ಬೆಂಗಳೂರು: ಸರಕಾರಿ ಭೂಮಿ ಸಾಗುವಳಿಯ ಅಕ್ರಮ- ಸಕ್ರಮ ಅರ್ಜಿ ಸಲ್ಲಿಕೆ ಅವಧಿಯನ್ನು ಮತ್ತೆ ಒಂದು ವರ್ಷಗಳ ಕಾಲ ವಿಸ್ತರಣೆ ಮಾಡುವ ಮಹತ್ವದ ತೀರ್ಮಾನವನ್ನು ರಾಜ್ಯ ಸರಕಾರ ತೆಗೆದುಕೊಂಡಿದೆ.
ಇದಕ್ಕೆ ಸಂಬಂಧಪಟ್ಟಂತೆ ಕಂದಾಯ ಇಲಾಖೆ ತಿದ್ದುಪಡಿ ವಿಧೇಯಕವನ್ನು ಶುಕ್ರವಾರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.
94 ಎ ತಿದ್ದುಪಡಿ ಮೂಲಕ ನಮೂನೆ 57ರಲ್ಲಿ ಅರ್ಜಿ ಸಲ್ಲಿಸಿ ಸರಕಾರಿ ಭೂಮಿಯಲ್ಲಿ ನಡೆಸುತ್ತಿದ್ದ ಅಕ್ರಮ ಸಾಗುವಾಳಿಯನ್ನು ಸಕ್ರಮಗೊಳಿಸಿಕೊಳ್ಳುವುದಕ್ಕೆ ಅವಕಾಶವಿತ್ತು. ಆದರೆ ಈ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮತ್ತೆ ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡುವುದಕ್ಕೆ ಸರಕಾರ ನಿರ್ಧರಿಸಿದೆ.
ಅಕ್ರಮ ಸಕ್ರಮಕ್ಕೆ ಪ್ರತಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ಐವರು ಸದಸ್ಯರನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗುತ್ತದೆ. ಶಾಸಕರು ಇದರ ಭಾಗವಾಗಿರಲಿದ್ದು, ತಹಶೀಲ್ದಾರ್ ಕಾರ್ಯದರ್ಶಿಯಾಗಿರುತ್ತಾರೆ. ತಾಲೂಕಿಗೆ ಒಂದಕ್ಕಿಂತ ಹೆಚ್ಚು ಸಮಿತಿ ರಚನೆ ಮಾಡುವುದು ಅಗತ್ಯ ಎಂದು ಕಂಡು ಬಂದರೆ ಹೆಚ್ಚುವರಿ ನೇಮಕ ಮಾಡಬಹುದು.
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆಗೆ ಗೂಂಡಾಗಿರಿ ಮೂಲಕ ದೇಣಿಗೆ ಸಂಗ್ರಹ: ವಿಡಿಯೋ ವೈರಲ್
ಈ ಕಾಯಿದೆ ಪ್ರಕಾರ, ಯಾವುದೇ ವ್ಯಕ್ತಿ ತನ್ನ ಸ್ವಾಧೀನಕ್ಕೆ ಒಳಪಟ್ಟ ಭೂಮಿಯನ್ನು ಸಕ್ರಮಗೊಳಿಸಿಕೊಳ್ಳುವುದಕ್ಕೆ ಗೊತ್ತುಪಡಿಸಿದ ಅರ್ಹತೆ ಹೊಂದಿದ್ದರೆ ಕಾಯಿದೆ ಜಾರಿಗೆ ಬಂದ ದಿನದಿಂದ ಒಂದು ವರ್ಷದ ಅವಧಿಯಲ್ಲಿ ನಿಯಮ 67 ರ ಅನ್ವಯ ಸೂಕ್ತ ಶುಲ್ಕದೊಂದಿಗೆ ಅರ್ಜಿ ಸಲ್ಲಸಬೇಕಾಗುತ್ತದೆ. ಸಮಿತಿ ಅಕ್ರಮ- ಸಕ್ರಮವನ್ನು ನಿರ್ಧರಿಸುತ್ತದೆ.