Advertisement

ಶ್ರೀ ಕೃಷ್ಣ ಮಠದ ಸುವರ್ಣ ಗೋಪುರ ಮೂರು ತಿಂಗಳೊಳಗೆ ಸಿದ್ಧ

12:30 AM Feb 14, 2019 | |

ಉಡುಪಿ: ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ‌ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಸುವರ್ಣ ಗೋಪುರ ನಿರ್ಮಾಣ ಕಾರ್ಯ 3 ತಿಂಗಳೊಳಗೆ ಪೂರ್ಣಗೊಳ್ಳಲಿದೆ.

Advertisement

ಸ್ಥಳೀಯ ಕುಶಲ ಕರ್ಮಿಗಳ ನೆರವಿನೊಂದಿಗೆ ಶಿಲ್ಪಿಗಳು ನಿರ್ಮಿಸುತ್ತಿದ್ದು, ಪ್ರಸ್ತುತ ಗರ್ಭಗುಡಿಯ ಸುವರ್ಣ ಮೇಲ್ಛಾವಣಿಯ ಕೆಲಸ ಪ್ರಗತಿಯಲ್ಲಿದೆ. 

ಅಧುನಿಕ ತಂತ್ರಜ್ಞಾನದ ಮೂಲಕ ಬೆಳ್ಳಿ ತಗಡಿನ ಮೇಲೆ ಚಿನ್ನವನ್ನು ಹೊದೆಸಲಿದ್ದು, ದೀರ್ಘ‌ಕಾಲ ಬಾಳಿಕೆ ಬರಲಿದೆ. ಒಂದು ಸಾವಿರ ಡಿಗ್ರಿ ಸೆ. ಉಷ್ಣಾಂಶದಲ್ಲಿ ಕಾಯಿಸಿದಾಗ ಮಾತ್ರ ಇವುಗಳನ್ನು ಬೇರ್ಪಡಬಹುದೇ ಹೊರತು ಬೇರೆ ಯಾವುದರಿಂದಲೂ ಸಾಧ್ಯವಿಲ್ಲ. ಹಾಗಾಗಿ ಸಾಮಾನ್ಯ ಉಷ್ಣಾಂಶದಿಂದ ಸುವರ್ಣ ಹೊದಿಕೆಗೆ ಯಾವುದೇ ನಷ್ಟವಾಗದು.

ಮೂರು ಹಂತಗಳಲ್ಲಿ ತಯಾರಿಕೆ 
ಮೊದಲಿಗೆ ಬೆಳ್ಳಿಯನ್ನು ಕರಗಿಸಿ 170 ಗ್ರಾಂನ ದಾರು(ಗಟ್ಟಿ)ಗಳನ್ನು ಹಾಗೂ ಬಂಗಾರ ಕರಗಿಸಿ 20 ಗ್ರಾಂನ ದಾರು ತಯಾರಿಸಿಕೊಳ್ಳಲಾಗುತ್ತದೆ. ಮೂರನೇ ಹಂತದಲ್ಲಿ ಬೆಳ್ಳಿಯ ಮೇಲೆ ಬಂಗಾರದ ದಾರುವನ್ನು ಜತೆಯಾಗಿ ರೋಲಿಂಗ್‌ ಯಂತ್ರಕ್ಕೆ ನೀಡಿ ಪಟ್ಟಿ ರೂಪಿಸಲಾಗುತ್ತದೆ. 

ಗೋಪುರಕ್ಕೆ ಪ್ರಥಮವಾಗಿ ಮರ, ಆನಂತರ ತಾಮ್ರ, ಕೊನೆಯದಾಗಿ ಬೆಳ್ಳಿ ಮತ್ತು ಚಿನ್ನದ ಹೊದಿಕೆ ಅಳವಡಿಸಲಾಗುತ್ತದೆ. ಮಳೆಯ ನೀರು ನಿಲ್ಲದಂತೆಯೂ ಎಚ್ಚರ ವಹಿಸಲಾಗಿದೆ. 

