Advertisement

ಸಮ್ಮಿ ಶ್ರ ಸರ್ಕಾರಕ್ಕೆ ರೈತಪರ ಕಾಳಜಿಯಿಲ್ಲ

05:11 PM Dec 04, 2018 | Team Udayavani |

ಕಡೂರು: ನಾಡಿನ ರೈತರ, ಮಣ್ಣಿನ ಮಕ್ಕಳ ಹಾಗೂ ಹಸಿರುಶಾಲಿನವರ ಪರವಾಗಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ನಿಲ್ಲುತ್ತಾರೆ ಎಂದು ಭಾವಿಸಿದ್ದ ಜನರಿಗೆ ಭ್ರಮನಿರಸನವಾಗಿದೆ ಎಂದು ರಾಜ್ಯ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ್‌ ಪೂಜಾರಿ ಹೇಳಿದರು.

Advertisement

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರ ಆದೇಶದಂತೆ ಕಡೂರು ಕ್ಷೇತ್ರದಲ್ಲಿ ಬರ ಅಧ್ಯಯನ ನಡೆಸಿ ಸುದ್ದಿಗಾರರ ಜೊತೆ ಮಾತನಾಡಿದರು. ರೈತರ, ಬಡವರ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ. 13 ಜಿಲ್ಲೆಗಳಲ್ಲಿ ಬೆಳೆ ಒಣಗಿದೆ. 17 ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಅನಾಹುತವಾಗಿದೆ. ನಮ್ಮ ತಂಡವು ಇಂದು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿಗೆ ಭೇಟಿ ನೀಡಿದಾಗ 8 ಲಕ್ಷ ತೆಂಗಿನ ಮರಗಳು ಒಣಗಿ ಹೋಗಿದ್ದು ಕಂಡು ಬಂತು. 

ಅಲ್ಲಿನ ಜೆಡಿಎಸ್‌ ಶಾಸಕ ಈ ಹಿಂದೆ 1 ತೆಂಗಿನ ಮರಕ್ಕೆ ಕನಿಷ್ಠ 10 ಸಾವಿರ ರೂ. ಸಹಾಯ ನೀಡಬೇಕೆಂದು ಪ್ರತಿಭಟನೆ ಮಾಡಿದ್ದರು. ಇವತ್ತು ಅವರ ಸರಕಾರವೇ ಬಂದಿದೆ. ಕನಿಷ್ಠ 400 ರೂ. ಗಳನ್ನು ಕೊಡಿಸುವಲ್ಲೂ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಕಡೂರು ತಾಲೂಕಿನ 14,573 ಹೆಕ್ಟೇರ್‌ಲ್ಲಿ ತೆಂಗು ಬೆಳೆಗೆ ಹಾನಿಯಾಗಿದೆ, 832 ಹೆಕ್ಟೇರ್‌ ಅಡಿಕೆ ತೋಟ ನಾಶವಾಗಿದೆ. 6 ಲಕ್ಷಕ್ಕೂ ಹೆಚ್ಚಿನ ತೆಂಗಿನ ಮರಗಳು ಬಿದ್ದಿವೆ. 3.70 ಲಕ್ಷ ಅಡಿಕೆ ನಾಶವಾಗಿದೆ ಎಂದು ಹೇಳಿದರು.

8047 ರೈತರ ಸಾಲ ಮನ್ನಾಕ್ಕೆ 34 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದುವರೆಗೂ 1 ರೂ. ಸಹ ಬಂದಿಲ್ಲ. ರೈತರಿಗೆ ಋಣಮುಕ್ತ ಪತ್ರವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. 60 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು, ಉದ್ದು,ತೊಗರಿ ಭಿತ್ತನೆ ಮಾಡಲಾಗಿದೆ. 34 ಸಾವಿರ ಹೆಕ್ಟೇರಿನಲ್ಲಿದ್ದ ಬೆಳೆ ಸಂಪೂರ್ಣ ನಾಶವಾಗಿದೆ. 1 ಹೆಕ್ಟೇರ್‌ ಗೆ 6 ಸಾವಿರ ರೂ. ಪರಿಹಾರದಂತೆ 23 ಕೋಟಿ ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಬಿಡಿಗಾಸು ಸಹ ಬಿಡುಗಡೆಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

8 ಹೋಬಳಿಗಳಲ್ಲಿ ಗೋಶಾಲೆ, ಎರಡು ಮೇವು ಬ್ಯಾಂಕ್‌ ತೆರೆಯಲು ಪಶುಸಂಗೋಪನೆ ಇಲಾಖೆ 3.6 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದರೂ ಕಣ್ಣೆತ್ತಿ ನೋಡಿಲ್ಲ. 34 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಬೇಡಿಕೆ ಇಟ್ಟಿದ್ದು, ಟ್ಯಾಂಕರ್‌ ಮೂಲಕ ನೀರು ನೀಡಿದವರಿಗೆ 2.85 ಕೋಟಿ ಹಣ ಪಾವತಿಯಾಗಿಲ್ಲ. ಅಧಿಕಾರಿಗಳು ಏನು ಮಾಡಬೇಕೆಂದು ಪ್ರಶ್ನಿಸಿದರು.

ಕೃಷಿ, ತೋಟಗಾರಿಕೆ, ಪಶು ಸಾಕಾಣಿಕೆ, ಕುಡಿಯುವ ನೀರು ನೀಡಲು ಸರ್ಕಾರ ಸಂಪೂರ್ಣ ವಿಫಲವಾಗಿರುವುದರಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪನವರ ನೇತೃತ್ವದಲ್ಲಿ 5 ತಂಡಗಳನ್ನು ರಚಿಸಲಾಗಿದೆ. ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌, ರಾಜ್ಯ ರೈತ ಉಪಾಧ್ಯಕ್ಷೆ ಪವಿತ್ರಾ ರಾಮಯ್ಯ, ಚಿಕ್ಕಮಗಳೂರಿನ ಸುಷ್ಮಾ ಚಂದ್ರಶೇಖರ್‌ ಒಳಗೊಂಡ ತಂಡವು ಅಧ್ಯಯನ ನಡೆಸಿ ರಾಜ್ಯಾಧ್ಯಕ್ಷರಿಗೆ ವರದಿ ನೀಡಲಿದೆ ಎಂದರು.

ಶಾಸಕ ಬೆಳ್ಳಿಪ್ರಕಾಶ್‌, ವಿಧಾನ ಪರಿಷತ್‌ ಸದಸ್ಯ ಆಯನೂರು ಮಂಜುನಾಥ್‌, ಮಾಜಿ ಶಾಸಕ ಜೀವರಾಜ್‌, ರಾಜ್ಯ ರೈತ ಸಂಘದ ಉಪಾಧ್ಯಕ್ಷೆ ಪವಿತ್ರಾ ರಾಮಯ್ಯ ,ಚಿಕ್ಕಮಗಳೂರಿನ ಸಂಚಾಲಕಿ ಸುಷ್ಮಾ ಚಂದ್ರಶೇಖರ್‌, ಕಡೂರು ಎಪಿಎಂಸಿ ಅಧ್ಯಕ್ಷ ಶಿವಕುಮಾರ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next