Advertisement

ಸರ್ಕಾರ ಫೊರೆನ್ಸಿಕ್‌ ವರದಿ ತಿರುಚಿದೆ: ಶೋಭಾ ಆರೋಪ

11:45 AM Dec 14, 2017 | Team Udayavani |

ಬೆಂಗಳೂರು: ಹೊನ್ನಾವರದಲ್ಲಿ ಭೀಕರವಾಗಿ ಹತ್ಯೆಗೊಳಗಾದ ಪರೇಶ್‌ ಮೇಸ್ತ ಪ್ರಕರಣದಲ್ಲಿ ರಾಜ್ಯ ಸರ್ಕಾರ ಫೊರೆನ್ಸಿಕ್‌ ವರದಿಯನ್ನೇ ತಿರುಚಿದೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.

Advertisement

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೇಶ್‌ ಮೇಸ್ತ ಹತ್ಯೆ ಕುರಿತು ಸರ್ಕಾರ ಬಿಡುಗಡೆ ಮಾಡಿದ ಪ್ರಶ್ನೋತ್ತರಗಳಿರುವ ಫೊರೆನ್ಸಿಕ್‌ ವರದಿ ನಿಜವಾದ ವರದಿಯಲ್ಲ. ಕೊಲೆ ಪ್ರಕರಣ ಮುಚ್ಚಿಹಾಕಿ ಇದೊಂದು ಆಕಸ್ಮಿಕ ಸಾವು ಎಂದು ಬಿಂಬಿಸಲು ಸರ್ಕಾರ ವರದಿಯನ್ನೇ ತಿರುಚಿದೆ. ಮರಣೋತ್ತರ ವರದಿ ನೀಡಿದ ಮಣಿಪಾಲ್‌ ಆಸ್ಪತ್ರೆ ವೈದ್ಯರು ವರದಿ ನೀಡಿದ ಬಳಿಕ ನಾಪತ್ತೆಯಾಗಿದ್ದಾರೆ. ಇದನ್ನು ನೋಡಿದಾಗ ಸರ್ಕಾರ ವೈದ್ಯರಿಗೆ ಬೆದರಿಕೆ ಹಾಕಿ ವರದಿ ಪಡೆದಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಆರೋಪಿಸಿದರು.

ಆ ಮೂಲಕ ಹಲವು ದಶಕಗಳಿಂದ ಪ್ರತಿಷ್ಠಿತ ಎನಿಸಿಕೊಂಡಿರುವ ಮಣಿಪಾಲ್‌ ಆಸ್ಪತ್ರೆಯ ಹೆಸರನ್ನೇ ಹಾಳು ಮಾಡಲು ಹೊರಟಿದೆ. ಆದ್ದರಿಂದ ಆಸ್ಪತ್ರೆಯ ಆಡಳಿತ ಮಂಡಳಿಯವರು ನಿಜವಾದ ಮರಣೋತ್ತರ ಮತ್ತು  ಫೊರೆನ್ಸಿಕ್‌ ವರದಿಯನ್ನು ನಿರ್ಭೀತಿಯಿಂದ ಬಿಡುಗಡೆ ಮಾಡಿ ಜನರಿಗೆ ಸತ್ಯಾಂಶ ತಿಳಿಸಬೇಕು ಎಂದು ಮನವಿ ಮಾಡಿದರು.