Advertisement

ಮಠದ ಆವರಣದಲ್ಲಿ ಸ್ಥಳೀಯರಾದ ಸುರೇಶ್‌ ಶೇಟ್‌ ಹಾಗೂ ವೆಂಕಟೇಶ್‌ ಶೇಟ್‌ ಉಸ್ತುವಾರಿಯಲ್ಲಿ ಚಿನ್ನ-ಬೆಳ್ಳಿ ತಗಡು ನಿರ್ಮಾಣ ಕಾರ್ಯ ನಡೆದಿದ್ದರೆ, ತಾಮ್ರದ ಹೊದಿಕೆ ನಿರ್ಮಾಣ ಕೆಲಸ ಬೆಂಗಳೂರಿನಲ್ಲಿ ಪ್ರಗತಿಯಲ್ಲಿದೆ. ಹಿರಿಯಡಕದ ಗಣೇಶ್‌ ಆಚಾರ್ಯ ನೇತೃತ್ವದಲ್ಲಿ ನಡೆಯುತ್ತಿರುವ ದಾರುಶಿಲ್ಪದ ಕೆಲಸ 15 ದಿನಗಳಲ್ಲಿ ಪೂರ್ಣಗೊಳ್ಳಲಿದೆ. 

ರಾಜ್‌ಕೋಟ್‌ನಿಂದ ಹೊಸ ಯಂತ್ರ
ಕೊಯಮತ್ತೂರಿನಿಂದ ತರಿಸಿದ ಯಂತ್ರದಿಂದ ಚಿನ್ನ ಹಾಗೂ ಬೆಳ್ಳಿಯ ತಗಡನ್ನು ನಿರ್ಮಿಸಲಾಗುತ್ತಿದೆ. ಈ ಯಂತ್ರದಲ್ಲಿ ದಿನವೊಂದಕಕೆ 16.50 ಇಂಚು ಉದ್ದ, 5 ಇಂಚು ಅಗಲ, 30 ಗೇಜ್‌ ಆಳತೆಯ 70 ತಗಡುಗಳನ್ನು ತಯಾರಿಸಬಹುದು. ಆದರೆ ಕಾಲಾವಕಾಶ ಕಡಿಮೆ ಇರುವ ಕಾರಣ ನಿತ್ಯವೂ 125 ತಗಡಿನ ಹಾಳೆ ತಯಾರಿಸುವ ಎರಡು ಅತ್ಯಾಧುನಿಕ ತಂತ್ರಜ್ಞಾನದಯಂತ್ರಗಳನ್ನು ರಾಜ್‌ಕೋಟದಿಂದ ತರಿಸಿಕೊಳ್ಳಲಾಗಿದೆ. 

ಐದು ತಿಂಗಳಿಂದ ಚಿನ್ನ ಹಾಗೂ ಬೆಳ್ಳಿ ತಗಡು ತಯಾರಿಸಲಾಗುತ್ತಿದೆ. ಇದರಿಂದ ಚಿನ್ನ ವ್ಯಯವಾಗುವುದಿಲ್ಲ. ಜತೆಗೆ ಸಾವಿರ ವರ್ಷ ಕಳೆದರೂ ಚಿನ್ನದ ತಗಡನ್ನು ಬೆಳ್ಳಿಯಿಂದ ಪ್ರತ್ಯೇಕಿಸಲಾಗದು. ಇದನ್ನು ಸ್ಥಳೀಯರೇ ಅತ್ಯಂತ ಆಕರ್ಷಕವಾಗಿ ರೂಪಿಸುತ್ತಿರುವುದು ವಿಶೇಷ.
– ಸಚ್ಚಿದಾನಂದ ರಾವ್‌, ಸುವರ್ಣ ಗೋಪುರ ಗುಣಮಟ್ಟದ ಮೇಲ್ವಿಚಾರಕ

ಶ್ರೀಕೃಷ್ಣ ಮಠದ ಗೋಪುರಕ್ಕೆ ಚಿನ್ನದ ಹೊದಿಕೆ ಕಾರ್ಯ ಭರದಿಂದ ಸಾಗುತ್ತಿದೆ. ಶೀಘ್ರವೇ ಕೆಲಸವನ್ನು ಮುಗಿಸಿ ಸಮರ್ಪಿಸಲಾಗುವುದು.
– ಶ್ರೀವಿದ್ಯಾಧೀಶ ಶ್ರೀಪಾದರು, 
ಪರ್ಯಾಯ ಪಲಿಮಾರು ಮಠ

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next