Advertisement

ನಾವು ಮಾಡಿದ ಸತ್ಕರ್ಮಗಳು ಶಾಶ್ವತವಾಗಿರುತ್ತವೆ: ಧರ್ಮದರ್ಶಿ ಅಣ್ಣಿ ಶೆಟ್ಟಿ

01:25 PM Sep 09, 2019 | Suhan S |

ಮುಂಬಯಿ, ಸೆ. 8: ನಮಗೆಲ್ಲರಿಗೂ ತಿಳಿದಿರುವಂತೆ ಬಡಗು ತಿಟ್ಟಿನ ಕಾಳಿಂಗ ನಾವಡರಂತೆ ಪ್ರಸಿದ್ಧ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರರ ಹಾಡು ಕೇಳಲು ಬರುವ ಅಭಿಮಾನಿಗಳು ಈ ಮಹಾನಗರದಲ್ಲಿ ತುಂಬಾ ಮಂದಿ ಇದ್ದಾರೆ. ಅದಕ್ಕೆ ಇಂದು ನೆರೆದಿರುವ ಪ್ರೇಕ್ಷಕರೇ ಸಾಕ್ಷಿ. ಅವರನ್ನು ಇಂದು ಧರ್ಮಶಾಸ್ತದ ವತಿಯಿಂದ ಸಮ್ಮಾನಿಸಿದ್ದು ಶ್ಲಾಘನೀಯ. ಅವರಿಗೆ ತಾಯಿ ಮೂಕಾಂಬಿಕೆಯ ಅನುಗ್ರಹ ಸದಾ ಇರಲಿ. ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆಯ ಮುಖಾಂತರ ಅಧ್ಯಕ್ಷರಾದ ಜಗದೀಶ್‌ ಶೆಟ್ಟಿ ನಂದಿಕೂರುರವರ ನೇತೃತ್ವದಲ್ಲಿ ಪ್ರತೀ ವರ್ಷ ಅಯ್ಯಪ್ಪ ಪೂಜೆಯ ಜತೆಗೆ ನಿರಂತರ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳು ನಡೆಯುತ್ತಾ ಇದೆ. ಒಬ್ಬ ಜೀವನದಲ್ಲಿ ತುಂಬಾ ಸತ್ಕಾರ್ಯ ಮಾಡಿದವ ಸತ್ತರೆ ತುಂಬಾ ಜನ ಸೇರುತ್ತಾರೆ. ಅಂತ್ಯಕ್ರಿಯೆಯ ನಂತರ ಯಾರು ಇರುವುದಿಲ್ಲ. ಆದರೆ ಅವನು ಮಾಡಿದ ಸತ್ಕಾರ್ಯ ಮಾತ್ರ ಶಾಶ್ವತವಾಗಿರುತ್ತದೆ. ಇಲ್ಲಿ ನಿರಂತರ ಬರುವ ಮಳೆಯ ನಡುವೆಯೂ ಯಕ್ಷಗಾನ ಪ್ರದರ್ಶನಕ್ಕೆ ಪ್ರೇಕ್ಷಕರ ಕೊರತೆ ಎಂದೂ ಆಗಲಿಲ್ಲ. ನಿಮಗೆಲ್ಲರಿಗೂ ತಾಯಿ ಮೂಕಾಂಬಿಕೆಯ ಅನುಗ್ರಹ ಸದಾ ಇರಲಿ ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಅಧ್ಯಕ್ಷರಾದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ನುಡಿದರು.

Advertisement

ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದಲ್ಲಿ ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಸಿರಿಕಲಾ ಮೇಳ ಬೆಂಗಳೂರು ಹಾಗೂ ಅತಿಥಿ ಕಲಾವಿದರಿಂದ ಜರಗಿದ ಯಕ್ಷ ಸಪ್ತಾಹದ 5 ನೇ ದಿನದಂದು ಪ್ರದರ್ಶನಗೊಂಡ ರಾಜಾ ರುದ್ರಕೋಪ ಯಕ್ಷಗಾನ ಬಯಲಾಟದ ಮಧ್ಯೆ ಜರಗಿದ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಹಾರೈಸಿದರು.

