ಡಿ ದರ ವಾರ್ಷಿಕ ಶೇ.7.5ರ ವ್ಯಾಪ್ತಿಯಲ್ಲಿದೆ. ಇವೆರಡರ ನಡುವೆ ವ್ಯತ್ಯಾಸ ಇರುವುದರಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಇಳಿಕೆ ಮಾಡಲಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರೊಂದಿಗೆ ರಾಷ್ಟ್ರೀಯ ಉಳಿತಾಯ ಪತ್ರ(ಎನ್‌ಎಸ್‌ಸಿ), ಕೆವಿಪಿ, ಪಿಪಿಎಫ್ ಇತ್ಯಾದಿಗಳ ಬಡ್ಡಿ ದರ ಶ್ರೇಣಿಯು ಪ್ರಕಟವಾಗಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಉಳಿತಾಯ ಯೋಜನೆಗಳಾದ ಕಿಸಾನ್ ವಿಕಾಸ್ ಪತ್ರ, ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಗಳ ಮೇಲಿನ ಬಡ್ಡಿದರಲ್ಲಿ ಶೇ.0.10ರಷ್ಟು ಕಡಿತಗೊಳ್ಳಲಿದೆ ಎಂದು ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಶೇ.8ರಿಂದ ಶೇ.7.9ಕ್ಕೆ ಇಳಿಸಲಾಗುತ್ತದೆ. ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರವನ್ನು ಶೇ.8.5ರಿಂದ ಶೇ.8.4ಕ್ಕೆ ಇಳಿಕೆ ಮಾಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖ ಮಾಡಲಾಗಿದೆ.