ಮಂಗಳೂರು: ಇಲ್ಲಿನ ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿನಿ ಪವಿತ್ರೀ ಬಿ. ಶೆಟ್ಟಿ ಬಿ. ಎಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್‌ನಲ್ಲಿ ಅತ್ಯುತ್ತಮ ಶೈಕ್ಷಣಿಕ ಸಾಧನೆಗಾಗಿ ಪ್ರಥಮ ರ್‍ಯಾಂಕ್ ಹಾಗೂ ನಾಲ್ಕು ಚಿನ್ನದ ಪದಕಗಳನ್ನು ಸೋಮವಾರ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ.ಯ ಘಟಿಕೋತ್ಸವದಲ್ಲಿ ಸ್ವೀಕರಿಸಿದ್ದಾರೆ.
ಪ್ರತಿಷ್ಠಿತ ಚಿನ್ನದ ಪದಕಗಳಾದ “ಪೆಸೆಟ್ ಗೋಲ್ಡ್ ಮೆಡಲ್’, “ಆರ್.ಎನ್. ಶೆಟ್ಟಿ ಚಿನ್ನದ ಪದಕ’, “ಜ್ಯೋತಿ ಚಿನ್ನದ ಪದಕ’ ಮತ್ತು “ವಿಟಿಯು ಗೋಲ್ಡ್ ಮೆಡಲ್’ ಗಳನ್ನು ಅವರು ತನ್ನದಾಗಿಸಿಕೊಂಡಿದ್ದಾರೆ.
ಉದ್ಯಮಿ ಎಚ್. ಬಾಲಕೃಷ್ಣ ಶೆಟ್ಟಿ ಮತ್ತು ಅಮಿತಾ ಬಿ. ಶೆಟ್ಟಿ ಅವರ ಪುತ್ರಿಯಾಗಿರುವ ಪವಿತ್ರಿ 12ನೇ ವಯಸ್ಸಿನಲ್ಲಿ, ಜೂನಿಯರ್ ಮಟ್ಟದ ಮಾನವ ಸಂಪದ ಪರೀಕ್ಷೆಯಲ್ಲಿ ದೇಶದಲ್ಲಿ 73ನೇ ರ್‍ಯಾಂಕ್ ಗಳಿಸಿದ್ದರು. ಮುಂದಿನ ವರ್ಷ ಸೈನ್ಸ್ ಟ್ಯಾಲೆಂಟ್ ಹಂಟ್‌ನಲ್ಲಿ ರಾಜ್ಯದಲ್ಲಿ 7ನೇ ರ್‍ಯಾಂಕ್ ತಮ್ಮದಾಗಿಸಿಕೊಂಡಿದ್ದರು.
ಸಹ್ಯಾದ್ರಿ ಕಾಲೇಜಿನಲ್ಲಿ ಪವಿತ್ರೀ ಶೆಟ್ಟಿ ಅವರ “ಸ್ಮಾರ್ಟ್ ಸಿಟಿ’ ಹೆಸರಿನ ಪ್ರದರ್ಶನದ ಯೋಜನೆ ರಾಜ್ಯ ಮಟ್ಟದ “ಸƒಷ್ಟಿ-2016’ರಲ್ಲಿ ಮೊದಲ ಸ್ಥಾನ ಪಡೆದಿತ್ತು. “ಕೈಬರೆಹ ಗುರುತಿಸುವಿಕೆ ಮತ್ತು ಅವುಗಳನ್ನು ಮೆಷಿನ್ ಲರ್ನಿಂಗ್ ಟೆಕ್ನಿಕ್ಸ್ ಬಳಸಿ ಸಂಪಾದಕೀಯ ಫಾಮ್ಯಾìಟ್‌ಗೆ ಮಾರ್ಪಡಿಸುವ ಪ್ರಾಜೆಕ್ಟ್ಗೆ ವಿಟಿಯುನಿಂದ ಅನುದಾನ ಪಡೆದಿದ್ದಾರೆ. “ಅತ್ಯುತ್ತಮ ವಿದ್ಯಾರ್ಥಿ’ ಪ್ರಶಸ್ತಿಯೂ ಇವರಿಗೆ ಸಂದಿದ್ದು, ಪ್ರಸ್ತುತ ವರ್ಷಕ್ಕೆ 8 ಲಕ್ಷ ರೂ. ಪ್ಯಾಕೇಜ್‌ನೊಂದಿಗೆ ಮೂನ್ರಾಫ್ಟ್ ಇನ್ನೋವೇಶನ್ ಲ್ಯಾಬ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
ಪ್ರಾಧ್ಯಾಪಕಿಯಾಗುವ ಆಶಯ
ಪವಿತ್ರೀ ಅವರಿಗೆ ಸ್ನಾತಕೋತ್ತರ ಹಾಗೂ ಪಿಎಚ್.ಡಿ ಪದವಿ ಗಳಿಸಿ ಎಂಜಿನಿಯರಿಂಗ್ ಶಿಕ್ಷಣದಲ್ಲಿ ಪ್ರಾಧ್ಯಾಪಕಿಯಾಗುವ ಬಯಕೆ. “ನನಗೆ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಮಾತುಗಳು ಪ್ರಾಧ್ಯಾಪಕಿಯಾಗುವ ಸ್ಫೂರ್ತಿ ನೀಡಿವೆ’ ಎಂದವರು ತಿಳಿಸಿದ್ದಾರೆ.