ಕಾಸರಗೋಡು: ಎಂಡೋ ಸಲ್ಫಾನ್ ಸಂತಸ್ತರನ್ನು ಭರವಸೆಗಳ ಮೂಲಕ ವಂಚಿಸುತ್ತಿರುವುದು ಖಂಡನೀಯ. ಜೊತೆಗೆ ಎಂಡೋ ಸಂತ್ರಸ್ತರ ಪುನರ್ವಸತಿಯಲ್ಲಿ ಸರಕಾರ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಕೀಂ ಕುನ್ನಿಲ್ ಸರಕಾರದ ವಿರುದ್ಧ ಕಿಡಿಕಾರಿದರು.
ಕುಂಬಳೆ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಪೆರ್ಲದ ಕನ್ನಟಿಪಾರೆ ಯಲ್ಲಿರುವ ಪೆರ್ಲ ವಲಯ ತೋಟಗಾರಿಕಾ ಬೆಳೆಗಳ ಉಪಕೇಂದ್ರ ಕಾರ್ಯಾಲಯಕ್ಕೆ ನಡೆಸಿದ ಪ್ರತಿಭಟನಾ ಮೆರವಣಿಗೆ ಮತ್ತು ಬಳಿಕ ನಡೆದ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತೋಟಗಾರಿಕಾ ವಿಭಾಗ ಮತ್ತು ಸರಕಾರದ ತಪ್ಪು ನಿರ್ಧಾರಗಳಿಂದ ಎಣ್ಮಕಜೆ ಸಹಿತ ಜಿಲ್ಲೆಯ ವಿವಿಧೆಡೆ ಜೀವಹಾನಿಯೊಂದಿಗೆ ಪಾರಂಪರಿಕ ವಾಗಿ ಈಗಲೂ ಮುಂದುವರಿದಿರುವ ಎಂಡೋ ಸಮಸ್ಯೆಗಳಿಗೆ ಇನ್ನೂ ಪರಿಹಾರ ಕಾಣದಿರುವುದು ದುರಂತ ವಾಗಿದ್ದು, ಗಡಿನಾಡಿನ ಗ್ರಾಮೀಣ ಪ್ರದೇಶದ ನಾಗರಿಕರ ನಿರ್ಲಕ್ಷ್ಯ ಇದಾಗಿದೆ. ಎಂಡೋ ಪೀಡಿತ ಕುಟುಂಬಗಳ ರೋದನವನ್ನು ಅರ್ಥೈಸು ವಲ್ಲಿ ಹಿಂದುಳಿದಿರುವ ಸರಕಾರ ಮತ್ತು ಇಲಾಖೆ ಜನವಂಚನೆ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.
ಪುನರ್ವಸತಿ ಸಹಿತ ವೈದ್ಯಕೀಯ ನೆರವು ನೀಡುವಲ್ಲಿ ಭರವಸೆ ಮಾತ್ರ ಆಗಿ ಉಳಿದಿರುವ ಯೋಜನೆಗಳು ಶೀಘ್ರ ಪರಿಹಾರವಾಗಬೇಕೆಂದು ಅವರು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಸಾಮಿ ಕುಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೆ.ಎಸ್. ಸೋಮಶೇಖರ್, ಡಿಕೆಟಿಎಫ್ ಬ್ಲಾಕ್ ಅಧ್ಯಕ್ಷ ಲಕ್ಷ್ಮಣ ಪ್ರಭು ಕುಂಬಳೆ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಆಮು ಅಡ್ಕಸ್ಥಳ, ರವೀಂದ್ರ ನಾಯಕ್, ಅಬೂಬಕರ್, ರವಿ ಪೂಜಾರಿ, ಮೋಹನ ರೈ, ಕುಂಬಳೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಭಂಡಾರಿ ಕುತ್ತಿಕಾರ್, ಮುಖಂಡರಾದ ನವೀನ್ ಪೆರ್ಲ, ವಿಲ್ಫೆ†ಡ್ ಡಿ’ಸೋಜಾ, ಅಬ್ದುಲ್ಲ ಕುರೆಡ್ಕ ಮೊದಲಾದವರು ಉಪಸ್ಥಿತರಿದ್ದರು.
ರವೀಂದ್ರ ನಾಯಕ್ ಸ್ವಾಗತಿಸಿದರು. ಎಣ್ಮಕಜೆ ಮಂಡಲ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಗಾಂಭೀರ್ ವಂದಿಸಿದರು.
ಪೆರ್ಲ ಪೇಟೆಯಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಿಸಿಕೆ (ತೋಟಗಾರಿಕಾ ನಿಗಮ ಕಾರ್ಯಾ ಲಯ) ಕಚೇರಿಯ ಎದುರು ಪ್ರತಿಭಟನೆ ನಡೆಸಿ ಮುಕ್ತಾಯಗೊಂಡಿತು.