Advertisement

ಸರ್ಕಾರಕ್ಕೆ ಮಾದಕ ವಸ್ತು ದಂಧೆ ಗಂಭೀರತೆ ಅರಿವಿಲ್ಲ

12:03 PM Aug 07, 2018 | |

ಬೆಂಗಳೂರು: ಮಾದಕ ವಸ್ತು ಮಾರಾಟಗಾರರ ವಿರುದ್ಧ ಗೂಂಡಾ ಕಾಯ್ದೆ ಅಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ನೇತೃತ್ವದ ಬಿಜೆಪಿ ನಿಯೋಗ ಸೋಮವಾರ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

Advertisement

ಆಯುಕ್ತರ ಭೇಟಿ ನಂತರ ಮಾತನಾಡಿದ ಆರ್‌.ಅಶೋಕ್‌, ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಮಾದಕ ವಸ್ತು ಮಾರಾಟಗಾರರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಈ ಮೂಲಕ ಸರ್ಕಾರಕ್ಕೆ ಡ್ರಗ್ಸ್‌ ಮಾಫಿಯಾ ಮಟ್ಟಹಾಕುವುದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಆರೋಪಿಸಿದರು.

ಬೆಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತಲಿನ ಮನೆಗಳಲ್ಲಿ ಮಾದಕ ವಸ್ತುಗಳು ಸಿದ್ಧವಾಗುತ್ತಿದ್ದು, ಈ ಮನೆಗಳ ಮೇಲೆ ದಾಳಿ ನಡೆಸಿ ಅಡ್ಡೆಗಳನ್ನು ಮುಚ್ಚಲಾಗುವುದು ಎಂದು ಗೃಹ ಸಚಿವರು ಹೇಳಿದ್ದರು. ಆದರೆ ಇದುವರೆಗೂ ದಾಳಿ ಮಾತ್ರ ನಡೆಸಿಲ್ಲ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿಲ್ಲ ಎಂದು ದೂರಿದರು.

ಅಕ್ರಮವಾಗಿ ವಾಸವಾಗಿರುವ ಬಾಂಗ್ಲಾ ನುಸುಳುಕೋರರು ಮಾದಕ ವಸ್ತು ಮಾರಾಟದಲ್ಲಿ  ತೊಡಗಿಕೊಂಡು ಶಾಲಾ-ಕಾಲೇಜುಗಳ ಬಳಿ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದಾರೆ. ಈ ದಂಧೆ ನಿಯಂತ್ರಣಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಮಾದಕ ವಸ್ತು ಸರಬರಾಜು-ಮಾರಾಟ ಮತ್ತು ವಿತರಕರ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸಲು  ಕೂಡಲೇ ವಿಶೇಷ ಪಡೆ ರಚಿಸಬೇಕು. ಅಲ್ಲದೆ ಮಾದಕ ವ್ಯಸನಿಗಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಅವರನ್ನು ವ್ಯಸನದಿಂದ ಹೊರಬರುವಂತೆ ಮಾಡಲು ಸರ್ಕಾರ ವಿಶೇಷ ಪ್ರಯತ್ನ ನಡೆಸಬೇಕು ಎಂದು ಆಗ್ರಹಿಸಿದ ಅಶೋಕ್‌, ಮಾದಕ ವಸ್ತು ಜಾಲದ ವಿರುದ್ಧ ತ್ವರಿತ ಕಾರ್ಯಚರಣೆ ಕೈಗೊಳ್ಳದಿದ್ದರೆ ನಗರದಲ್ಲಿ ಬೃಹತ್‌ ಆಂದೋಲನ ಮತ್ತು ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

Advertisement

ಭರವಸೆ: ಇದಕ್ಕೂ ಮುನ್ನ ಬಿಜೆಪಿ ನಿಯೋಗದ ಮನವಿಗೆ ಸ್ಪಂದಿಸಿದ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌, ಶಾಲೆ, ಕಾಲೇಜುಗಳ ಬಳಿ ಪೊಲೀಸ್‌ ಸಿಬ್ಬಂದಿ ಗಸ್ತು ನಿಯೋಜಿಸುವಂತೆ ಈಗಾಗಲೇ ನಗರದ ಎಲ್ಲ ವಲಯಗಳ ಡಿಸಿಪಿಗಳಿಗೆ ಸೂಚಿಸಲಾಗಿದೆ. ಮಾದಕ ವಸ್ತು ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯರಾದ ಡಾ.ತೇಜಸ್ವಿನಿ ಗೌಡ, ಲೆಹರ್‌ಸಿಂಗ್‌, ತಾರಾ ಅನುರಾದಾ, ಶಾಸಕರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಎಸ್‌.ಆರ್‌.ವಿಶ್ವನಾಥ್‌, ರವಿ ಸುಬ್ರಹ್ಮಣ್ಯ, ಎಂ.ಕೃಷ್ಣಪ್ಪ ನಿಯೋಗದಲ್ಲಿದ್ದರು.

ಗಿರಿನಗರ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ತೇಜಸ್‌ ಬೆಂಬಲಕ್ಕೆ ಬಿಜೆಪಿ ನಿಂತಿಲ್ಲ. ಆತ ಬಿಜೆಪಿ ಕಾರ್ಯಕರ್ತ ಆಗಿದ್ದ ಅನ್ನೋದು ಗೊತ್ತು. ಆದರೆ, ಎಷ್ಟು ವರ್ಷದಿಂದ ಬಿಜೆಪಿಯಲ್ಲಿದ್ದ ಎಂಬುದು ಗೊತ್ತಿಲ್ಲ. ಮಾಜಿ ಮೇಯರ್‌ ನಟರಾಜ್‌ ಕೂಡ ಆರೋಪಿಯ ಉಳಿಸುವ ಪ್ರಯತ್ನ ಮಾಡಿಲ್ಲ. ತಪ್ಪು ಮಾಡಿದವನಿಗೆ ಶಿಕ್ಷೆ ಆಗಲೇಬೇಕು.
ಆರ್‌.ಅಶೋಕ್‌, ಮಾಜಿ ಉಪ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next