Advertisement
ಮುಂಬೈ ರೈಲು ಹತ್ತಿ ಹೋದ ಹುಡುಗ, ಕಟ್ ಮಾಡಿದರೆ ರಾಕಿ ಭಾಯ್ ಎಂಬ ಡಾನ್ ಆಗಿ ಮೆರೆಯುತ್ತಿರುತ್ತಾನೆ. “ಕೆಜಿಎಫ್’ ಸಿನಿಮಾ ಆರಂಭವಾಗೋದೇ ತಾಯಿ-ಮಗನ ಸೆಂಟಿಮೆಂಟ್‌ನಿಂದ. ಹೀಗೆ ಟೇಕಾಫ್ ಆಗುವ ಸಿನಿಮಾ ಮುಂದೆ ಸಾಗುತ್ತಾ ಒಂದು ಔಟ್ ಅಂಡ್ ಔಟ್ ಮಾಸ್ ಎಂಟರ್‌ಟೈನರ್ ಆಗಿ ರಂಜಿಸುತ್ತದೆ. ಮುಂದೆ ನಿಮಗೆ ಚಿತ್ರದಲ್ಲಿ ಹೆಚ್ಚು ಸೆಂಟಿಮೆಂಟ್ ದೃಶ್ಯಗಳು ಕಾಣಿಸೋದಿಲ್ಲ ಕೂಡ.
Related Articles
Advertisement
ಮೊದಲೇ ಹೇಳಿದಂತೆ ನಿರ್ದೇಶಕ ಪ್ರಶಾಂತ್ ನೀಲ್ “ಚಾಪ್ಟರ್-2’ನಲ್ಲಿ ಸಿನಿಮಾದ ಕಥೆಯನ್ನು ಬೆಳೆಸುವ ಉದ್ದೇಶ ಹೊಂದಿದಂತಿದೆ. ಹಾಗಾಗಿಯೇ “ಚಾಪ್ಟರ್-1’ನಲ್ಲಿ ಸನ್ನಿವೇಶಗಳಿಗೆ, ಪಾತ್ರ ಪರಿಚಯಗಳಿಗೆ, ನೆಲದ ಇತಿಹಾಸದ ಪೀಠಿಕೆಗೆ ಮಹತ್ವ ಹಾಗೂ ಮುಂದಿನ ಹೋರಾಟಕ್ಕೆ ನಾಂದಿಯಾಡಿದ್ದಾರೆ. ಜೊತೆಗೆ ಕುತೂಹಲವೊಂದನ್ನು ಪ್ರೇಕ್ಷಕರಿಗೆ ಬಿಟ್ಟು “ಕೆಜಿಎಫ್ ಚಾಪ್ಟರ್-1′ ಮುಗಿಯುತ್ತದೆ.
ಒಂದು ಬಿಗ್ ಬಜೆಟ್‌ನ ಸಿನಿಮಾವನ್ನು ಎಷ್ಟು ಅದ್ಧೂರಿಯಾಗಿ, ತಾಂತ್ರಿಕ ಶ್ರಿಮಂತಿಕೆಯಿಂದ ಕಟ್ಟಿಕೊಡಬಹುದು ಎಂಬುದನ್ನು “ಕೆಜಿಎಫ್ ಚಾಪ್ಟರ್-1’ನಲ್ಲಿ ನೋಡಬಹುದು. ದ್ವಿತೀಯಾರ್ಧದಲ್ಲಿ “ಕೆಜಿಎಫ್’ನ ಚಿತ್ರಣ, ಪರಿಸರವನ್ನು ಕಟ್ಟಿಕೊಟ್ಟ ರೀತಿ, ಅದರ ಹಿಂದಿನ ಶ್ರಮವನ್ನು ಮೆಚ್ಚಲೇಬೇಕು. ಆದರೆ, ಗಣಿಯಲ್ಲಿನ ಕ್ರೌರ್ಯ, ಅಮಾಯಕರ ಮೇಲಿನ ದೌರ್ಜನ್ಯವನ್ನು ನೋಡಿದಾಗ ಪ್ರೇಕ್ಷಕರಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಚಿತ್ರದಲ್ಲಿ ಸಾಕಷ್ಟು ಪಾತ್ರಗಳು, ಹೆಸರುಗಳು ಕೇಳಿಬಂದರೂ ಅವ್ಯಾವು ಮನದಲ್ಲಿ ಉಳಿಯುವುದಿಲ್ಲ. ಸಿನಿಮಾ ನೋಡಿ ಹೊರಬಂದಾಗಲೂ ನಿಮ್ಮ ಕಣ್ಣಮುಂದೆ ಬರುವ ಮುಖ ಯಶ್ ಅವರದ್ದಷ್ಟೇ. ಏಕೆಂದರೆ ಇಡೀ ಸಿನಿಮಾವನ್ನು ಹೊತ್ತುಕೊಂಡು ಮುಂದೆ ಸಾಗಿದವರು ಯಶ್ ಎಂದರೆ ತಪ್ಪಲ್ಲ. ಇಡೀ ಸಿನಿಮಾದಲ್ಲಿ ರಗಡ್ ಆಗಿ, ಸಿಡಿಗುಂಡಿನಂತೆ ಕಾಣಿಸಿಕೊಂಡು ರಂಜಿಸುವ ಯಶ್ ಇಷ್ಟವಾಗುತ್ತಾರೆ.
