Advertisement
ಆ ಬಗ್ಗೆ ಕೇಳಿದಾಗಲೆಲ್ಲಾ, ನಾಳೆ ಎಂಬ ಉತ್ತರ ಬರುತ್ತಿರುತ್ತದೆ. ನಾಳೆಯೂ ಬರುವುದಿಲ್ಲ, ಆತನ ತಂದೆಯೂ ಬಂದಿರುವುದಿಲ್ಲ. ಅದೇ ಕಾರಣಕ್ಕೆ ನಾಳೆಗಳ ಬಗ್ಗೆ ಬೇಸರ ಅವನಿಗೆ. ಆದರೆ, ಅದೊಂದು ಫೋಟೋ ಅವನ ನಂಬಿಕೆಗಳನ್ನು ಬುಡಮೇಲು ಮಾಡಿಬಿಡುತ್ತದೆ. ಆ ಫೋಟೋ ಬೇರ್ಯಾರಧ್ದೋ ಅಲ್ಲ, ಅವನ ತಂದೆಯದು. ಆ ಫೋಟೋವನ್ನು ಅವನು ಇನ್ನಾರಧ್ದೋ ಮನೆಯಲ್ಲಿ ನೋಡುತ್ತಾನೆ.
Related Articles
Advertisement
ಸಿಟಿ ಜನರಿಗೆ ರೈತರಿಗೆ ಸಮಸ್ಯೆಗಳಿವೆ ಎಂದೇನೋ ಗೊತ್ತಿವೆ. ಆದರೆ, ಏನೆಲ್ಲಾ ಸಮಸ್ಯೆಗಳೇನಿವೆ ಮತ್ತು ಅದನ್ನು ಹೇಗೆ ಪರಿಹರಿಸಬಹುದು ಎಂದು ಗೊತ್ತಾಗಬೇಕಿದ್ದರೆ “ಬಂಗಾರ’ ನೋಡಬೇಕು. ಆ ಮಟ್ಟಿಗೆ ಇದು ಒಂದು ವಿಷಯ ಅಥವಾ ಸಮಸ್ಯೆಗೆ ಸೀಮಿತವಾಗಿಲ್ಲ. ಭೂಮಿ, ಬೀಜ, ನೀರು, ವಿದ್ಯುತ್, ಮಾರುಕಟ್ಟೆ, ದರ ನಿಗದಿ ಸ್ವಾತಂತ್ರ್ಯ, ದಲ್ಲಾಳಿಗಳ ಕಾಟ … ಹೀಗೆ ರೈತರು ಎದುರಿಸುತ್ತಿರುವ ನಾನಾ ಸಮಸ್ಯೆಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.
ಹಾಗಾಗಿ ರೈತರಿಗಿಂಥ ಹೆಚ್ಚಾಗಿ ಜನ ಸಾಮಾನ್ಯರು ಮತ್ತು ಅದರಲ್ಲೂ ಸಿಟಿ ಜನರು ತಪ್ಪದೇ ನೋಡಬೇಕಾದ ಸಿನಿಮಾ. ಹಾಗೆ ನೋಡಿದರೆ, ಚಿತ್ರದ ಕಥೆ ಅದ್ಭುತ ಎಂದು ಹೇಳುವುದು ಕಷ್ಟ. ವಿದೇಶದಲ್ಲಿರುವ ಒಬ್ಬ ತರುಣ ತನ್ನೂರಿಗೆ ಬಂದು ತನ್ನ ಜನರಿಗೆ ಸ್ಪಂದಿಸುವ ಕಥೆ ಇದು. ಇತ್ತೀಚೆಗೆ ಬಂದ “ರಾಜಕುಮಾರ’ ಚಿತ್ರಗಳ ಜೊತೆಗೆ ಹೋಲಿಕೆಗಳು ಸಹಜವಾದರೂ “ಬಂಗಾರ, ಸನ್ ಆಫ್ ಬಂಗಾರದ ಮನುಷ್ಯ’ ಪ್ರತ್ಯೇಕ ಸ್ಥಾನ ಪಡೆಯುತ್ತದೆ.
