ಎಲ್ಲ ಬಾರಿಯೂ ಭಾವನೆಗಳು ಮಾತಿನಿಂದಲೇ ವ್ಯಕ್ತವಾಗಬೇಕು ಎಂದೇನಿಲ್ಲ. ಮೌನವೂ ಉತ್ತಮವಾದ ಸಂವಹನ ನಡೆಸಬಲ್ಲದು. ಮೌನ ಸರ್ವಸ್ವ ಸಾಧನಂ, ಮೌನ ಸನ್ಮತಿಯ ಲಕ್ಷಣಂ ಎಂಬ ಮಾತಿದೆ. ಶಾಂತಿ, ಕ್ರಾಂತಿ ಎರಡೂ ಮೌನದಲ್ಲಿಯೇ ಅಡಕವಾಗಿದೆ.
ಅದೊಂದು ಗಂಡ ಹೆಂಡತಿ ಮತ್ತು ಮಗು ಇರುವ ಚಿಕ್ಕ ಸಂಸಾರ. ಬೆಳಗ್ಗೆ ಗಂಡ ದುಡಿಯಲು ಹೊರಗೆ ಹೊದರೆ ಮರಳಿ ಮನೆಗೆ ಬರುವುದು ಸಂಜೆಯೇ. ಆರಂಭದ ದಿನದಿಂದ ಮಗು ಹುಟ್ಟುವವರೆಗೂ ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ದಿನ ಕಳೆದಂತೆ ಗಂಡ-ಹೆಂಡಿರ ನಡುವೆ ಮನಃಸ್ತಾಪ ಆರಂಭವಾಯಿತು. ಕಾರಣವಿಷ್ಟೇ. ಗಂಡನಿಗೆ ನನ್ನ ಜತೆ ಕಳೆಯಲು ಸಮಯವೇ ಇಲ್ಲ ಎಂಬುದು ಹೆಂಡತಿಯ ದೂರು. ಆಗಾಗ ಕೇಳಿಬರುವ ಹೆಂಡತಿಯ ಏರು ಧ್ವನಿಗೂ ಉತ್ತರಿಸದೇ ಕೆಲ ಕಾಲ ಗಂಡ ಸುಮ್ಮನೇ ಇದ್ದ. ಚಿಕ್ಕ ವಿಷಯಕ್ಕೂ ರೇಗುವ ಪತಿರಾಯ ಈ ವಿಷಯದಲ್ಲಿ ಮಾತ್ರ ಯಾಕೆ ಇಷ್ಟು ಮೌನಿ ಎಂಬುದು ಪತ್ನಿಯ ಹೊಸ ಪ್ರಶ್ನೆಯಾಗಿತ್ತು.
ಆದರೆ ಇವರ ಜತೆ ಜತೆಯಲ್ಲಿಯೇ ಮದುವೆ ಆದ, ಪಕ್ಕದ ಮನೆಯಲ್ಲಿ ವಾಸವಿದ್ದ ದಂಪತಿಯ ಸಂಸಾರ ಮಾತ್ರ ಹಾಲು ಜೇನಿನಂತಿತ್ತು. ಅಲ್ಲೂ ಮನೆಯಾತ ದುಡಿಯಲು ಬೆಳಗ್ಗೆ ಹೋದರೆ ಮರಳಿ ಬರುತ್ತಿದ್ದದ್ದು ಸಂಜೆಯೇ. ಹಾಗಾದರೆ ಒಬ್ಬರ ಸಂಸಾರ ಉತ್ತಮವಾಗಿಯೂ ಮತ್ತೂಬ್ಬರ ಸಂಸಾರ ಮುರಿದು ಬೀಳುವ ಸ್ಥಿತಿಗೆ ಬರಲು ಕಾರಣವಾದರೂ ಏನು? ಒಬ್ಬರನ್ನೊಬ್ಬರು ಅರಿತು, ಬೆರೆತು ಬಾಳಿದಾಗ ಮಾತ್ರ ಸುಖ ಸಂಸಾರ ಸಾಧ್ಯ. ಕೆಲವೊಮ್ಮೆ ಮಾತು ಹೇಳದ್ದನ್ನು ವ್ಯಕ್ತಿಯ ಮೌನದಿಂದಲೇ ಅರ್ಥಮಾಡಿಕೊಳ್ಳಬೇಕಾಗುತ್ತದೆ.
ಜೀವನದಲ್ಲಿ ಎಲ್ಲರೂ ಎಲ್ಲವನ್ನೂ ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಅವರ ಮೌನವನ್ನೇ ನಾವು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಬೇಕಾಗುತ್ತದೆ. ಈ ಕಥೆಯಲ್ಲಿ ನಡೆದಿದ್ದೂ ಇದೇ. ಮೊದಲನೇ ಸಂಸಾರದಲ್ಲಿ ಹೆಂಡತಿ ಗಂಡನ ಮೌನ ಅರ್ಥೈಸಿಕೊಳ್ಳುವಲ್ಲಿ ಸೋತಿದ್ದಾಳೆ. ಎರಡನೇ ಸಂಸಾರದಲ್ಲಿ ಗಂಡನ ಮನಸ್ಸು ಅರ್ಥೈಸಿಕೊಂಡ ಪತ್ನಿ ಸುಖದಿಂದ ಬದುಕುತ್ತಿದ್ದಾಳೆ.
ಹಲವರು ಮಾಡುವ ದೊಡ್ಡ ತಪ್ಪು ಏನೆಂದರೆ ಮತ್ತೂಬ್ಬರ ಮೌನವನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು. ಆತ ಮಾತಾಡಿಲ್ಲ ಎಂದಮೇಲೆ ನಾನಂದುಕೊಂಡಿದ್ದೇ ಸತ್ಯ ಎಂದು ಭಾವಿಸುವುದು. ಈ ತರದ ಭಾವನೆಗಳೇ ಇಂದು ಎಷ್ಟೋ ಸಂಬಂಧಗಳನ್ನು ನುಂಗಿವೆ. ಕೇವಲ ಮಾತಿನಿಂದ ಮಾತ್ರ ಎಲ್ಲವೂ ವ್ಯಕ್ತವಾಗಬೇಕು ಎಂಬುದನ್ನು ಬಿಟ್ಟು ಮೌನವೂ ಮಾತನಾಡುತ್ತದೆ ಎಂಬುದನ್ನು ನೆನಪಿಡಿ.