ಸಾಧನೆ ಮಾಡಹೊರಟವರಿಗೆ ಗುರಿ ಮತ್ತು ಗುರು ಇವೆರಡೂ ಅತ್ಯವಶ್ಯ. ಆಯ್ದುಕೊಂಡ ಗುರಿ ಸ್ಪಷ್ಟವಾಗಿಲ್ಲದಿದ್ದರೂ ಮಾರ್ಗದರ್ಶನ ನೀಡುವ ಗುರು ಸರಿ ಇಲ್ಲದಿದ್ದರೂ ಸಾಧನೆ ಎಂಬುದು ದೂರದ ಮಾತೇ ಸರಿ. ಸಾಧನೆ ಎಂಬುದು ಹಣಬಲ, ಜನಬಲಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಪ್ರತಿ ಸಾಧನೆಯೂ ಅವಲಂಬಿತವಾಗಿರುವುದು ವ್ಯಕ್ತಿಯಲ್ಲಿನ ಆತ್ಮವಿಶ್ವಾಸ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ಗುರುವಿನ ಮೇಲೆ.
ಒಂದೂರಿನಲ್ಲಿ ಒಬ್ಬ ಹುಡುಗನಿದ್ದ. ಆತನಿಗೆ ಕರಾಟೆಯೆಂದರೆ ಪಂಚ ಪ್ರಾಣ. ಕರಾಟೆ ಚಾಂಪಿಯನ್ ಆಗಬೇಕೆಂಬ ಹಂಬಲ. ಮಗನ ಆಸಕ್ತಿಯನ್ನು ಗಮನಿಸಿದ ಆತನ ತಂದೆಯೂ ಮಗನನ್ನು ಕರಾಟೆ ತರಗತಿಗೆ ಸೇರಿಸಿದ. ಈತನ ಉತ್ಸಾಹವನ್ನು ಕಂಡ ಗುರುವೂ ನಿಬ್ಬೆರಗಾದ. ಅನಂತರ ಕೆಲ ದಿನ ಗಳಲ್ಲಿ ನಡೆದ ಕಾರಿನ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಹುಡುಗ ತನ್ನ ಎಡಗೈಯನ್ನು ಕಳೆದುಕೊಂಡ. ಘಟನೆ ಬಳಿಕ ಹುಡುಗನಿಗೆ ಆಕಾಶವೇ ತಲೆಮೇಲೆ ಬಿದ್ದಂತಾಗಿತ್ತು. ಕರಾಟೆ ಮಾಡಲು ಎರಡೂ ಕೈಗಳು ಬೇಕೇ ಬೇಕು. ಆದರೆ ತನಗೆ ಒಂದು ಕೈ ಇಲ್ಲದ ಕಾರಣ ತನ್ನೆಲ್ಲಾ ಕನಸು ಕಮರಿ ಹೋಯಿತೆಂಬ ಕೊರಗು ಆತನನ್ನು ಕಾಡುತ್ತಿತ್ತು.