ಅದಕ್ಕೆ ಕಾರಣ ಕಾಳಜಿಯಷ್ಟೇ ಅಲ್ಲ, ಚಿತ್ರವನ್ನು ನಿರೂಪಿಸಿರುವ ರೀತಿ. ಇಲ್ಲಿ ನಿರ್ದೇಶಕ ಯೋಗಿ, ಡಾ. ರಾಜಕುಮಾರ್ ಅವರು ಅದೆಷ್ಟೋ ವರ್ಷಗಳ ಹಿಂದೆ ರೈತರು ಮತ್ತು ವ್ಯವಸಾಯದ ಕುರಿತು ಮಾತನಾಡಿದ ಒಂದು ದೃಶ್ಯ ಇಟ್ಟುಕೊಂಡು ಕಥೆ ಬೆಳೆಸಿದ್ದಾರೆ. ಚಿತ್ರದಲ್ಲಿ ರಾಜಕುಮಾರ್ ಅವರ ಫೋಟೋಗಳು ಮತ್ತು ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆಯಾದರೂ, ಅಪ್ಪಿತಪ್ಪಿಯೂ ಅದು ನಟ ಡಾ ರಾಜಕುಮಾರ್ ಅವರ ಚಿತ್ರಗಳದ್ದಲ್ಲ.
ಜನರಿಂದ “ಬಂಗಾರದ ಮನುಷ್ಯ’ ಎಂದನಿಸಿಕೊಂಡಿರುವ ರೈತ ಅಥವಾ ರೈತರ ಪರ ಇರುವ ಜನನಾಯಕ ಮತ್ತು ಆತನ ಮಗನ ಕಥೆಯನ್ನಷ್ಟೇ ಹೇಳುವ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಇಲ್ಲಿ ನಿಮಗೆ ನಟ ಡಾ ರಾಜಕುಮಾರ್ ಅವರಿಗಿಂಥ ಬಂಗಾರದ ಮನುಷ್ಯ ಎಂಬ ರೈತನೇ ಕಾಣಿಸುತ್ತಾನೆ. ಇದೊಂದಾದರೆ, ಚಿತ್ರವನ್ನು ಕಟ್ಟಿಕೊಟ್ಟಿರುವ ರೀತಿ ಸಹ ಚೆನ್ನಾಗಿದೆ. ಇಲ್ಲಿ ಯೋಗಿ ಹೆಚ್ಚು ಸಮಯ ತಿನ್ನುವುದಿಲ್ಲ. ಬೇಡದ್ದನ್ನು ಹೇಳುವುದಿಲ್ಲ. ನೇರವಾಗಿ ಹೇಳುವುದನ್ನು ಹೇಳಿ ಮುಗಿಸುತ್ತಾರೆ.
ಮೊದಲಾರ್ಧವೆಲ್ಲಾ ಪ್ರೀತಿ, ಆ್ಯಟಿಟ್ಯೂಡು ಅಂತಾದರೆ, ದ್ವಿತೀಯಾರ್ಧ ಸಂಪೂರ್ಣವಾಗಿ ರೈತರಪರವಾಗುತ್ತದೆ. ಈ ಹಂತದಲ್ಲಿ ಚಿತ್ರ ಕೆಲವು ಕಡೆ ಎಮೋಷನಲ್ ಆಗಿ, ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ಬಂದರೆ ಆಶ್ಚರ್ಯವಿಲ್ಲ. ಇನ್ನು ಕೆಲವು ವಿಷಯಗಳು ಅತಿ ಎನಿಸಬಹುದು, ಹೀಗಾಗುವುದಕ್ಕೆ ಸಾಧ್ಯವಾ ಎಂಬ ಪ್ರಶ್ನೆಗಳೂ ಮೂಡಬಹುದು. ಆದರೆ, ಅದ್ಯಾವುದಕ್ಕೂ ಹೆಚ್ಚು ಸಮಯ ಕೊಡದೆಯೇ, ಒಂದರ ಹಿಂದೊಂದು ವಿಷಯವನ್ನು ಟೈಟಾಗಿ ಮತ್ತು ಆಪ್ತವಾಗಿ ಕಟ್ಟಿದ್ದಾರೆ ಯೋಗಿ.
