ಹೊಸದಿಲ್ಲಿ: ಮಿತಿಗಿಂತ ಹೆಚ್ಚು ಚಿನ್ನ ಹೊಂದಿರುವವರ ವಿರುದ್ಧ ಕೇಂದ್ರ ಸರಕಾರ ಶೀಘ್ರ ಕ್ರಮಕೈಗೊಳ್ಳಲಿದೆ “ಚಿನ್ನ ಕ್ಷಮಾದಾನ’ ಯೋಜನೆ ಜಾರಿ ಮಾಡಲಿದೆ ಎಂಬ ಸುದ್ದಿಗಳ ಬೆನ್ನಲ್ಲೇ ಅಂತಹ ಯಾವುದೇ ಉದ್ದೇಶವಿಲ್ಲ ಎಂದು ಕೇಂದ್ರ ಸರಕಾರದ ಮೂಲಗಳು ಹೇಳಿವೆ.
ಮಾಧ್ಯಮ ವರದಿಗಳ ಬೆನ್ನಲ್ಲೇ ಸ್ಪಷ್ಟೀಕರಣವನ್ನು ಕೊಡಲಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಆದಾಯ ತೆರಿಗೆ ಇಲಾಖೆ ವತಿಯಿಂದ ಚಿನ್ನ ಕ್ಷಮಾದಾನ ಯೋಜನೆ ತರುವ ಯಾವುದೇ ಉದ್ದೇಶಿವಿಲ್ಲ. ಬಜೆಟ್ ಪ್ರಕ್ರಿಯೆಗಳು ಜಾರಿಯಾಗಿರುವುದರಿಂದ ಇಂತಹ ಸುದ್ದಿಗಳು ಹರಿದಾಡುತ್ತಿವೆಯಷ್ಟೇ ಎಂದು ಮೂಲಗಳು ಹೇಳಿವೆ.
ಕಪ್ಪು ಹಣದ ವಿರುದ್ಧ ಹೋರಾಟದ ಭಾಗವಾಗಿ ಈ ಹಿಂದೆ ನೋಟು ನಿಷೇಧ ಮಾಡಿದಂತೆ, ಅಕ್ರಮವಾಗಿ ಚಿನ್ನದ ಮೇಲೆ ಮಾಡಿದ ಹೂಡಿಕೆಗಳನ್ನು ಮಟ್ಟಹಾಕಲು ಸರಕಾರ ಉದ್ದೇಶಿಸಿದೆ ಎನ್ನಲಾಗಿತ್ತು.
ಮಿತಿಗಿಂತ ಹೆಚ್ಚು ಚಿನ್ನ ಹೊಂದಿದ್ದರೆ, ಅವರ ವಿರುದ್ಧ ತೆರಿಗೆಗಳನ್ನು ಹೇರಿ, ಅದನ್ನು ಸಕ್ರಮಗೊಳಿಸಿಕೊಳ್ಳಬೇಕು ಎಂದು ಹೇಳಲಾಗಿತ್ತು.
ಸದ್ಯ ದೇಶದಲ್ಲಿ 20 ಸಾವಿರ ಟನ್ ಚಿನ್ನ ತೆಗೆದಿರಿಸಿದ ಸ್ಥಿತಿಯಲ್ಲಿದೆ ಎಂದು ಅಂದಾಜಿಸಲಾಗಿದೆ. ಜತೆಗೆ ಲೆಕ್ಕವಿಲ್ಲದ ಆಮದಿನೊಂದಿಗೆ ಹಿಂದಿನ ಕಾಲದ ಲೆಕ್ಕವನ್ನೂ ತೆಗೆದುಕೊಂಡರೆ 30 ಸಾವಿರ ಟನ್ ಚಿನ್ನವಿರಬಹುದು ಎನ್ನಲಾಗಿದೆ.