ಇದು ಪಾಸಿಟಿವ್ ರೌಡಿಸಂ … ಹೀಗೆ ಹೇಳುತ್ತಲೇ ಮುದ್ದಣ್ಣ ಸಮಾಜದ ದುಷ್ಟರ ವಿರುದ್ಧ ಸಮರ ಸಾರುತ್ತಾನೆ. ಮೇಲ್ನೋಟಕ್ಕೆ ಮುದ್ದಣ್ಣ ಒಬ್ಬ ಗ್ಯಾಂಗ್ಸ್‌ಸ್ಟಾರ್. ಆದರೆ, ಆತನ ಉದ್ದೇಶ ಒಳ್ಳೆಯದು. ಹಾಗಂತ, ಮುದ್ದಣ್ಣನ ಕೆಲಸ ಕೇವಲ ಪಾಸಿಟಿವ್ ರೌಡಿಸಂಗೆ ಸೀಮಿತವಾಗಿರೋದಿಲ್ಲ. ಅದರಾಚೆಗೂ ಆತ ಸಾಕಷ್ಟು ಘಟನೆಗಳಿಗೆ ಸಾಕ್ಷಿಯಾಗಿರುತ್ತಾನೆ. ಔಟ್ ಅಂಡ್ ಔಟ್ ಕಮರ್ಷಿಯಲ್, ಅತಿಯಾದ ಬಿಲ್ಡಪ್ ಸಿನಿಮಾಗಳ ಅಬ್ಬರದ ನಡುವೆ “ಸವರ್ಣ ದೀರ್ಘ ಸಂಧಿ’ ಅವ್ಯಾವುದು ಇಲ್ಲದ ಒಂದು ಹೊಸ ಬಗೆಯ ಸಿನಿಮಾ.
ಹಾಗಂತ ಇದು ಕಮರ್ಷಿಯಲ್ ಸಿನಿಮಾ ಅಲ್ಲವೇ ಎಂದರೆ ಪಕ್ಕಾ ಕಮರ್ಷಿಯಲ್ ಸಿನಿಮಾ. ಆದರೆ, ರೆಗ್ಯುಲರ್ ಆದ ಬಿಲ್ಡಪ್‌ಗ್ಳಿಂದ ಮುಕ್ತ. ಈ ಚಿತ್ರದಲ್ಲಿ ರೌಡಿಸಂ ಇದೆ, ಹೀರೋ ಮಚ್ಚು, ಗನ್ನು ಎಲ್ಲವೂ ಹಿಡಿಯುತ್ತಾನೆ. ಆದರೆ, ಆತ “ಸಹಜ’ ಸ್ಥಿತಿಯಲ್ಲಿಯೇ ಎಲ್ಲವನ್ನು ಮಾಡುತ್ತಾನೆ. ಆ ಮಟ್ಟಿಗೆ ಈ ಚಿತ್ರದಲ್ಲಿ ನೈಜತೆಗೆ ಹೆಚ್ಚು ಒತ್ತು ಕೊಡಲಾಗಿದೆ. “ಸವರ್ಣ ದೀರ್ಘ ಸಂಧಿ’ ಒಂದು ಗ್ಯಾಂಗ್‌ಸ್ಟಾರ್ ಸಿನಿಮಾ. ಹಾಗಂತ ಈ ಚಿತ್ರ ಬರೀ ಹೊಡೆದಾಟಕ್ಕೆ ಸೀಮಿತವಾಗಿಲ್ಲ.
