ಹುಬ್ಬಳ್ಳಿ: ಭಾರತ ಸಂಚಾರ ನಿಗಮ ಲಿಮಿಟೆಡ್ (ಬಿಎಸ್ಸೆನ್ನೆಲ್) ಪುನರುಜೀವನಕ್ಕೆ ಕೇಂದ್ರ ಸರಕಾರ ನಿರ್ಧರಿಸಿದ್ದು, ಯಾವುದೇ ಕಾರಣಕ್ಕೂ ಬಿಎಸ್ಸೆನ್ನೆಲ್ ಬಂದ್ ಮಾಡುವ ಇರಾದೆ ಸರಕಾರದ ಮುಂದಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಅಖೀಲ ಭಾರತ ಬಿಎಸ್ಸೆನ್ನೆಲ್ ನಿವೃತ್ತರ ಶ್ರೇಯೋಭಿವೃದ್ಧಿ ಸಂಸ್ಥೆ ವತಿಯಿಂದ ನಗರದ ಬಿಎಸ್ಸೆನ್ನೆಲ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಎಸ್ಸೆನ್ನೆಲ್ ಹಾಗೂ ಎಂಟಿಎನ್ ಎಲ್ ಸಂಸ್ಥೆಗಳನ್ನು ಮುಚ್ಚುವ ಬಗ್ಗೆ ಆತಂಕ ಬೇಡ. ಆದರೆ ಇಲ್ಲಿ ಸಿಬ್ಬಂದಿ ಪ್ರಮಾಣ ಅಧಿಕವಾಗಿದ್ದು, ಸಿಬ್ಬಂದಿ ಸಂಖ್ಯೆ ಕಡಿಮೆಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಎಸ್ಸೆನ್ನೆಲ್ ಸ್ಥಿತಿ ಕೆಟ್ಟದಾಗಿತ್ತು. ಬಿಎಸ್ಸೆನ್ನೆಲ್ ಉಳಿಸಿ ಬೆಳೆಸಲು ಸರಕಾರ ಹಲವು ಕ್ರಮ ಕೈಗೊಂಡಿತು. ಸಂಸ್ಥೆಯ ಪುನರುಜ್ಜೀವನಕ್ಕೆ 4ಜಿ ಸೇವಾ ಸೌಲಭ್ಯ ನೀಡಲಾಗಿದೆ. ಖಾಸಗಿ ಸಂಸ್ಥೆಗಳ ಸ್ಪರ್ಧೆಗೆ ತಕ್ಕಂತೆ ಸರಕಾರಿ ಸ್ವಾಮ್ಯದ ಈ ಸಂಸ್ಥೆಯನ್ನು ರೂಪಿಸುವುದು ಅವಶ್ಯವಾಗಿದೆ. ಕೇಂದ್ರದ ಕ್ರಮಗಳಿಂದ ಬಿಎಸ್ಸೆನ್ನೆಲ್ ಸಮಸ್ಯೆಗಳು ಬಗೆಹರಿದು, ಇದು ತನ್ನ ಹಿಂದಿನ ಹಿರಿಮೆಯನ್ನು ಪಡೆಯುವ ವಿಶ್ವಾಸವಿದೆ ಎಂದರು.
ಅಖೀಲ ಭಾರತ ಬಿಎಸ್ಸೆನ್ನೆಲ್ ನಿವೃತ್ತ ಸಿಬ್ಬಂದಿ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ಪ್ರಧಾನ ಮಂತ್ರಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 40 ಲಕ್ಷ ರೂ. ಸಂಗ್ರಹಿಸಿ ನೀಡಿದ್ದು ಮಹತ್ಕಾರ್ಯ. ನಿವೃತ್ತ ಸಿಬ್ಬಂದಿ ತಮ್ಮ ಪಿಂಚಣಿಯಲ್ಲಿ ಸಮಾಜದ ಒಳಿತಿಗೆ ಹಣ ನೀಡಬೇಕೆಂಬ ಹಂಬಲ ಹೊಂದಿರುವುದು ಶ್ಲಾಘನೀಯ ಎಂದರು.
ನಿವೃತ್ತ ಸಿಬ್ಬಂದಿಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಬಿ.ಎಸ್. ಪವಾರ ಪ್ರಾಸ್ತಾವಿಕ ಮಾತನಾಡಿದರು. ರಮಣ ಕುಟ್ಟಿ, ಡಿ. ಗೋಪಾಲಕೃಷ್ಣನ್, ವಿ. ರಾಮರಾವ್, ರಾಧಾಕೃಷ್ಣನ್, ಸಿ.ಎಸ್. ಶಿವಾನಂದ, ಎಸ್. ಎಂ. ಗೌಡರ ಇದ್ದರು.