Advertisement
ನಿಯಮ 69ರ ಅಡಿ ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಸೇರಿದಂತೆ ಬಿಜೆಪಿ ಸದಸ್ಯರು ಚರ್ಚಿಸಿದ ವಿಷಯದ ಮೇಲೆ ಉತ್ತರ ನೀಡಿದ ಅವರು, ಬೆಂಗಳೂರು ಸೇರಿದಂತೆ ರಾಜ್ಯದ ನಗರ ಭಾಗಗಳಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾಫಿಯಾ ವ್ಯಾಪಕವಾಗಿ ಹರಡಿದ್ದು, ಇದನ್ನು ತಡೆಗಟ್ಟಲು ಯಾವುದೇ ಮುಲಾಜಿಲ್ಲದೇ ಗೂಂಡಾ ಕಾಯ್ದೆ ವ್ಯಾಪ್ತಿ ಅಡಿಯಲ್ಲಿ ಬಂಧಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
Related Articles
Advertisement
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್, ರಾಜ್ಯದಲ್ಲಿ 4 ರಿಂದ 5 ಲಕ್ಷ ವಿದ್ಯಾರ್ಥಿಗಳು ಹಾಗೂ ಯುವ ಸಮೂಹ ಡ್ರಗ್ಸ್ ವ್ಯಸನಿಗಳಾಗಿದ್ದಾರೆ. ಅಂತಹ ಮಕ್ಕಳಿಂದ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿದೆ. ರಾಜಧಾನಿಯಲ್ಲಿ ಸುಮಾರು 40 ರಿಂದ 50 ಡ್ರಗ್ಸ್ ಮಾರಾಟ ಮಾಡುವ ಮಾಫಿಯಾದ ಲೀಡರ್‌ಗಳಿದ್ದಾರೆ. ಅವರ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿದರೆ, ಅವರಿಗೆ ಎಚ್ಚರಿಕೆ ಸಂದೇಶ ರವಾನಿಸಿದಂತಾಗುತ್ತದೆ ಎಂದರು.
ಅಲ್ಲದೇ ಉಗಾಂಡಾದಂತಹ ದೇಶಗಳಿಂದ ಭಾರತಕ್ಕೆ ವಿದ್ಯಾಭ್ಯಾಸದ ನೆಪದಲ್ಲಿ ಬರುವ ಯುವಕರು ಮಾತ್ರೆಗಳ ರೂಪದಲ್ಲಿ ಡ್ರಗ್ಸ್ ತೆಗೆದುಕೊಂಡು ಬರುತ್ತಿದ್ದಾರೆ. ಒಬ್ಬ ಮಹಿಳೆ ಲಕ್ಸ್ ಸೋಪ್‌ನಲ್ಲಿ ಕೊಕೇನ್ ತೆಗೆದುಕೊಂಡು ಬಂದಿದ್ದರು. ಕಳೆದ ಎರಡು ಮೂರು ವರ್ಷದಲ್ಲಿ ಡ್ರಗ್ಸ್ ರಾಕೆಟ್ ವ್ಯಾಪಕವಾಗಿ ಹಬ್ಬಿದೆ. ಪಂಜಾಬ್‌ನಲ್ಲಿ ಸರ್ಕಾರಿ ಉದ್ಯೋಗಿಗಳೂ ಕಚೇರಿಗೆ ಬರಬೇಕಾದರೆ ಡ್ರಗ್ಸ್ ತಪಾಸಣೆಗೆ ಒಳಗಾಗುವ ಪರಿಸ್ಥಿತಿ ಇದೆ. ರಾಜ್ಯದಲ್ಲಿಯೂ ಅಂತಹ ಪರಿಸ್ಥಿತಿ ಬರದಂತೆ ಕಠಣಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇತ್ತೀಚೆಗೆ ಬೆಂಗಳೂರಿನ ಬನ್ನೇರುಘಟ್ಟದ ಫಾರಂಗಳಲ್ಲಿಯೇ ನೈಜಿರಿಯಾದಿಂದ ಗಾಂಜಾ, ಕೊಕೆನ್ ಬೀಜ ತಂದು ಬೆಳೆಯಲಾಗುತ್ತಿದೆ. ಕೇರಳ ಸರ್ಕಾರ ಡ್ರಗ್ಸ್ ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ವಿಶೇಷ ತನಿಖಾ ತಂಡ ಹಾಗೂ ಕೋರ್ಟ್‌ನಲ್ಲಿ ವಾದ ಮಾಡಲು ತರಬೇತಿ ಪಡೆದ ವಕೀಲರ ತಂಡವನ್ನೂ ನೇಮಿಸಿದೆ. ರಾಜ್ಯದಲ್ಲಿಯೂ ಅದೇ ಮಾದರಿಯಲ್ಲಿ ವಿಶೇಷ ತನಿಖಾ ತಂಡ ರಚಿಸುವಂತೆ ಆಗ್ರಹಿಸಿದರು.
ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಭಾಗಿಯಾದವರನ್ನು ಪೊಲಿಸರು ಬಂಧಿಸಿದರೂ ಹದಿನೈದು ದಿನದಲ್ಲಿ ಮತ್ತೆ ಬೇಲ್‌ಮೇಲೆ ಹೊರಗೆ ಬರುತ್ತಾರೆ. ಮತ್ತೆ ಅದೇ ಕೆಲಸ ಮಾಡುತ್ತಾರೆ. ಅವರ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸುವುದು ಅಗತ್ಯವಿದೆ ಎಂದು ಹೇಳಿದರು.
ಆರೋಗ್ಯ ಇಲಾಖೆಯವರು ಸುತ್ತೋಲೆ ಹೊರಡಿಸಿ ಪೊಲಿಸ್ ಇಲಾಖೆ ಸರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದೆ. ಇದು ಹಾಸ್ಯಾಸ್ಪದ ಎಂದು ಹೇಳಿದರು. ಬಿಜೆಪಿಯ ಅರವಿಂದ ಲಿಂಬಾವಳಿ, ವಿ. ಸೊಮಣ್ಣ, ರವಿ ಸುಬ್ರಮಣ್ಯ, ಆರ್. ಪೂರ್ಣಿಮಾ, ಡಾ. ಅಶ್ವತ್ಥ್ ನಾರಾಯಣ ಕಾಂಗ್ರೆಸ್‌ನ ಎನ್.ಎ. ಹ್ಯಾರಿಸ್ ಮಾತನಾಡಿದರು.
ಡ್ರಗ್ಸ್ ಪತ್ತೆ ಹಚ್ಚುವ ಜರ್ಮನ್ ನಾಯಿ: ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಾವು ಜರ್ಮನಿಗೆ ಹೋದಾಗ ಅಲ್ಲಿನ ನಾಯಿ ಬಂದು ಅವರನ್ನು ಮೂಸಿ ನೋಡಿತಂತೆ, ಆ ನಾಯಿ ಕನಿಷ್ಠ ಆರು ತಿಂಗಳ ಮುಂಚೆ ಯಾವುದಾದರೂ ಮಾದಕ ದ್ರವ್ಯ ತೆಗೆದುಕೊಂಡರೆ ಪತ್ತೆ ಹಚ್ಚುತ್ತದೆಯಂತೆ ಎಂದು ಹೇಳಿದರು. ಆ ನಾಯಿಯನ್ನು ರಾಜ್ಯಕ್ಕೂ ತರೆಸಿ ಎಂದು ಅರವಿಂದ ಲಿಂಬಾವಳಿ ಸಲಹೆ ನೀಡಿದರು. ನಮ್ಮ ನಾಯಿಗಳಿಗೇ ತರಬೇತಿ ನೀಡಿದರೆ, ಆ ಕೆಲಸ ಮಾಡುತ್ತವೆ ಎಂದು ಪರಮೇಶ್ವರ್ ಹೇಳಿದರು. ನಮ್ಮ ನಾಯಿಗಳು ಪ್ರತಿಪಕ್ಷದವರನ್ನು ಮಾತ್ರ ಪತ್ತೆಹಚ್ಚುತ್ತವೆ ಎಂದರು.