ಮೀನುಗಾರಿಗೆಗಾಗಿ ಸಮುದ್ರದಲ್ಲೇ ಈಜುವ ಪರೇಶ್‌ ಮೇಸ್ತ  ಕೆರೆಯಲ್ಲಿ ಈಜಲು ಸಾಧ್ಯವಿಲ್ಲವೇ? ಕೆರೆಯಲ್ಲಿ ಪತ್ತೆಯಾದ ಆತನ ಮೃತದೇಹ ಕಪ್ಪು ಬಣ್ಣಕ್ಕೆ ತಿರುಗಲು ಕಾರಣವೇನು? ಆತನ ಮರ್ಮಾಂಗ ಜಜ್ಜಿ ಹೋಗಿದ್ದು ಹೇಗೆ? ಆತನ ಕೈಯ್ಯಲ್ಲಿದ್ದ ಜೈರಾಮ್‌ ಎಂಬ ಹಚ್ಚೆಯನ್ನು ಕೆತ್ತಿ ತೆಗೆದದ್ದು ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದ ಅವರು, ಈ ಎಲ್ಲಾ ಸತ್ಯ ಹೊರಬಂದರೆ ಸರ್ಕಾರ ಇಕ್ಕಟ್ಟಿಗೆ ಸಿಲುಕುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್‌ ಸರ್ಕಾರ ಮೇಸ್ತ ಹತ್ಯೆ ಬಳಿಕ ಉತ್ತರ ಕನ್ನಡದಲ್ಲಿ ನಡೆಯುತ್ತಿರುವ ಗಲಭೆಗೆ ಬಿಜೆಪಿ ಕಾರಣ ಎಂದು ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ದೂರಿದರು.

ಮುಸ್ಲಿಂರನ್ನು ದೂರುವುದಿಲ್ಲ:  ಪರೇಶ್‌ ಮೇಸ್ತ ಹತ್ಯೆಗೆ ಸಂಬಂಧಿಸಿದಂತೆ ನಾವು ಮುಸ್ಲಿಮರನ್ನು ದೂರುವುದಿಲ್ಲ. ಕರಾವಳಿಯಲ್ಲಿ ಐಸಿಸ್‌ ಸಂಘಟನೆಗೆ ನೇಮಕಾತಿ ನಡೆಸುತ್ತಿರುವ ಇಸ್ಲಾಂ ಮೂಲಭೂತವಾದಿ ಸಂಘಟನೆ ಪಿಎಫ್ಐ ಇದಕ್ಕೆ ಕಾರಣ. ಆದ್ದರಿಂದ ರಾಜ್ಯ ಸರ್ಕಾರ ಮುಸ್ಲಿಂ ವೋಟ್‌ಬ್ಯಾಂಕ್‌ಗಾಗಿ ಪಿಎಫ್ಐ ಸಂಘಟನೆಗೆ ರಾಜ ಮರ್ಯಾದೆ ಕೊಡುವುದನ್ನು ನಿಲ್ಲಿಸಬೇಕು. ಈ ಸಂಘಟನೆಯನ್ನು ನಿಷೇಧಿಸಿ ಮುಖಂಡರನ್ನು ಬಂಧಿಸಬೇಕು. ಪರೇಶ್‌ ಮೇಸ್ತ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಎನ್‌ಐಎಗೆ ವಹಿಸಬೇಕು ಎಂದು ಆಗ್ರಹಿಸಿದರು.

Advertisement

ರಾಜ್ಯ ಸರ್ಕಾರದಿಂದ ಪರೇಶ್‌ ಮೇಸ್ತ  ಪ್ರಕರಣದಲ್ಲಿ ನ್ಯಾಯ ಸಿಗುವುದಿಲ್ಲ ಎಂಬುದು ನಮಗೆ ಗೊತ್ತು. ಹೀಗಾಗಿ ಶುಕ್ರವಾರ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿಯಾಗಿ ಪ್ರಕರಣದ ಕುರಿತು ಸಿಬಿಐ ಅಥವಾ ಎನ್‌ಐಎ ತನಿಖೆ ನಡೆಸುವಂತೆ ಮನವಿ ಮಾಡಿಕೊಳ್ಳಲಾಗುವುದು ಎಂದರು.

