ಬೆಂಗಳೂರು: ರಾಜ್ಯದಲ್ಲಿ ಸಾಮೂಹಿಕ ಭ್ರಷ್ಟಾಚಾರ ನಡೆಯುತ್ತಿದ್ದು, ಇದನ್ನು ನಿಯಂತ್ರಿಸಲು ಸಾಧ್ಯವಾಗದ ಸಿಎಂ ಸಿದ್ದರಾಮಯ್ಯ ಅವರಿಗೆ ಈ ರಾಜ್ಯವನ್ನು ಆಳುವ ನೈತಿಕತೆಯಿಲ್ಲ. ಆದ್ದರಿಂದ ತಕ್ಷಣ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಬೇಕೆಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಉದ್ಘಾಟನೆ ಮತ್ತು ರಾಜ್ಯ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದಲ್ಲಿ ಭ್ರಷ್ಟಾಚಾರಿಗಳ ಕೂಟವೇ ಆಡಳಿತ ನಡೆಸುತ್ತಿದೆ. ಸರ್ಕಾರದ ಜನವಿರೋಧಿ ನೀತಿಯನ್ನು ಮಾರ್ಮಿಕವಾಗಿ ಮತ್ತು ಮನಮುಟ್ಟುವ ರೀತಿಯಲ್ಲಿ ಜನರಿಗೆ ತಿಳಿಸುವ ಕೆಲಸವನ್ನು ಸಾಂಸ್ಕೃತಿಕ ಪ್ರಕೋಷ್ಠ ಮಾಡಬೇಕು ಎಂದರು.
ರಾಜ್ಯಾದ್ಯಂತ ತೀವ್ರ ಬರಗಾಲ ವ್ಯಾಪಿಸಿದ್ದು, ರೈತರೇ ಊಟಕ್ಕಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಜಾನುವಾರುಗಳ ಮೇವಿಗೆ ರೈತರಿಂದ 3 ರೂ. ವಸೂಲಿ ಮಾಡುವ ದುಷ್ಟ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ಹಣ ನೀಡಿದರೂ ಅದನ್ನು ರೈತರಿಗೆ ತಲುಪಿಸಲು ಸರ್ಕಾರಕ್ಕೆ ಆಗುತ್ತಿಲ್ಲ.
ಮಂತ್ರಿಗಳು ತಮ್ಮ ಕೆಲಸ ಬಿಟ್ಟು ಹಣ ಸಂಗ್ರಹಕ್ಕಾಗಿ ಓಡಾಡುತ್ತಿದ್ದಾರೆ. ಆದ್ದರಿಂದ ಈ ಸರ್ಕಾರದ ಮುಖವಾಡ ಕಳಚುವ ನಿಟ್ಟಿನಲ್ಲಿ ಬಿಜೆಪಿ ಕೆಲಸ ಮಾಡಲಿದೆ. ಮುಂದಿನ ಚುನಾವಣೆಯಲ್ಲಿ ಜನರೇ ಈ ಸರ್ಕಾರದ ಭವಿಷ್ಯ ತೀರ್ಮಾನಿಸಲಿದ್ದು, ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯ ಮಂತ್ರಿಯಾಗುವುದು ಖಚಿತ ಎಂದರು.
ಬಿಜೆಪಿಯ ಪಂಚ ದೀಕ್ಷೆಗಳಲ್ಲಿ “ಸಾಂಸ್ಕೃತಿಕ ರಾಷ್ಟ್ರವಾದ’ ಕೂಡ ಒಂದು. ಈ ದೇಶದ ಸಂಸ್ಕೃತಿ, ಕಲೆ ಮತ್ತು ಕಲಾವಿದರನ್ನು ಉಳಿಸಿ, ಬೆಳೆಸುವುದು ಸಾಂಸ್ಕೃತಿಕ ಪ್ರಕೋಷ್ಠದ ಜವಾಬ್ದಾರಿ. ಆ ನಿಟ್ಟಿನಲ್ಲಿ ಕಲಾವಿದರನ್ನು ಗುರುತಿಸಿ ಜಿಲ್ಲಾಮಟ್ಟದಲ್ಲಿ ಅವರನ್ನು ಪ್ರಕೋಷ್ಠಕ್ಕೆ ಸೇರಿಸಿಕೊಳ್ಳಿ ಎಂದರು.
ಅವರ ಮೂಲಕ ಕಾರ್ಯಕ್ರಮಗಳನ್ನು ನಡೆಸಿ ಈ ಸರ್ಕಾರದ ಜನ ವಿರೋಧಿ ನೀತಿಗಳನ್ನು ಜನರ ಗಮನಕ್ಕೆ ತಂದು ಮುಂದೆ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿ ಎಂದರು. ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ಪ್ರಕೋಷ್ಠದ ರಾಜ್ಯ ಸಂಚಾಲಕ ರಮೇಶ್ ಪರವಿನಾಯಕ್, ಮಾಜಿ ಸಂಚಾಲಕ ಗಣೇಶ್ ಯಾಜಿ ಇತರರು ಪಾಲ್ಗೊಂಡಿದ್ದರು.