ಡ್ರಗ್ಸ್ ಮಾರಾಟ ಜಾಲದ ಬಗ್ಗೆ ಪೊಲಿಸರಿಗೆ ಸ್ಪಷ್ಟವಾಗಿ ಗೊತ್ತಿರುತ್ತದೆ. ದೂರು ಕೊಟ್ಟರೆ ಕ್ರಮ ತೆಗೆದುಕೊಂಡಂತೆ ಮಾಡುತ್ತಾರೆ. ಈ ವ್ಯವಹಾರ ಹೀಗೆ ಮುಂದುವರೆಯಲು ಬಿಟ್ಟರೆ, ದೇಶ ಹಾಳು ಮಾಡಲು ಪಾಕಿಸ್ತಾನ ಬೇಡ. ನರ ಸತ್ತ ಯುವ ಜನಾಂಗ ಸೃಷ್ಠಿ ಮಾಡಿದರೆ ದೇಶ ಹಾಳಾಗುವುದರಲ್ಲಿ ಸಂದೇಹವಿಲ್ಲ. ಕರ್ನಾಟಕವನ್ನು ಡ್ರಗ್ಸ್ ಫ್ರೀ ರಾಜ್ಯ ಎಂದು ಹೇಳುವಂತೆ ಮಾಡಬೇಕು.-ಸುರೇಶ್ ಕುಮಾರ್, ಬಿಜೆಪಿ ಸದಸ್ಯ ಡ್ರಗ್ಸ್ ಹಾವಳಿ ಕುರಿತು ಹಿರಿಯ ಅಧಿಕಾರಿಗಳ ಸಭೆ ಕರೆದು. ಜಿಲ್ಲಾ ಮಟ್ಟದಲ್ಲಿ ಎಸ್ಪಿಗಳಿಗೆ ಸೂಚನೆ ಕೊಡಿ, ಡ್ರಗ್ಸ್ ಮಾಫಿಯಾ ಮಟ್ಟ ಹಾಕುವ ಅಧಿಕಾರಿಗಳಿಗೆ ಅವಾರ್ಡ್ ಕೊಡುವ ಮೂಲಕ ಪ್ರೋತ್ಸಾಹ ನೀಡಬೇಕು. ಜೈಲುಗಳಿಗೂ ಅವ್ಯಾಹತವಾಗಿ ಡ್ರಗ್ಸ್ ಸಾಗಾಟ ಆಗುವುದನ್ನೂ ತಡೆಯಬೇಕು.
-ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷದ ನಾಯಕ. ರಾಜ್ಯ ಸರ್ಕಾರ ಪೊಲಿಸ್ ಅಧಿಕಾರಿಗಳು ಮತ್ತು ಶಾಲಾ ಕಾಲೇಜು ಪ್ರಾಂಶುಪಾಲರ ಸಭೆ ಕರೆದು ಕಠಿಣ ಎಚ್ಚರಿಕೆ ನೀಡಬೇಕು. ಈ ರೀತಿಯ ಅಪರಾಧಗಳಲ್ಲಿ ತೊಡಗುವವರ ಬಗ್ಗೆ ಶಿಫಾರಸ್ಸು ಮಾಡುವುದನ್ನು ಬಿಟ್ಟರೆ ಶೇಕಡಾ 50 ರಷ್ಟು ಅಪರಾಧಗಳು ಕಡಿಮೆಯಾಗುತ್ತವೆ.
-ಕೃಷ್ಣಾ ರೆಡ್ಡಿ, ಉಪ ಸಭಾಧ್ಯಕ್ಷ.