ಚಿತ್ರದಲ್ಲಿ ಕಾಮಿಡಿಗೂ ಹೆಚ್ಚು ಕೊಡಲಾಗಿದೆ. ಹಾಗಾಗಿ, ಇದನ್ನು ಗ್ಯಾಂಗ್‌ಸ್ಟಾರ್ ಕಾಮಿಡಿ ಜಾನರ್‌ಗೆ ಸೇರಿಸಲಡ್ಡಿಯಿಲ್ಲ. ಕನ್ನಡದಲ್ಲಿ ಗ್ಯಾಂಗ್‌ಸ್ಟಾರ್ ಕಾಮಿಡಿ ಸಿನಿಮಾಗಳ ಸಂಖ್ಯೆ ಸ್ವಲ್ಪ ಕಡಿಮೆಯೇ. ಆ ನಿಟ್ಟಿನಲ್ಲಿ “ಸವರ್ಣ’ ತಂಡದ ಶ್ರಮವನ್ನು ಮೆಚ್ಚಬಹುದು. ಮುದ್ದಣ್ಣ ಎಂಬ ವ್ಯಾಕರಣ ಪ್ರಿಯ ಹಳ್ಳಿ ಹುಡುಗ ಮುಂದೆ ಹೇಗೆ ಸಿಟಿಗೆ ಬರುತ್ತಾನೆ, ರೌಡಿಸಂಗೆ ಹೇಗೆ ಎಂಟ್ರಿಯಾಗುತ್ತಾನೆ, ಪಾಸಿಟಿವ್ ರೌಡಿಸಂ ಹಿಂದಿನ ಗುರಿ ಏನು ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆ.
ಚಿತ್ರದ ಸಂಭಾಷಣೆ, ಸನ್ನಿವೇಶಗಳ ಮೂಲಕ ಪ್ರೇಕ್ಷಕರನ್ನು ನಗಿಸುವ ಜೊತೆಗೆ ಒಂದಷ್ಟು ಕುತೂಹಲದ ಅಂಶಗಳ ಜೊತೆಗೆ ಸಿನಿಮಾವನ್ನು ಗಂಭೀರವನ್ನಾಗಿಸುವ ಪ್ರಯತ್ನ ಇಲ್ಲಿ ನಡೆದಿದೆ. ಚಿತ್ರದ ನಿರೂಪಣೆಯಲ್ಲಿ ಇನ್ನೊಂದಿಷ್ಟು ವೇಗ ಹಾಗೂ ಚಿತ್ರದ ಫ್ಲ್ಯಾಶ್‌ಬ್ಯಾಕ್‌ನ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವ ಅವಕಾಶ ನಿರ್ದೇಶಕರಿಗಿತ್ತು. ಅದರಾಚೆಗೆ ಒಂದು ಪ್ರಯತ್ನವಾಗಿ “ಸವರ್ಣ ದೀರ್ಘ ಸಂಧಿ’ ಚಿತ್ರವನ್ನು ಮೆಚ್ಚಬಹುದು.
ನಿರ್ದೇಶನದ ಜೊತೆಗೆ ನಾಯಕರಾಗಿಯೂ ನಟಿಸಿರುವ ವೀರೇಂದ್ರ ಶೆಟ್ಟಿಯವ ಪ್ರಯತ್ನವನ್ನು ಮೆಚ್ಚಬಹುದು. ಗ್ಯಾಂಗ್‌ಸ್ಟಾರ್ ದೃಶ್ಯಗಳಲ್ಲಿ ಅವರು ಇಷ್ಟವಾಗುತ್ತಾರೆ. ನಾಯಕಿ ಕೃಷ್ಣಾ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ. ಉಳಿದ ಕಲಾವಿದರು ಪಾತ್ರಕ್ಕೆ ಹೊಂದಿಕೊಂಡಿದ್ದಾರೆ. ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕವಾಗಿದೆ.
ಚಿತ್ರ: ಸವರ್ಣ ದೀರ್ಘ ಸಂಧಿ
ನಿರ್ದೇಶನ: ವೀರೇಂದ್ರ ಶೆಟ್ಟಿ
ನಿರ್ಮಾಣ: ವೀರು ಟಾಕೀಸ್-ಲೈಲಾಕ್ ಎಂಟರ್‌ಟೈನ್‌ಮೆಂಟ್
ತಾರಾಗಣ: ವೀರೇಂದ್ರ ಶೆಟ್ಟಿ, ಕೃಷ್ಣಾ, ರವಿ ಭಟ್, ಪದ್ಮಜಾ ರಾವ್, ಬಸು ಕುಮಾರ್ ಮತ್ತಿತರರು.
* ರವಿ ರೈ