Advertisement

ಅಪರಾಧ ಮುಕ್ತ ಸಮಾಜ ನಿರ್ಮಾಣ ಇಲಾಖೆಯ ಗುರಿ: ಕೆ. ಟಿ. ಬಾಲಕೃಷ್ಣ

07:40 AM Jul 21, 2017 | Team Udayavani |

ಕಾಪು: ಅಪರಾಧ ಮುಕ್ತ ಸಮಾಜ ನಿರ್ಮಾಣವೇ ಪೊಲೀಸ್‌ ಇಲಾಖೆಯ ಮುಖ್ಯ ಗುರಿಯಾಗಿದೆ. ಇಲಾಖೆ ಸದ‌ೃಢವಾಗಿದ್ದರೆ ಮಾತ್ರ ವ್ಯವಸ್ಥೆ ಸುಧಾರಿಸಲು ಸಾಧ್ಯವಿದೆ. ಅದನ್ನು ಮನಗಂಡು ನಾಗರಿಕರ ಸಹಕಾರದೊಂದಿಗೆ ಕಾನೂನಾತ್ಮಕ ರೀತಿಯಲ್ಲಿ ಸುಧಾರಿತ ಗಸ್ತು ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರಲಾಗಿದ್ದು, ನಿರಂತರ ಪೊಲೀಸ್‌ 
ಬೀಟ್‌ಗೆ ಮುಂದಡಿಯಿಡಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಟಿ. ಬಾಲಕೃಷ್ಣ ಹೇಳಿದರು.
ಗುರುವಾರದಂದು ಕಾಪು ಶ್ರೀ ಲಕ್ಶ್ಮೀ ಜನಾರ್ದನ ದೇವಸ್ಥಾನದ ಸಭಾಭವನದಲ್ಲಿ ನಡೆದ ಕಾಪು ಪೊಲೀಸ್‌ ವೃತ್ತದ ಕಾಪು, ಶಿರ್ವ ಮತ್ತು ಪಡುಬಿದ್ರಿ ಪೊಲೀಸ್‌ ಠಾಣಾ ವ್ಯಾಪ್ತಿಯ ಸುಧಾರಿತ ಗಸ್ತು ಸಮಿತಿ ಸದಸ್ಯರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

Advertisement

ಹಿಂದಿನ ಪೊಲೀಸ್‌ ವ್ಯವಸ್ಥೆಗೂ ಇಂದಿನ ಪೊಲೀಸ್‌ ವ್ಯವಸ್ಥೆಗೂ ಅಜಗಜಾಂತರದ ವ್ಯತ್ಯಾಸವಿದೆ. ಅದೇ ರೀತಿ ಹಿಂದಿನ ಅಪರಾಧ ಸ್ವರೂಪಕ್ಕೂ ಇಂದಿನ ಅಪರಾಧ ಸ್ವರೂಪಕ್ಕೂ ಬದಲಾವಣೆಗಳಾಗಿವೆ. ಈಗಿನ ವ್ಯವಸ್ಥೆಗಳಡಿ ಹೊಂದಿಕೊಂಡು, ಜನ ಸಾಮಾನ್ಯರ ಆಶೋತ್ತರಗಳಿಗೆ ಪೂರಕವಾಗಿ ಸ್ಪಂದಿಸಬೇಕಾದರೆ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಅನಿವಾರ್ಯವಾಗಿದೆ ಎಂದರು.