ಈ ನಡುವೆ ಇದ್ದಕ್ಕಿದ್ದಂತೆ ಒಂದುದಿನ ಆತನ ಕರಾಟೆ ಗುರು ಮನೆಗೆ ಬಂದ. “ತರಗತಿಗೆ ಯಾಕೆ ಬರುತ್ತಿಲ್ಲ?’ ಎಂದು ಹುಡುಗನನ್ನು ಪ್ರಶ್ನಿಸಿದ. ಅಳುತ್ತ ಹುಡುಗ ಕೇಳಿದ, “ಏನು ಗುರುಗಳೇ ನೀವೂ ನನ್ನನ್ನು ತಮಾಷೆ ಮಾಡುತ್ತಿದ್ದೀರಾ’ ಎಂದು. ಆಗ ಗುರುಗಳು ಹೇಳಿದರು, “ಕೈಗಳು ಇಲ್ಲದಿದ್ದರೆ ಏನಾಯಿತು? ಸಾಧಿಸಬೇಕೆಂಬ ಅಚಲವಾದ ವಿಶ್ವಾಸ ನಿನ್ನಲ್ಲಿದ್ದರೆ ನನ್ನೊಡನೆ ಬಾ. ನಿನ್ನಿಂದ ಎಲ್ಲವೂ ಸಾಧ್ಯ ಎಂಬ ವಿಶ್ವಾಸವಿಟ್ಟುಕೊಂಡು, ಗುರುವಾದ ನನ್ನನ್ನು ನಂಬು. ಉಳಿದೆಲ್ಲ ವಿಷಯವನ್ನು ನನಗೆ ಬಿಟ್ಟುಬಿಡು. ನಾನು ನಿನಗೆ ಹೇಳಿಕೊಡುವುದು ಕರಾಟೆಯ ಒಂದು ಪಟ್ಟನ್ನು ಮಾತ್ರ. ಅದನ್ನು ನೀನು ಶ್ರದ್ಧೆಯಿಂದ ಕಲಿತೆಯೋ ನಿನ್ನ ಗೆಲುವನ್ನು ಯಾರೂ ತಡೆಯಲಾರರು’ ಎಂದ. ಇದಕ್ಕೊಪ್ಪಿದ ಹುಡುಗ ಅಂದಿನಿಂದಲೇ ಶ್ರದ್ಧೆಯಿಂದ ಅಭ್ಯಸಿಸತೊಡಗಿದ. ಕೆಲ ದಿನಗಳಲ್ಲೇ ಆರಂಭವಾದ ಚಾಂಪಿ ಯನ್‌ಶಿಪ್ ಪಂದ್ಯಾಟದಲ್ಲಿಯೂ ಹಂತ ಹಂತವಾಗಿ ಗೆದ್ದು ಫೈನಲ್ ಕೂಡ ಗೆದ್ದುಬಿಟ್ಟ. ಆತನ ಆನಂದಕ್ಕೆ ಪಾರವೇ ಇರಲಿಲ್ಲ. ಅನಂತರ ಗುರುವಿನ ಕಾಲಿಗೆ ನಮಸ್ಕರಿಸಿ ಆತ ಕೇಳಿದ, “ಗುರುಗಳೇ, ಒಂದೇ ಕೈಯಿದ್ದರೂ ನಾನು ಗೆದ್ದಿದ್ದಾದರೂ ಹೇಗೆ?’ ಎಂದು. ಅದಕ್ಕೆ ಗುರು ಹೇಳಿದ, “ನಾನು ನಿನಗೆ ಹೇಳಿಕೊಟ್ಟ ಪಟ್ಟಿನಿಂದ ಎದುರಾಳಿಗಳು ತಪ್ಪಿಸಿಕೊಳ್ಳಬೇಕೆಂದರೆ ಅವರು ನಿನ್ನ ಎಡಗೈಯನ್ನು ಹಿಂದಕ್ಕೆ ಎಳೆದು ತರಲೇಬೇಕು. ಆದರೆ ನಿನಗೆ ಎಡಗೈ ಇಲ್ಲದ ಕಾರಣ ಅದು ಅವರ್ಯಾರ ಬಳಿಯೂ ಸಾಧ್ಯವಾಗಲಿಲ್ಲ’ ಎಂದ.
ಇದೊಂದು ಚಿಕ್ಕ ಕತೆಯಷ್ಟೆ. ಆದರೆ ಸ್ಪಷ್ಟ ಗುರಿ, ದೈಹಿಕ ನ್ಯೂನತೆಯನ್ನೂ ಅನುಕೂಲಕ್ಕೆ ಬಳಸಿಕೊಂಡು ನಿಮ್ಮ ಗೆಲುವಿಗೆ ಶ್ರಮಿಸುವ ಗುರು ಇದ್ದರೆ ಯಾವುದೂ ಅಸಾಧ್ಯವಲ್ಲ ಎಂಬ ಮಹತ್ತರ ಸಂದೇಶ ಇಲ್ಲಿದೆ.
- ಪ್ರಸನ್ನ ಹೆಗಡೆ ಊರಕೇರಿ