ಹಳ್ಳಿಗಳಿಂದ ಬಂದವರಿಗೆ ಬೆಂಗಳೂರಿನಂಥ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಒಂಟಿತನ ಕಾಡಲು ಶುರುವಾಗಿಬಿಡುತ್ತದೆ. ಇಲ್ಲಿನವರಲ್ಲಿ ಬಹುತೇಕರು ತಾವಾಯ್ತು ತಮ್ಮ ಪಾಡಾಯ್ತು. ನಮಗ್ಯಾಕೆ ಬೇಕಪ್ಪ ಬೇರೆಯವರ ಉಸಾಬರಿ ಅನ್ನೋ ರೀತಿ ಬದುಕುತ್ತಿರುತ್ತಾರೆ. ಹೀಗಾಗಿ, ಮಹಾನಗರಕ್ಕೆ ಹೊಕ್ಕರೆ ಸಾಕು ಒಂಥರಾ ಅಪರಿಚಿತ ಭಾವ. ದಾರಿಯಲ್ಲಿ ಬಿದ್ದರೂ, ಎದ್ದರೂ ಯಾಕೆ, ಏನು ಎಂದು ಯಾರೂ ಕೇಳುವುದಿಲ್ಲ, ಹೇಳುವುದಿಲ್ಲ. ಇಂಥ ಸಂದರ್ಭದಲ್ಲಿ, ಮಹಾನಗರದೊಳಗೆ ಅಡಗಿರುವ ಅಮಾನವೀಯತೆಯ ದರ್ಶನವಾಗುತ್ತದೆ.
ಇಂಥದೇ ಅನುಭವ ನನಗೂ ಆಯಿತು. ನಾನು ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿಗೆ ಬಂದಾಗ ಹೊಂದಿಕೊಳ್ಳುವುದಕ್ಕೆ ಸ್ವಲ್ಪ ಕಷ್ಟವಾಗಿತ್ತು. ಅದರಲ್ಲೂ ನಮ್ಮ ಹಳ್ಳಿಯ ಆಹಾರಕ್ಕೂ, ನಗರ ಪ್ರದೇಶದ ಹೋಟೆಲ್ ಊಟ ಹೊಂದಾಣಿಕೆ ಆಗದೇ, ನಾನು ನಿಯಮಿತವಾಗಿ ಸೇವಿಸದೇ ಆರೋಗ್ಯ ಹದಗೆಟ್ಟಿತ್ತು. ಇದೇ ಪರಿಸ್ಥಿತಿಯಲ್ಲಿ ಕೆಲಸಕ್ಕೆ ಹೋಗಲೇ ಬೇಕಾದ ಅನಿವಾರ್ಯ ಎದುರಾಯಿತು. ಹೀಗಾಗಿ, ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದೆ.
ಬೆಳಗ್ಗೆ ಒಂಭತ್ತು ಗಂಟೆಗೆ ಹೊರಟೆ. ಪೀಕ್ ಅವರ್ ಆಗಿದ್ದರಿಂದ ಮೆಟ್ರೋ ಪೂರ್ತಿ ಜನಜಂಗುಳಿ. ಕೂರಲು ಸೀಟುಗಳು ಇರಲಿಲ್ಲ. ಹಾಗೂ ಹೀಗೂ ಮಾಡಿ ನಿಂತೇ ಇದ್ದೆ. ಒಂದಷ್ಟು ಸಮಯ ಕಳೆಯಿತು. ಏನಾಯಿತೋ ಗೊತ್ತಿಲ್ಲ. ಇದಕ್ಕಿದ್ದಂತೆ ತಲೆ ಸುತ್ತಲು ಶುರುವಾಯಿತು. ನಿಂತಲ್ಲೇ ಕುಸಿದು ಬಿದ್ದೆ. ಬಿದ್ದ ರಭಸಕ್ಕೆ ಮೂಗು, ಬಾಯಲ್ಲೆಲ್ಲಾ ರಕ್ತ ಸುರಿಯಲು ಶುರುವಾಯಿತಂತೆ. ಎಲ್ಲಿದ್ದೀನಿ, ಹೇಗಿದ್ದೀನಿ, ಏನಾಗಿದೆ ತಿಳಿಯದು. ಆದರೆ, ಮುಂದಿನ ನಿಲ್ದಾಣದ ಸೂಚನೆ ಸಣ್ಣದಾಗಿ ಕಿವಿಯಲ್ಲಿ ಮೊಳಗಿದಾಗಲೇ ಪ್ರಜ್ಞೆ ಬಂದಿದೆ ಅಂತ ಗೊತ್ತೂಗಿದ್ದು. ಮೆಟ್ರೋದಲ್ಲಿ ಅಷ್ಟೊಂದು ಜನರಿದ್ದರೂ, ಯಾರೂ ಕೂಡ ಕೆಳಗೆ ಬಿದ್ದಿದ್ದ ನನ್ನ ಸಹಾಯಕ್ಕೆ ಬರಲಿಲ್ಲ. ನಾನು ಹಾಗೇ ಬಿದ್ದೇ ಇದ್ದೆ. ಏಳಲು ಕೂಡ ಆಗುತ್ತಿಲ್ಲ. ಆದರೆ ದೇವರು ನನ್ನ ಪಾಲಿಗೆ ಇದ್ದ ಎನಿಸುತ್ತದೆ. ಜನಜಂಗುಳಿಯ ಮಧ್ಯೆ ಇದ್ದ ಯಾರೋ ಒಬ್ಬ ಮಹಾತಾಯಿ ಮುಂದೆ ಬಂದು, ನನ್ನನ್ನು ಎಚ್ಚರಿಸಿ, ಎಬ್ಬಿಸಿ ಮೆಟ್ರೋದಿಂದ ಇಳಿಸಿ ಕೊಂಡು ಬಂದರು. ಆನಂತರ, ನೀರು ಕುಡಿಸಿ, ವಿಚಾರಿಸಿದರು.
ಆಕೆ ಇಷ್ಟಕ್ಕೇ ಬಿಡಲಿಲ್ಲ. ವಾಪಸ್ಸು ನನ್ನ ಹಾಸ್ಟೆಲ್ ತನಕ ಜೊತೆಗೆ ಬಂದು, ಹುಷಾರಮ್ಮಾ ಅಂತ ಹೇಳಿ ಬಿಟ್ಟು ಹೋದರು. ಇಂಥ ದೊಡ್ಡ ಮಹಾನಗರದಲ್ಲಿ ಗೊತ್ತಿಲ್ಲದ ಅಪರಿಚಿತ ತಾಯಿ ನನ್ನನ್ನು ರಕ್ಷಿಸಿದೇ ಇದ್ದಿದ್ದರೆ ನಾನು ಏನಾಗುತ್ತಿದ್ದೆನೋ?
ಆವತ್ತು ಆಕೆ ಕೇಳಿದ ಪ್ರಶ್ನೆಗೆ ಏನೆಂದು ಉತ್ತರಿಸಿದೇನೋ ನೆನಪಿಲ್ಲ. ಇಷ್ಟಾಗಿಯೂ ಆ ತಾಯಿ ತನ್ನ ವಿಳಾಸ ಮಾತ್ರ ತಿಳಿಸಲಿಲ್ಲ. ನನಗೋ, ಆ ಪರಿಸ್ಥಿತಿಯಿಂದ ಪಾರಾದರೆ ಸಾಕಿತ್ತು. ಹಾಗಾಗಿ, ನಾನು ಹೆಸರು ಕೂಡ ಕೇಳಲಿಲ್ಲ. ದೇವರಂತೆ ಬಂದ ಮಹಾತಾಯಿಯ ಋಣ ತೀರಿಸಲು ಸಾಧ್ಯವೇ ಇಲ್ಲ.
ಭಾಗ್ಯಶ್ರೀ.ಎಸ್