ಸಂಘಟಿತ ಅಪರಾಧಗಳ ನಿಯಂತ್ರಣ ಇಲಾಖೆಗೆ ಕಠಿನ ಸವಾಲು: ಸಮಾಜದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಟ್ಕಾ-ಜುಗಾರಿ, ಗಾಂಜಾ-ಚರಸ್‌ ಮಾರಾಟ ಮತ್ತು ಸೇವನೆ ಸಹಿತ ಇತ್ಯಾದಿ ಸಂಘಟಿತ ಅಪರಾಧಗಳನ್ನು ನಿಯಂತ್ರಿಸುವುದು ಪೊಲೀಸ್‌ ಇಲಾಖೆಯ ಮುಂದಿರುವ ದೊಡ್ಡ ಮತ್ತು ಕಠಿನ ಸವಾಲಾಗಿದೆ. ಇದನ್ನು ಒಮ್ಮೆಗೆ ನಿಯಂತ್ರಿಸುವುದು ಕಷ್ಟ ಸಾಧ್ಯವಾಗಿದೆ. ಒಂದು ಕಡೆ ನಿಯಂತ್ರಣಕ್ಕೆ ಬಂದಾಗ ಮತ್ತೂಂದು ಕಡೆ ಪ್ರಾರಂಭವಾಗುವ ಸಾಧ್ಯತೆಗಳಿದ್ದು, ಆ ಕಾರಣದಿಂದಾಗಿ ಅದರ ಮೂಲವನ್ನೇ ಹತ್ತಿಕ್ಕುವ ಪ್ರಯತ್ನ ಇಲಾಖಾ ಮಟ್ಟದಲ್ಲಿ ನಡೆಯುತ್ತಿದೆ ಎಂದರು.

ಸಾರ್ವಜನಿಕರಿಂದ ಆರೋಪಗಳ ಸುರಿಮಳೆ: ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ಕೂಲಿ ಕಾರ್ಮಿಕರ ಪಟ್ಟಿ ತಯಾರಿಸಿ ಅವರ ಬಗ್ಗೆ ಜಾಗೃತೆ ವಹಿಸುವುದು, ಕಾಪು ಮತ್ತು ಕಟಪಾಡಿ ಪೇಟೆಯಲ್ಲಿನ ಟ್ರಾಫಿಕ್‌ ವ್ಯವಸ್ಥೆ, ಗಾಂಜಾ, ಅಫೀಮು ಮಾರಾಟ ಜಾಲ, ಮಟ್ಕಾ, ಜುಗಾರಿ, ಮಾದಕ ವಸ್ತುಗಳ ನಿಯಂತ್ರಣ, ಶಿರ್ವ ಪೊಲೀಸ್‌ ಠಾಣೆಗೆ ಜೀಪು ಒದಗಿಸುವಲ್ಲಿನ ವೈಫಲ್ಯ ಇತ್ಯಾದಿ ವಿಚಾರಗಳ ಬಗ್ಗೆ ಸಾರ್ವಜನಿಕರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಸುಧಾರಿತ ಗಸ್ತು ವ್ಯವಸ್ಥೆಯ ಬಗ್ಗೆ ಸಿಬಂದಿಗಳಾದ ನರೇಶ್‌ ಪಡುಬಿದ್ರಿ, ಗಣೇಶ್‌ ಕಾಪು, ಮಧುಸೂದನ್‌ ಶಿರ್ವ ಮಾಹಿತಿ ನೀಡಿದರು. ಬೀಟ್‌ ಸದಸ್ಯರ ಪರವಾಗಿ ಲೀಲಾಧರ ಶೆಟ್ಟಿ, ರಾಮರಾಯ ಪಾಟ್ಕರ್‌, ಶೇಖರ್‌ ಹೆಜಮಾಡಿ ಅಭಿಪ್ರಾಯ ವ್ಯಕ್ತ ಪಡಿಸಿದರು. ಕಾಪು ಎಸೈ ಜಗದೀಶ್‌ ರೆಡ್ಡಿ, ಶಿರ್ವ ಎಸೈ ನರಸಿಂಹ ಶೆಟ್ಟಿ ಉಪಸ್ಥಿತರಿದ್ದರು. ಪೊಲೀಸ್‌ ಉಪಾಧೀಕ್ಷಕ ಎಸ್‌. ಜೆ. ಕುಮಾರಸ್ವಾಮಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾಪು ವೃತ್ತ ನಿರೀಕ್ಷಕ ಹಾಲಮೂರ್ತಿ ರಾವ್‌ ವಂದಿಸಿದರು. ಪಡುಬಿದ್ರಿ ಎಸೈ ಸತೀಶ್‌ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next