ಅತಿಥಿಗಳಾಗಿ ಭಾರತ್‌ ಬ್ಯಾಂಕಿನ ಮಾಜಿ ನಿರ್ದೇಶಕರಾದ ಅಶೋಕ್‌ ಕೋಟ್ಯಾನ್‌, ಯಕ್ಷಮಾನಸ ಮುಲುಂಡ್‌ ಇದರ ಅಧ್ಯಕ್ಷ ಶೇಖರ್‌ ಶೆಟ್ಟಿ, ಉದ್ಯಮಿಗಳಾದ ಮೋಹನ್‌ ಶೆಟ್ಟಿ ಮಜ್ಜಾರ್‌, ವಿಜಯ್‌ ಪೂಜಾರಿ ಗೋಳಿಹೊಳೆ, ರಾಜೇಂದ್ರ ಶೆಟ್ಟಿ ಘನ್ಸೋಲಿ, ಪದ್ಮನಾಭ ಶೆಟ್ಟಿ ಬಂಟ್ವಾಳ ಹಾಗೂ ಶ್ರೀ ಮೂಕಾಂಬಿಕಾ ಧರ್ಮಶಾಸ್ತ ಸೇವಾ ಸಂಸ್ಥೆಯ ಪರವಾಗಿ ಅಧ್ಯಕ್ಷರಾದ ನಂದಿಕೂರು ಜಗದೀಶ್‌ ಶೆಟ್ಟಿ, ಉಪಾಧ್ಯಕ್ಷರಾದ ಪದ್ಮನಾಭ ಸಿ. ಶೆಟ್ಟಿ, ಜತೆ ಕಾರ್ಯದರ್ಶಿ ತಾಳಿಪಾಡಿಗುತ್ತು ಭಾಸ್ಕರ್‌ ಎಂ. ಶೆಟ್ಟಿ , ಜತೆ ಕೋಶಾಧಿಕಾರಿ ಸತೀಶ್‌ ಎಸ್‌. ಪೂಜಾರಿ, ಸದಸ್ಯರಾದ ಗಣೇಶ್‌ ದೇವಾಡಿಗ ಆಕಳಬೈಲು ಮತ್ತು ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಸುರೇಶ್‌ ಎಸ್‌ ಕೋಟ್ಯಾನ್‌ರವರು ಅತಿಥಿ-ಗಣ್ಯರನ್ನು ಸ್ವಾಗತಿಸಿದರು. ಪದಾಧಿಕಾರಿಗಳು ಅತಿಥಿ ಗಣ್ಯರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಬಡಗು ತಿಟ್ಟಿನ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಅನ್ನ ಪ್ರಸಾದ ಸೇವೆ ನೀಡಿದ ಬಂಧು ಮಿತ್ರ ಬಳಗ ವಾಶಿ ಇದರ ಸದಸ್ಯ ದಿನೇಶ್‌ ಕೋಟ್ಯಾನ್‌ ಹಾಗೂ ಯಕ್ಷಪ್ರೇಮಿ ಸಂಘಟಕ ಗಣೇಶ ದೇವಾಡಿಗ ಆಕಳಬೈಲು ಇವರನ್ನು ಸಮ್ಮಾನಿಸಲಾಯಿತು.

ಸಮ್ಮಾನ ಸ್ವೀಕರಿಸಿದ ಸುಬ್ರಹ್ಮಣ್ಯ ಧಾರೇಶ್ವರ ಅವರು ಮಾತನಾಡಿ, ಮೇಳದಲ್ಲಿರುವಾಗ ಪ್ರತೀ ವರ್ಷ ಮುಂಬಯಿಗೆ ಬರುತ್ತಿದ್ದೆ. ಈಗ ನಿವೃತ್ತಿ ಹೊಂದಿದ ಬಳಿಕ ಸಿರಿಕಲಾ ಮೇಳದ ಮುಖಾಂತರ ಈ ನಗರಕ್ಕೆ ಬರುತ್ತಿದ್ದೇನೆ. ಮುಂಬಯಿಯಲ್ಲಿ ಯಕ್ಷಗಾನವು ಬೇರೂರಿ ಹೆಮ್ಮರವಾಗಿದೆ. ಮುಂಬಯಿಯಲ್ಲಿ ಯಕ್ಷಗಾನಕ್ಕೆ ವ್ಯಾಪಾರದ ಸೊಂಕು ಕೂಡ ಇಲ್ಲ. ಯಾವುದೇ ರಂಗಭೂಮಿಯ ಕಲೆ ಯಕ್ಷಗಾನದಷ್ಟು ದೃಢವಾಗಿ ಬೆಳೆದಿಲ್ಲ. ಇಲ್ಲಿ ಯಕ್ಷಗಾನ ಶಿಬಿರ ಇದೆ. ಹಲವಾರು ಗುರುಗಳೂ ಇದ್ದಾರೆ. ಇಲ್ಲಿ ಯಕ್ಷಗಾನಕ್ಕೆ ತುಂಬಾ ಪ್ರೋತ್ಸಾಹ ಸಿಗುತ್ತಿದೆ. ಮುಂದೆ ನಮ್ಮ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯವರು ಪಾಕಿಸ್ಥಾನಕ್ಕೆ ನೆಲೆಸಲು ಹೋದರೂ ಅಲ್ಲಿಯೂ ಯಕ್ಷಗಾನವನ್ನು ಖಂಡಿತಾ ಆರಂಭಿಸುತ್ತಾರೆ. ಅವರು ಯಕ್ಷಗಾನವನ್ನು ಅಷ್ಟು ಪ್ರೋತ್ಸಾಹಿಸುತ್ತಾರೆ. ತಾಯಿಯ ಸನ್ನಿಧಿಯಲ್ಲಿ ನನ್ನನ್ನು ಸನ್ಮಾನಿಸಿದ ನಿಮಗೆಲ್ಲರಿಗೂ ಚಿರಋಣಿ ಎಂದರು.