ಮೊದಲರ್ಧದಲ್ಲಿ ಪಂಚಿಂಗ್ ಡೈಲಾಗ್, ಸ್ಟೈಲ್ ಮೂಲಕ ರಂಜಿಸಿದರೆ, ದ್ವಿತೀಯಾರ್ಧದಲ್ಲಿ ಕಣ್ಣೋಟ ಹಾಗೂ ಆ್ಯಕ್ಷನ್‌ನಲ್ಲಿ ಇಷ್ಟವಾಗುತ್ತಾರೆ. ನಾಯಕಿ ಶ್ರೀನಿಧಿ ಶೆಟ್ಟಿಗೆ ಇಲ್ಲಿ ಹೆಚ್ಚಿನ ಅವಕಾಶವಿಲ್ಲ. ಮೊದಲ ಚಾಪ್ಟರ್‌ನಲ್ಲಿ ಕಥೆ ನಾಯಕಿಯ ಪಾತ್ರವನ್ನು ಹೆಚ್ಚು ಬಯಸದ್ದರಿಂದ ನಿರ್ದೇಶಕರು ಅನಾವಶ್ಯಕವಾಗಿ ಅದನ್ನು ಬೆಳೆಸುವ ಗೋಜಿಗೆ ಹೋಗಿಲ್ಲ. ಉಳಿದಂತೆ ರಾಮ್, ವಸಿಷ್ಠ, ಅಯ್ಯಪ್ಪ, ಲಕ್ಷ್ಮಣ್, ಬಿ.ಸುರೇಶ್, ಅಚ್ಯುತ್ ಕುಮಾರ್, ಮಾಳವಿಕಾ ಸೇರಿದಂತೆ ಇತರರು ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಇಡೀ ಸಿನಿಮಾ ಅನಂತ್‌ನಾಗ್ ನಿರೂಪಣೆಯಲ್ಲಿ ಸಾಗುತ್ತದೆ.
ಇಡೀ ಚಿತ್ರವನ್ನು ಮತ್ತೂಂದು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಛಾಯಾಗ್ರಾಹಕ ಭುವನ್ ಗೌಡ ಹಾಗೂ ಕಲಾ ನಿರ್ದೇಶಕ ಶಿವಕುಮಾರ್ ಅವರ ಪಾತ್ರ ಮಹತ್ವದ್ದಾಗಿದೆ. ಶಿವಕುಮಾರ್ ಅವರ ಕಲಾ ವಿನ್ಯಾಸದಲ್ಲಿ ಮೂಡಿಬಂದ ಸೆಟ್ ಅನ್ನು ಭುವನ್ ಗೌಡ ಅಷ್ಟೇ ಅಚ್ಚುಕಟ್ಟಾಗಿ ತೋರಿಸಿದ್ದಾರೆ. ನೆರಳು-ಬೆಳಕಿನಾಟ, ಕೆಜಿಎಫ್ ಮಣ್ಣಿನ ಖದರ್ … ಎಲ್ಲವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಚಿತ್ರದ ಮತ್ತೂಂದು ಪ್ಲಸ್.
ಚಿತ್ರ: ಕೆಜಿಎಫ್ನಿರ್ಮಾಣ: ವಿಜಯ್ ಕಿರಗಂದೂರು
ನಿರ್ದೇಶನ: ಪ್ರಶಾಂತ್ ನೀಲ್
ತಾರಾಗಣ: ಯಶ್, ಶ್ರೀನಿಧಿ ಶೆಟ್ಟಿ, ರಾಮ್, ವಸಿಷ್ಠ, ಅಯ್ಯಪ್ಪ, ಲಕ್ಷ್ಮಣ್ ಗೌಡ, ಬಿ.ಸುರೇಶ್, ಅನಂತ್‌ನಾಗ್, ಅಚ್ಯುತ್ ಕುಮಾರ್, ಮಾಳವಿಕಾ ಇತರರು. * ರವಿಪ್ರಕಾಶ್ ರೈ