Advertisement

Politics: ವಿಪಕ್ಷ ವಿರುದ್ಧ ಗಣಿ ಅಸ್ತ್ರ- ಹಳೆ ಪ್ರಕರಣ ಕೆದಕಲು ಮುಂದಾದ ಸರಕಾರ 

12:36 AM Nov 17, 2023 | Team Udayavani |

ಬೆಂಗಳೂರು: ವಿಪಕ್ಷಗಳ ವಿರುದ್ಧ ಗಣಿ ಅಸ್ತ್ರ ಪ್ರಯೋಗಕ್ಕೆ ಮುಂದಾಗಿರುವ ರಾಜ್ಯ ಸರಕಾರವು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ‌ ಚರ್ಚೆ ನಡೆಸಲಾಗಿದ್ದು, ಎಸ್‌ಐಟಿ ನಡೆಸುವ ಮುಂದಿನ ತನಿಖಾ ಪ್ರಗತಿಯನ್ನು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಕಾಲಕಾಲಕ್ಕೆ ಪರಿಶೀಲಿಸಲಿದ್ದಾರೆ.

Advertisement

ಎಸ್‌ಐಟಿ ತನಿಖೆಯಲ್ಲಿ ಬಾಕಿ ಉಳಿದಿರುವ 10 ಕ್ರಿಮಿನಲ್‌ ಪ್ರಕರಣ

ಗಳ ತನಿಖೆಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ಹಿಂದೆ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಎಸ್‌ಐಟಿ ರಚನೆಯಾಗಿತ್ತು. ಐಜಿಪಿ ಚರಣ್‌ ರೆಡ್ಡಿ ನೇತೃತ್ವದ ಎಸ್‌ಐಟಿ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಸಹಿತ ಘಟಾನುಘಟಿಗಳನ್ನು ವಿಚಾರಣೆ ನಡೆಸಿತ್ತು. ಆಗ ಈ ವಿಚಾರ ಭಾರೀ ವಿವಾದವನ್ನೂ ಸೃಷ್ಟಿಸಿತ್ತು. ಈಗ ಸರಕಾರ ಹಳೆ ಪ್ರಕರಣಗಳನ್ನು ಮತ್ತೆ ಕೆದಕಲು ಮುಂದಾಗಿದ್ದು, ವಿಪಕ್ಷಗಳನ್ನು ಗಣಿ ತನಿಖೆಯ ಜಾಲದಲ್ಲಿ ಸಿಲುಕಿಸಲು ಮುಂದಾಗಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಸಚಿವ ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌ ಅವರು ಎಸ್‌ಐಟಿ ಅವಧಿಯನ್ನು 2024ರ ಜೂ. 30ರ ವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.

ತನಿಖೆಯ ವ್ಯಾಪ್ತಿ ಏನು?

 ಎಸ್‌ಐಟಿ ತನಿಖೆ  ಬಾಕಿ ಇರುವ 10 ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ.

Advertisement

 ನವ ಮಂಗಳೂರು, ಕಾರವಾರ, ಮರ್ಮಗೋವಾ, ಪಣಜಿ, ಚೆನ್ನೈ ಬಂದರುಗಳಿಗೆ ಸಂಬಂಧಪಟ್ಟ 172 ಪ್ರಕರಣಗಳು ಪ್ರಾಥಮಿಕ ತನಿಖೆಗೆ ಬಾಕಿ ಇದ್ದು, ಅವುಗಳ ಪರಿಶೀಲನೆ.

 ರಾಜ್ಯ ಸರಕಾರ ರಚಿಸಿರುವ ಅದಿರು ಮೌಲ್ಯಮಾಪನ ವರದಿಗಳು ಬಾಕಿ ಇದ್ದು, ಇವುಗಳ ಬಗ್ಗೆ ಪೂರಕ ದೋಷಾರೋಪ ಪಟ್ಟಿ

 ನ್ಯಾಯಾಲಯಗಳಲ್ಲಿ  ಇರುವ 59 ಪ್ರಕರಣಗಳ ಶೀಘ್ರ ವಿಲೇವಾರಿ.

 50 ಸಾವಿರ ಮೆಟ್ರಿಕ್‌ ಟನ್‌ಗೆ ಮೇಲ್ಪಟ್ಟು ಅಕ್ರಮ ನಡೆದ ಪ್ರಕರಣಗಳು ಸಿಬಿಐಗೆ ಒಪ್ಪಿಸಲಾಗಿದ್ದು, ಅವುಗಳ ತನಿಖಾ ಪ್ರಗತಿ ಪರಿಶೀಲನೆ.

ಉದಯವಾಣಿ ವರದಿ

ರಾಯಧನ ನಿಗದಿ ಹಾಗೂ ಅದಿರು ಮೌಲ್ಯಮಾಪನದಲ್ಲಿ ನಡೆದ ಕಳ್ಳಾಟಕ್ಕೆ ರಾಜ್ಯ ಸರಕಾರ ಮರುಜೀವ ನೀಡುವ ಸಾಧ್ಯತೆ ಬಗ್ಗೆ ನ. 14ರಂದು ಉದಯವಾಣಿ ವಿಶೇಷ ವರದಿ ಪ್ರಕಟಿಸಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರ ಪ್ರಸ್ತಾವವಾಗುವುದಕ್ಕೆ ಮುನ್ನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಸಭೆಯ ಮುಂದೆ ಇದಕ್ಕೆ ಸಂಬಂಧಪಟ್ಟ ಕಡತ ಸಲ್ಲಿಕೆಯಾಗಿತ್ತು. ಪಿಎಸಿ 2014-15ರ ಅವಧಿಯಲ್ಲಿ ನಡೆದ ಅಕ್ರಮದ ಬಗ್ಗೆ ಗಮನ ಹರಿಸುತ್ತಿದ್ದಂತೆ ಸರಕಾರ ಒಟ್ಟಾರೆಯಾಗಿ ಗಣಿ ಹಗರಣದ ತನಿಖೆಯನ್ನು ಪರಿಶೀಲಿಸಲು ಮುಂದಾಗಿದೆ.

ಐದು ವರ್ಷಗಳಲ್ಲಿ ಈ ಎಲ್ಲ ಪ್ರಕರಣಗಳ ತನಿಖೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಮುಂದಿನ ಎಂಟು ತಿಂಗಳಲ್ಲಿ ಎಷ್ಟು ಸಾಧ್ಯವೋ ಅಷ್ಟು ತನಿಖಾ ಪ್ರಗತಿ ಸಾಧಿಸುವುದು ಇದರ ಉದ್ದೇಶ. ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿಯವರಿಗೆ ಸಂಬಂಧಪಟ್ಟ ಪ್ರಕರಣ ವಿಚಾರಣೆಗೆ ಬಾಕಿ ಇದ್ದರೆ ಅದನ್ನೂ ನಾವು ಪರಿಶೀಲಿಸುತ್ತೇವೆ.

-ಎಚ್‌.ಕೆ. ಪಾಟೀಲ್‌,  ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next