Advertisement

ಬಂಗಾರವಾಗಲಿ ಮಕ್ಕಳ ಭವಿಷ್ಯ

12:40 AM Jun 03, 2019 | Team Udayavani |

ಹನಿ -ಹನಿ ಗೂಡಿದರೆ ಹಳ್ಳ, ತೆನೆ-ತೆನೆ ಗೂಡಿದರೆ ರಾಶಿ ಎಂಬ ಗಾದೆಯಂತೆ ಹಣಕಾಸು ವ್ಯವಹಾರದಲ್ಲಿ ಈ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕಾಗುತ್ತದೆ. ನಮ್ಮ ಉಜ್ವಲ ಭವಿಷ್ಯಕ್ಕೆ ಇಂದಿನಿಂದಲೇ ಒಂದೊಂದು ರೂಪಾಯಿ ಕೂಡ ಸರಿಯಾಗಿ ಉಳಿತಾಯ ಮಾಡಿದರೆ ಭವಿಷ್ಯದಲ್ಲಿ ಅದೇ ದೊಡ್ಡ ಮೊತ್ತವಾಗಿ ನಮಗೆ ಸಹಕಾರಿಯಾಗುತ್ತದೆ. ಸಮಸ್ಯೆ ಎದುರಿಸಲು ಸಕಲ ರೀತಿಯಲ್ಲಿ ಉಪಯುಕ್ತವಾಗುತ್ತದೆ. ಉಳಿತಾಯ ಎಂಬುದು ಭವಿಷ್ಯದ ಆರ್ಥಿಕ ಶಿಸ್ತನ್ನು ಕಾಪಾಡುವುದಾಗಿದೆ. ಈ ವಿಚಾರದಲ್ಲಿ ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಕೂಡ ಈ ಮೇಲಿನ ಅಂಶ ಪ್ರಾಮುಖ್ಯ ಪಡೆಯುತ್ತದೆ.

Advertisement

ಹೆತ್ತವರು ತಮ್ಮ ಮಕ್ಕಳ ಸುಂದರ ಭವಿಷ್ಯಕ್ಕಾಗಿ ಉತ್ತಮ ಕನಸುಗಳನ್ನು ಕಂಡುಕೊಂಡಿರುತ್ತಾರೆ. ಪ್ರತಿಷ್ಠಿತವಾದ ವಿದ್ಯಾಸಂಸ್ಥೆಯಲ್ಲಿ ಕೋರ್ಸ್‌ ಮಾಡಿಸಿ, ಉತ್ತಮ ಉದ್ಯೋಗ ಪಡೆಯಲಿ ಎಂಬ ಬಯಕೆ ಹೊಂದುವುದು ಸಹಜ. ಅದರಂತೆ ಮಕ್ಕಳ ಭವಿಷ್ಯಕ್ಕಾಗಿ ನಾವು ಇಂದಿನಿಂದಲೇ ಹಣವನ್ನು ಉಳಿತಾಯ ಮಾಡುವುದು ಆವಶ್ಯಕ. ಮಕ್ಕಳ ಹೆಸರಿನ ಮೇಲೆ ಬ್ಯಾಂಕ್‌ ಖಾತೆ ತೆರೆಯಲು ಬ್ಯಾಂಕ್‌ನಲ್ಲಿ ಅವಕಾಶವಿದ್ದು, ಹೀಗಾಗಿ ಹೆತ್ತವರು ಪ್ರಯೋಜನ ಪಡೆಯುವುದು ಒಳಿತು. ಹಾಗೆಯೇ ಮಕ್ಕಳ ಉಜ್ವಲ ಭವಿಷ್ಯಕ್ಕೆ ಇಂದಿನಿಂದಲೇ ಹನಿ-ಹನಿ ಗೂಡಿಸುವುದು ಒಳ್ಳೆಯದು.