ಬಹುಶಃ ಶಿವರಾಜಕುಮಾರ್ ಅವರ ಅಭಿನಯದ ದೊಡ್ಡ ನೆರವು ಇಲ್ಲದಿದ್ದರೆ, ಇಂಥದ್ದೊಂದು ಚಿತ್ರ ಮಾಡುವುದಕ್ಕೆ ಸಾಧ್ಯವಿರುತ್ತಿರಲಿಲ್ಲವೇನೋ? ಈ ಚಿತ್ರದ ಬೆನ್ನೆಲುಬೆಂದರೆ ಶಿವರಾಜಕುಮಾರ್. ಮೊದಲಾರ್ಧದಲ್ಲಿ ಒರಟನಾಗಿ, ದ್ವಿತೀಯಾರ್ಧದಲ್ಲಿ ರೈತರ ಸಮಸ್ಯೆಗಳಿಗೆ ಕರಗುವ ಮೆದುಹೃದಯಿಯಾಗಿ ಶಿವರಾಜಕುಮಾರ್ ಅಭಿನಯ ಚೆನ್ನಾಗಿದೆ. ಇನ್ನು ಶ್ರೀನಿವಾಸಮೂರ್ತಿ, ಶರತ್ ಲೋಹಿತಾಶ್ವ ಮುಂತಾದವರು ಸಹ ಸಂಯಮದ ಅಭಿನಯ ನೀಡಿದ್ದಾರೆ.
ವಿದ್ಯಾ ಪ್ರದೀಪ್ ಚೆಂದ. ಚಿಕ್ಕಣ್ಣ ಮತ್ತು ಸಾಧು ಕೋಕಿಲ ಕಾಮಿಡಿ ನಗಿಸುತ್ತದೆ ಎನ್ನುವುದು ಇನ್ನೊಂದು ಖುಷಿಯ ವಿಚಾರ. ವಿ. ಹರಿಕೃಷ್ಣ ಅವರ ಹಾಡುಗಳು, ಜೈ ಆನಂದ್ ಛಾಯಾಗ್ರಹಣ ಎಲ್ಲವೂ ಚಿತ್ರಕ್ಕೆ ಪೂರಕವಾಗಿದೆ. ಒಟ್ಟಾರೆ ಈ ಚಿತ್ರ ನಾಳೆಗಳನ್ನು ನಂಬದವರು ಮತ್ತು ನಾಳೆಗಳಿಗಾಗಿ ಬದುಕುವವರ ಸುತ್ತ ಸಾಗುತ್ತದೆ. ನಾಳೆಗಳಿಗಾಗಿ ಬದುಕಬೇಕು ಎಂದರೆ ಖಂಡಿತಾ ಚಿತ್ರ ನೋಡಬಹುದು.
ಚಿತ್ರ: ಬಂಗಾರ ಸನ್ ಆಫ್ ಬಂಗಾರದ ಮನುಷ್ಯನಿರ್ದೇಶನ: ಯೋಗಿ ಬಿ ರಾಜ್
ನಿರ್ಮಾಣ: ಜಯಣ್ಣ ಮತ್ತು ಭೋಗೇಂದ್ರ
ತಾರಾಗಣ: ಶಿವರಾಜಕುಮಾರ್, ವಿದ್ಯಾ ಪ್ರದೀಪ್, ಶ್ರೀನಿವಾಸಮೂರ್ತಿ, ಚಿಕ್ಕಣ್ಣ,, ಶರತ್ ಲೋಹಿತಾಶ್ವ, ಮೈಕೋ ನಾಗರಾಜ್ ಮುಂತಾದವರು * ಚೇತನ್ ನಾಡಿಗೇರ್