ಸಿದ್ದರಾಮಯ್ಯ ಟಿಪ್ಪುವಿನ ಪುನರ್ಜನ್ಮ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಟಿಪ್ಪುವಿನ ಪುನರ್ಜನ್ಮ. ಹೀಗಾಗಿ ಹಿಂದೂಗಳ ರಕ್ಷಣೆ ವಿಚಾರದಲ್ಲಿ ಅವರು ಮತ್ತು ಸರ್ಕಾರ ಗಮನಹರಿಸುತ್ತಿಲ್ಲ. ಕರಾವಳಿ ಭಾಗದಲ್ಲಿ ಬಿಜೆಪಿ ಬಲಾಡ್ಯವಾಗಿರುವುದರಿಂದ ಮುಸ್ಲಿಂ ಮತಬ್ಯಾಂಕ್‌ ಸೃಷ್ಟಿಸಲು ಮುಸ್ಲಿಂ ಮೂಲಭೂತವಾದಿ ಸಂಘಟನೆಗಳನ್ನು ಪ್ರೋತ್ಸಾಹಿಸಿ, ಕಾಂಗ್ರೆಸ್‌ ಸರ್ಕಾರವೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಸುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಗೃಹ ಸಚಿವ ರಾಮಲಿಂಗಾರೆಡ್ಡಿ ಅವರೇ ಪರೇಶ್‌ ಮೇಸ್ತ  ಹತ್ಯೆ ಒಂದು ಸಣ್ಣ ಸಂಗತಿ ಎಂದು ಹೇಳಿದರೆ ರಾಜ್ಯದ ಜನರನ್ನು ಯಾರು ಕಾಪಾಡಬೇಕು?  ಹತ್ಯೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಾಂತಿ ಕಾಪಾಡುವುದು ಬಿಟ್ಟು ಸಣ್ಣ ಸಂಗತಿ ಎಂದು ಹೇಳಿ ದಾರಿತಪ್ಪಿಸುತ್ತಿರುವುದು ಬೇಜವಾಬ್ದಾರಿ.
– ಶೋಭಾ ಕರಂದ್ಲಾಜೆ,  ಸಂಸದೆ

“ಮೇಸ್ತ ಸಾವಿನ ವಿಚಾರ ಗೊತ್ತಿಲ್ಲವೆಂದು ಸಿಎಂ ಪ್ರಮಾಣ ಮಾಡಲಿ’
ಶಿವಮೊಗ್ಗ:
ಹೊನ್ನಾವರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪರೇಶ್‌ ಮೇಸ್ತ  ಮೃತಪಟ್ಟಿರುವ ಸಂಗತಿ ತಿಳಿದಿರಲಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ತಾಯಿ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಿ ಹೇಳಲಿ ಎಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಸವಾಲು ಹಾಕಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಕಾರ್ಯಕ್ರಮ ನಿಮಿತ್ತ ಸಿಎಂ ಸಿದ್ದರಾಮಯ್ಯ ಹೊನ್ನಾವರಕ್ಕೆ ಭೇಟಿ ನೀಡಿದ ದಿನದಂದೇ ಯುವಕ ಪರೇಶ್‌ ಮೇಸ್ತ ಕೊಲೆ ನಡೆದಿತ್ತು. ಆತನ ಹತ್ಯೆ ನಡೆದಿರುವುದು ಗೊತ್ತಿದ್ದರೂ ಗೌಪ್ಯವಾಗಿಡಲಾಗಿತ್ತು. ಸಿಎಂ ಕಾರ್ಯಕ್ರಮ ಮುಗಿಸಿ ಹೊನ್ನಾವರದಿಂದ ತೆರಳಿದ ನಂತರ ಬಹಿರಂಗಗೊಳಿಸಲಾಗಿದೆ. ಸಿದ್ದರಾಮಯ್ಯರಿಗೆ ಇಡೀ ಪ್ರಕರಣದ ಸತ್ಯ  ಗೊತ್ತಿದೆ. ಆದರೆ, ಓಲೈಕೆಯಲ್ಲಿಯೇ ನಿರತರಾಗಿರುವ ಅವರು ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂದು ಹೇಳಿದರು.

ಇಡೀ ಪ್ರಕರಣದಲ್ಲಿ ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಐಜಿಪಿ ಹೇಮಂತ್‌ ನಿಂಬಾಳ್ಕರ್‌ ತನ್ನ ಪತ್ನಿಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಪಡೆಯುವ ಪ್ರಯತ್ನ ನಡೆಸಿದ್ದು, ಈ ಕಾರಣಕ್ಕಾಗಿಯೇ ಸರ್ಕಾರದ ಏಜೆಂಟರಂತೆ ವರ್ತಿಸುತ್ತಿದ್ಧಾರೆ ಎಂದು ಈಶ್ವರಪ್ಪ ಗಂಭೀರ ಆರೋಪ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next