ಉಳಿತಾಯದ ಮಾರ್ಗಗಳು
ಮಕ್ಕಳ ಭವಿಷ್ಯಕ್ಕಾಗಿ ಹೆತ್ತವರು ಇಂದಿನಿಂದಲೇ ಹಣ ಉಳಿತಾಯ ಮಾಡಬಹುದಾಗಿದ್ದು, ಕೆಲವೊಂದು ಮಾರ್ಗಗಳನ್ನು ಗಮನಿಸಬಹುದಾಗಿದೆ. ಅದಕ್ಕಾಗಿ ಹಲವಾರು ಹೂಡಿಕೆ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಕೇಂದ್ರ ಸರಕಾರವೂ ಹೆಣ್ಮಕ್ಕಳ ಶಿಕ್ಷಣ ಹಾಗೂ ಮದುವೆಯ ಸಮಯದಲ್ಲಿ ಉಪಯೋಗಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ ನೆರವಾದರೆ, ಆರೋಗ್ಯಕ್ಕಾಗಿ ಜೀವ ವಿಮೆ ಪಾಲಿಸಿ, ಉತ್ತಮ ಭವಿಷ್ಯಕ್ಕಾಗಿ ಪಿಪಿಎಫ್ (ಪಬ್ಲಿಕ್‌ ಪ್ರಾವಿಡೆಂಟ್ ಫ‌ಂಡ್‌), ಆರ್‌ಡಿ (ಮರುಕಳಿಸುವ ಠೇವಣಿ), ಮ್ಯೂಚುವಲ್ ಫ‌ಂಡ್‌, ಎನ್‌ಎಸ್‌ಸಿ ಹೂಡಿಕೆಯ ಮೂಲಕ ಮಕ್ಕಳ ಭವಿಷ್ಯಕ್ಕಾಗಿ ಹಣವನ್ನು ಉಳಿತಾಯದ ಮಾಡಬಹುದಾಗಿದೆ.

ಉತ್ತಮ ಭವಿಷ್ಯ
ಮಕ್ಕಳ ಭವಿಷ್ಯದ ವಿದ್ಯಾಭ್ಯಾಸ, ಆರೋಗ್ಯ ಹಾಗೂ ಅವರ ಜೀವನಕ್ಕೊಂದಿಷ್ಟು ಉಳಿತಾಯ ಮಾಡುವ ಪ್ರಜ್ಞೆ ನಮ್ಮಲ್ಲಿರಬೇಕು. ಇದರಿಂದಾಗಿ ಉತ್ತಮ ಭವಿಷ್ಯ ಕಾಣಬಹುದಾಗಿದೆ. ಸಾಂದರ್ಭಿಕ ಸಮಸ್ಯೆಗಳು ಎದುರಾದಾಗ ಎದುರಿಸಲು ಒಂದಿಷ್ಟು ಉಳಿತಾಯ ಇದ್ದಾಗ ಮಾತ್ರ ನಾವು ಸಮರ್ಥವಾಗಿ ಎದುರಿಸಬಹುದು. ಇದಕ್ಕಾಗಿ ಜೀವ ವಿಮೆ, ಮ್ಯೂಚುವಲ್ ಫ‌ಂಡ್‌ಗಳಲ್ಲಿ ತಿಂಗಳಿಗೆ ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ಸಾಕು ಅದು ಬಡ್ಡಿ ಸಹಿತ ಸಿಗುವುದರಿಂದ ಅವರ ಸದೃಢ ಭವಿಷ್ಯಕ್ಕೆ ಪೂರಕವಾಗಲಿದೆ.

