Advertisement

ಮೆರುಗು ತಂದ ನಾರಿಯರ ಸೀರೆ ಸೌಂದರ್ಯ

11:04 AM Nov 06, 2017 | |

ಹಂಪಿ: ವಿಶ್ವ ವಿಖ್ಯಾತ ಹಂಪಿ ಉತ್ಸವದ 2017ನೇ ಸಾಲಿನ ಅವತರಣಿಕೆ ಸಾಕಷ್ಟು ವಿಶೇಷಗಳಿಂದ ಕೂಡಿದ್ದು, ಶನಿವಾರ ತಡ ರಾತ್ರಿ ಗಾಯತ್ರಿ ಪೀಠದ ವೈಭವಯುತ ವೇದಿಕೆಯಲ್ಲಿ ಬೆಂಗಳೂರಿನ ಖ್ಯಾತ ವಸ್ತ್ರ ವಿನ್ಯಾಸಗಾರ ಅಶೋಕ್‌ ಮನ್ನೇ ಸೃಷ್ಟಿಸಿದ ಹಾಗೂ ವಿನ್ಯಾಸ ಮಾಡಿದ ಉಡುಪು, ಸೀರೆಗಳನ್ನು ಧರಿಸಿದ 120ಕ್ಕೂ ಅಧಿಕ ರೂಪದರ್ಶಿಯರು ಮಾರ್ಜಾಲ ನಡಿಗೆಯ ಮೂಲಕ ತಮ್ಮ ಬೆಡಗು-ಬಿನ್ನಾಣಗಳನ್ನು ಪ್ರದರ್ಶಿಸಿದರು.

Advertisement

ಕಾರ್ತಿಕ ಹುಣ್ಣಿಮೆಯ ಬೆಳದಿಂಗಳಿನಲ್ಲಿ ನೂರಾರು ಸುರಸುಂದರಿಯರು ಅಶೋಕ್‌ಮನ್ನೇ ಅವರು ವಿನ್ಯಾಸಗೊಳಿಸಿದ ಸೀರೆಗಳನ್ನು ಧರಿಸಿ ತಮ್ಮ ಬಳುಕಿನ ನಡೆಯ ಮೂಲಕ ನಡೆದರು. ನೆರೆದಿದ್ದ ಸಹಸ್ರಾರು ಮಹಿಳೆಯರು, ಗಣ್ಯ ಕುಟುಂಬದ ಮಹಿಳೆಯರು ಸೀರೆಗಳ ವಿನ್ಯಾಸಕ್ಕೆ ಮನಸೋತರು. ಬೆಂಗಳೂರಿನ ವೈಬ್‌ ಫ್ಯಾಶನ್‌ ಸಂಸ್ಥೆ ಈ ಫ್ಯಾಶನ್‌ ಶೋ ನಿರ್ವಹಿಸಿದ್ದು, ರ್‍ಯಾಂಪ್‌ ಮೇಲೆ ಇರಿಸಿದ್ದ ಕಾರ್ತಿಕ ಮಾಸದ ಸಾಂಪ್ರದಾಯಿಕ ದೀಪಗಳು ಮೆರುಗನ್ನು ಹೆಚ್ಚಿಸಿದವು. ಪಾಶ್ಚಾತ್ಯ ಶೈಲಿಯ ಫ್ಯಾಶನ್‌ ಶೋಗೆ ಭಾರತೀಯ ವಸ್ತ್ರ ವೈವಿಧ್ಯತೆಯ ಮೇರು ಸ್ಥಾನದಲ್ಲಿರುವ ಸೀರೆಗಳು ಹೊಸ ಆಯಾಮ ನೀಡುವುದರ ಜೊತೆಗೆ ಆಧುನಿಕತೆಗೆ ಸಂಪ್ರದಾಯಿಕ ಸ್ಪರ್ಶ ನೀಡಿದವು.

ದಿಗಂತ್‌-ಐಂದ್ರತಾ ರೈ: ಅಶೋಕ್‌ ಮನ್ನೇ ಅವರ ವಸ್ತ್ರ ವಿನ್ಯಾಸದ ಬೆಡಗಿಗೆ ನಟ ದಿಗಂತ್‌ ಹಾಗೂ ಕರಾವಳಿ ಬೆಡಗಿ ಐಂದ್ರಿತಾ ರೈ ಕಳೆ ತಂದರು. ಮೊದಲಿಗೆ ಕರಾವಳಿಯ ಯಕ್ಷಗಾನ ವೇಷಧಾರಿಗಳೊಂದಿಗೆ ರ್‍ಯಾಂಪ್‌ ವಾಕ್‌ ಮಾಡಿದ ದಿಗಂತ್‌ ಮಿರುಗುವ ಜರಿಯ ಕುಸುರಿಯಿದ್ದ ಕೆಂಪು ಬಣ್ಣದ ರೇಷ್ಮೆ ವಸ್ತ್ರದಲ್ಲಿ ರೂಪಿಸಿದ ಮಹಾರಾಜ ಪೋಷಾಕು ಹಾಗೂ ವಿಜಯನಗರ ಮಹಾರಾಜರ ಪೇಟಾ ಧರಿಸಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ನಟಿ ಐಂದ್ರಿತಾ ರೈ ಕನಕಾಂಬರ ಬಣ್ಣದ ರೇಶ್ಮೆ ಸೀರೆಯಲ್ಲಿ ತಳುಕು-ಬಳುಕಿನ ನಡೆಯೊಂದಿಗೆ ಆಗಮಿಸಿ ನೆರೆದಿದ್ದ ಪ್ರೇಕ್ಷಕರ ಶಿಳ್ಳೆ, ಕರತಾಡನಗಳಿಸಿದರು.
ಎಂ. ಮುರಳಿಕೃಷ

ಉತ್ತರ ಕರ್ನಾಟಕದ ಪ್ರಖ್ಯಾತ ಇಳಕಲ್‌ ಸೀರೆ ಹಾಗೂ ಮುದುಗಲ್‌ ಸೀರೆ ನೇಯುವ ನೇಕಾರರ ಸಹಸ್ರಾರು ಕುಟುಂಬಗಳು ಇಂದು ಸಂಕಷ್ಟದಲ್ಲಿವೆ. ವಿಶ್ವ ಮಟ್ಟದಲ್ಲಿ ಅವರ ಕುಶಲ ಕಲೆಗಳಿಗೆ ವೇದಿಕೆ ನೀಡಬೇಕು ಎನ್ನುವ
ಚಿಂತನೆಯೊಡನೆ ಈ ವಸ್ತ್ರ ವಿನ್ಯಾಸ ಪ್ರದರ್ಶನ ಏರ್ಪಡಿಸಿದ್ದೆವು. 
ಸಂತೋಷ್‌ ಲಾಡ್‌, ಕಾರ್ಮಿಕ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ. 

Advertisement

Udayavani is now on Telegram. Click here to join our channel and stay updated with the latest news.

Next