Advertisement

ಅಶೋಕ್‌ ಕೋಟ್ಯಾನ್‌ರವರು ಮಾತನಾಡಿ, ಅಣ್ಣಿ ಶೆಟ್ಟಿಯವರ ನೇತೃತ್ವದಲ್ಲಿ ಈ ಕ್ಷೇತ್ರದಲ್ಲಿ ನಿರಂತರ ಯಲಕ್ಷ,ಗಾನ ಪ್ರದರ್ಶನ ಜರಗುತ್ತಿದೆ. ಇಲ್ಲಿ ನೆರೆದ ಪ್ರೇಕ್ಷರನ್ನು ನೋಡುವಾಗ ತುಂಬಾ ಸಂತೋಷವಾಗುತ್ತದೆ. ಸಿರಿಕಲಾ ಮೇಳದವರು ಒಳ್ಳೆಯ ಪ್ರದರ್ಶನ ನೀಡಿದ್ದಾರೆ. ಅವರ ಸೇವೆ ಹೀಗೆಯೇ ಮುಂದುವರಿಯುತ್ತಿರಲಿ. ನಿಮಗೆಲ್ಲರಿಗೂ ತಾಯಿ ಮೂಕಾಂಬಿಕೆಯ ಆಶೀರ್ವಾದ ಸದಾ ಇರಲಿ ಎಂದರು.

ಶೇಖರ್‌ ಶೆಟ್ಟಿ ಮಾತನಾಡಿ, ಮುಂಬಯಿಯ ಘನ್ಸೋಲಿಯಲ್ಲಿ ನಡೆಯುವಷ್ಟು ಯಕ್ಷಗಾನ ಬೇರೆಲ್ಲಿಯೂ ನಡೆಯುವುದಿಲ್ಲ. ಈ ಕ್ಷೇತ್ರದಲ್ಲಿ ಧಾರ್ಮಿಕ ಕಾರ್ಯದ ಜತೆಗೆ ಸಾಂಸ್ಕೃತಿಕ ಸಾಮಾಜಿಕ ಚಟುವಟಿಕೆಗಳು ನಿರಂತರ ನಡೆಯುತ್ತಿದೆ. ಮುಂಬಯಿಯಲ್ಲಿರುವ ನಮ್ಮ ತುಳು ಕನ್ನಡಿಗರ ಇಂತಹ ಕ್ಷೇತ್ರಗಳು ಒಂದು ಧಾರ್ಮಿಕ ಪರಿಸರವನ್ನು ನಿರ್ಮಿಸಿ ಆಧ್ಯಾತ್ಮಿಕತೆಯಿಂದ ಮನಃ ಶಾಂತಿಯನ್ನು ಒದಗಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.

ಸುರೇಶ್‌ ಎಸ್‌ ಕೋಟ್ಯಾನ್‌ನವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ನಂತರ ಸಿರಿಕಲಾ ಮೇಳದವರಿಂದ ರಾಜಾ ರುದ್ರಕೋಪ ಯಕ್ಷಗಾನ ಪ್ರದರ್ಶನ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಬಂಧು ಮಿತ್ರ ಬಳಗ ವಾಶಿ ಇವರಿಂದ ಅನ್ನ ಪ್ರಸಾದ ವಿತರಿಸಲಾಯಿತು.

ಜಲ್ಗಾಂವ್‌ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ:

ಮುಂಬಯಿ, ಸೆ. 8: ‘ಬೇಟಿ ಬಚಾವೊ ಬೇಟಿ ಪಢಾವೊ’ ಈ ಅಭಿಯಾನದ ಅಡಿಯಲ್ಲಿ ಉತ್ಕೃಷ್ಟ ಕಾರ್ಯ ಮಾಡಿದ ಜಲ್ಗಾಂವ್‌ ಜಿಲ್ಲೆಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾರಂಭವು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಲ್ಲಿ ಆಯೋಜಿಸಲಾಯಿತು. ಜಲ್ಗಾಂವ್‌ ಕಲೆಕ್ಟರ್‌ ಅವಿನಾಶ್‌ ಢಕಣೆ ಅವರು ಕೇಂದ್ರ ಸಚಿವ ಸ್ಮೃತಿ ಇರಾನಿ ಅವರ ಕೈಯಿಂದ ಪುರಸ್ಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ವಿಜಯ್‌ ಸಿಂಗ್‌ ಪರ್ದೇಶಿ ಉಪಸ್ಥಿತರಿದ್ದರು.
Advertisement

Udayavani is now on Telegram. Click here to join our channel and stay updated with the latest news.

Next