ಆರ್ಥಿಕ ಶಿಸ್ತು
ಉಳಿತಾಯ ಎಂಬುವುದು ನಮ್ಮಲ್ಲಿ ಆರ್ಥಿಕ ಶಿಸ್ತನ್ನು ಬೆಳೆಸುತ್ತದೆ. ಕ್ರಮಬದ್ಧವಾದ ಜೀವನ ಮಾಡುವಾಗ ಯಾವುದೇ ಆರ್ಥಿಕ ಕೊರತೆ ಬರಬಾರದು ಎಂದರೆ ನಾವು ಇಂದಿನಿಂದಲೇ ಉಳಿತಾಯ ಮಾಡಬೇಕು. ಮಕ್ಕಳು ಬೆಳೆದು ದೊಡ್ಡವರಾದಾಗ ಅವರಿಗೆ ಅವರದ್ದೇ ಆದ ಕನಸುಗಳಿರುತ್ತವೆ. ಉನ್ನತ ವ್ಯಾಸಂಗ, ವಿದೇಶಕ್ಕೆ ಹೋಗುವುದು, ಇಂತಹದ್ದೇ ಕೋರ್ಸ್‌ ಮಾಡಬೇಕು ಎನ್ನುವುದು ಇಂತಹ ಹತ್ತು ಹಲವು ಆಸೆ ಆಕಾಂಕ್ಷೆಗಳಿರುತ್ತವೆ. ಇದಕ್ಕೆ ಪೂರಕವೆಂಬಂತೆ ಆ ಸಂದರ್ಭದಲ್ಲಿ ಹಣದ ಕೊರತೆ ಕಾಣಬಾರದೆಂದರೆ ಇಂದಿನಿಂದಲೇ ಉಳಿತಾಯ ಮಾಡಬಹುದು. ಪಬ್ಲಿಕ್‌ ಪ್ರಾವಿಡೆಂಟ್ ಫ‌ಂಡ್‌ನ‌ಲ್ಲಿ ವಾರ್ಷಿಕವಾಗಿ ಇಂದಿನಿಂದಲೇ ಲಕ್ಷ ದವರೆಗೆ ಮಕ್ಕಳ ಹೆಸರಿನಲ್ಲಿ ಹೂಡಿಕೆ ಮಾಡಿದರೆ, ಬಡ್ಡಿ ಸಹಿತ ದೊಡ್ಡ ಮೊತ್ತವಾಗಿ ಕೈಸೇರುತ್ತದೆ. ಇದು ಅವರ ಶಿಕ್ಷಣಕ್ಕೆ ನೆರವಾಗುತ್ತದೆ.
ಸಮಸ್ಯೆ ನಿರ್ವಹಣೆ
ಮನುಷ್ಯನಿಗೆ ಸಮಸ್ಯೆ ಹಾಗೂ ಸವಾಲುಗಳು ನಿರಂತರವಾಗಿರುತ್ತವೆ. ಅದರಲ್ಲಿ ಆರ್ಥಿಕ ಸವಾಲು ಎದುರಾದಾಗ ನಮ್ಮನ್ನು ಕುಗ್ಗಿಸಿ ಬಿಡುತ್ತವೆ. ಮುಂದಿನ ದಿನಗಳಲ್ಲಿ ನಮಗೆ ಯಾವುದೇ ಸಮಸ್ಯೆ ಎದುರಾಗಬಹುದು, ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗದಂತೆ ಸವಾಲುಗಳನ್ನು ಸಮ ರ್ಥ ವಾಗಿ ನಿರ್ವಹಣೆ ಮಾಡಬೇಕಾದರೆ ಮಕ್ಕಳ ಹೆಸರಿನಲ್ಲಿ ಒಂದಿಷ್ಟು ಹಣವನ್ನು ಉಳಿತಾಯ ಮಾಡಬೇಕಾಗುತ್ತದೆ. ಈ ಉಳಿತಾಯ ಹಣವನ್ನು ಕಷ್ಟದ ಸಮಯದಲ್ಲಿ ಬಳಸಿಕೊಳ್ಳಲು ನೆರವಾಗುತ್ತದೆ. ಅದಕ್ಕಾಗಿ ಮಕ್ಕಳ ಭವಿಷ್ಯಕ್ಕಾಗಿ ಹೆತ್ತವರು ಇಂದಿನಿಂದ ಉಳಿತಾಯ ಮಾಡುವುದರಿಂದ ಹಲವು ರೀತಿಯಲ್ಲಿ ಉಪಯೋಗದ ನಡೆಯಾಗುತ್ತದೆ.

– ಶಿವ ಸ್ಥಾವರಮಠ

Advertisement
Advertisement

Udayavani is now on Telegram. Click here to join our channel and stay updated with the latest news.

Next