Advertisement

ಬೆಂಕಿ ಅನಾಹುತಕ್ಕೆ ಸರ್ಕಾರ, ಗೃಹ ಸಚಿವರೇ ಹೊಣೆ

06:31 AM Feb 25, 2019 | |

ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದೇಶನದ ವೇಳೆ ಶನಿವಾರ ನೂರಾರು ಕಾರುಗಳು ಸುಟ್ಟು ಕರಕಲಾಗಿರುವ ಘಟನೆಗೆ ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರೇ ಹೊಣೆ ಎಂದು ಆರೋಪಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ, ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿದರು.

Advertisement

ಬಿಜೆಪಿ ರಾಜ್ಯ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯಡಿಯೂರಪ್ಪ, ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ವೇಳೆ ಪಾರ್ಕಿಂಗ್‌ ಸ್ಥಳದಲ್ಲಿ ನೂರಾರು ಕಾರುಗಳು ಬೆಂಕಿಗೆ ಆಹುತಿಯಾಗಿರುವುದು ದುರ್ದೈವದ ಸಂಗತಿ. ಶ್ರಮ ವಹಿಸಿ ಖರೀದಿಸಿದ್ದ ಕಾರು ಕಳೆದುಕೊಳ್ಳುವ ಜತೆಗೆ ಅದರಲ್ಲಿದ್ದ ದಾಖಲೆಗಳು ಹಾಗೂ ಬೆಲೆ ಬಾಳುವ ವಸ್ತುಗಳನ್ನು ತಮ್ಮದಲ್ಲದ ತಪ್ಪಿಗೆ ವಾಹನ ಮಾಲೀಕರು ಕಳೆದುಕೊಂಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಹಾಗೂ ಗೃಹ ಸಚಿವರೇ ಹೊಣೆ ಎಂದು ಆರೋಪಿಸಿದರು.

ಏರೋ ಇಂಡಿಯಾ ಅಂತಾರಾಷ್ಟ್ರೀಯ ಕಾರ್ಯಕ್ರಮವಾಗಿದ್ದು, ಸುಗಮವಾಗಿ ನಡೆಸಲು ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿತ್ತು. ಸಣ್ಣ ಪುಟ್ಟ ಕಾರ್ಯಕ್ರಮವಾದರೂ ಅಗ್ನಿ ಅವಘಡ ತಡೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿಶಾಮಕ ವಾಹನ, ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ ಅಂತಾರಾಷ್ಟ್ರೀಯ ಕಾರ್ಯಕ್ರಮ ನಡೆಯುತ್ತಿದ್ದರೂ ಅಗತ್ಯ ಪೊಲೀಸ್‌, ಅಗ್ನಿಶಾಮಕ ಹಾಗೂ ಆ್ಯಂಬುಲೆನ್ಸ್‌ ಸೇವೆ ಸೇರಿದಂತೆ ಸುರಕ್ಷತಾ ವ್ಯವಸ್ಥೆ ಕಲ್ಪಿಸದೆ ನಿರ್ಲಕ್ಷ್ಯ ತೋರಲಾಗಿದೆ. ಇದಕ್ಕೆ ಸರ್ಕಾರವೇ ಹೊಣೆ ಹೊರಬೇಕು ಎಂದು ಹೇಳಿದರು.

ವಾಹನ ನಿಲುಗಡೆ ಸ್ಥಳವನ್ನು ಅಗ್ನಿಶಾಮಕ ದಳದ ಅಧಿಕಾರಿಗಳು ಪರಿಶೀಲಿಸಿ ನಿರಾಕ್ಷೇಪಣಾ ಪತ್ರ ನೀಡಬೇಕಿತ್ತು. ಆದರೆ ಈ ಜವಾಬ್ದಾರಿ ನಿರ್ವಹಣೆಯಲ್ಲೂ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಖ್ಯಾತಿಗೆ ಧಕ್ಕೆ ಉಂಟಾಗುತ್ತದೆ ಎಂದು ದೂರಿದರು.
ಗೃಹ ಸಚಿವರು ಕೇವಲ 300 ಕಾರುಗಳು ಅಗ್ನಿ ಅನಾಹುತದಲ್ಲಿ ಭಸ್ಮವಾಗಿದ್ದು, ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಹೇಳಿರುವುದು ಆಘಾತಕಾರಿ ಸಂಗತಿ. 300 ಕಾರುಗಳು ಭಸ್ಮವಾಗಿರುವುದು ರಾಷ್ಟ್ರೀಯ ನಷ್ಟ. ಒಣಗಿದ ಹುಲ್ಲು ತೆರವು ಸೇರಿದಂತೆ ಇತರೆ ಮುನ್ನೆಚ್ಚರಿಕೆ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದ್ದರೆ ಈ ಅನಾಹುತವನ್ನು ತಪ್ಪಿಸಬಹುದಿತ್ತು ಎಂದರು.

ಕ್ಷಮೆ ಯಾಚಿಸಬೇಕು: ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಬ್ಬರೂ ಕಾರ್ಯಕ್ರಮಕ್ಕೂ ತಮಗೂ ಸಂಬಂಧವಿಲ್ಲದಂತೆ ಇದ್ದುದು ಬೇಜವಾಬ್ದಾರಿತನದ ಪರಮಾವಧಿ. ಸರ್ಕಾರ ಕೂಡಲೇ ಘಟನೆಗೆ ರಾಜ್ಯದ ಜನರ ಕ್ಷಮೆ ಯಾಚಿಸಬೇಕು. ಜತೆಗೆ ಕಾರು ಕಳೆದುಕೊಂಡವರಿಗೆ ವಿಮಾ ಪರಿಹಾರದ ಜತೆಗೆ ಇತರೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಘಟನೆ ಸಂಭವಿಸಿದ ಒಂದು ಗಂಟೆ ಬಳಿಕ ಅಗ್ನಿಶಾಮಕ ವಾಹನ ಸ್ಥಳಕ್ಕೆ ಧಾವಿಸಿತು ಎಂಬ ಮಾಹಿತಿ ಇದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಜವಾಬ್ದಾರಿ ನಿರ್ವಹಿಸಲು ವಿಫ‌ಲರಾದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಯಡಿಯೂರಪ್ಪ ಒತ್ತಾಯಿಸಿದರು.

Advertisement

ಜನ್ಮದಿನ ಆಚರಿಸದಿರಲು ತೀರ್ಮಾನ: “ನನ್ನ ಹುಟ್ಟುಹಬ್ಬ ದಿನವಾದ ಫೆ.27ರಂದು ಯಾರೊಬ್ಬರೂ ಸಿಹಿ ಹಂಚುವುದು, ಸಂಭ್ರಮಾಚರಣೆ ಕಾರ್ಯಕ್ರಮ ನಡೆಸಬಾರದು. ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿರುವುದು ಹಾಗೂ ಪುಲ್ವಾಮ ದಾಳಿಯಲ್ಲಿ ಯೋಧರು ಹುತಾತ್ಮರಾಗಿರುವ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ತೀರ್ಮಾನಿಸಿದ್ದೇನೆ,’ ಎಂದು ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ರಾಜಕೀಯ ಮಾಡುವುದೇನಿದೆ?
ಬೆಂಕಿ ಅನಾಹುತದಲ್ಲಿ ರಾಜಕೀಯ ಮಾಡುತ್ತಿಲ್ಲ. ವಾಸ್ತವಾಂಶ ತಿಳಿಸುವ ಕೆಲಸ ಮಾಡುತ್ತಿದ್ದೇನೆ. ಸೂಕ್ತ ಬಂದೋಬಸ್ತ್ ಕಲ್ಪಿಸಬೇಕಾದ್ದು ಸರ್ಕಾರದ ಕರ್ತವ್ಯ. ಅದನ್ನು ತಿಳಿಸಲಾಗಿದೆ.
-ಬಿ.ಎಸ್‌.ಯಡಿಯೂರಪ್ಪ

Advertisement

Udayavani is now on Telegram. Click here to join our channel and stay updated with the latest news.

Next