ಬಾಡಿಗೆ ಮನೆಯ ಆ ಕೊಠಡಿಗೆ ಮೌನದ ಬಣ್ಣ ಬಳಿದಿತ್ತು. ಅಲ್ಲಿ ಕುಳಿತ ಯಾರಿಗಾದರೂ ಜೋರಾಗಿ ಉಸಿರಾಡಲು ಭಯವಾಗುತ್ತಿತ್ತು. ಮಾತುಗಳು ಎಣಿಕೆಗೆ ಸಿಗುತ್ತಿದ್ದವು. ಒಂದು ವೇಳೆ ಮಾತನಾಡಿದರೆ ಪರೀಕ್ಷೆ, ಸಿಲಬಸ್, ಕ್ವಶ್ಚನ್ ಪೇಪರ್ ಹೀಗೆ ಆರಂಭವಾಗಿ ಕೀ ಉತ್ತರ, ಫಲಿತಾಂಶ, ಆಯ್ಕೆ ಪಟ್ಟಿಯವರೆಗೆ ಸಾಗಿ ಮಾತು ಮುಗಿಯುತ್ತಿದ್ದವು. ಅವರ ಓದಿಗೆ ಸಿಗದ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳೇ ಇಲ್ಲವೇನೋ ಎಂಬಂತೆ ಓದುವುದು ಅವರಿಗೆ ಅಭ್ಯಾಸವೂ ಹವ್ಯಾಸವೂ ಆಗಿತ್ತು.
ಆ ಕೊಠಡಿಯ ಮೂಲೆಮೂಲೆಗಳಿಗೂ ಪುಸ್ತಕದ ನಂಟು. ಓದಿದ, ಓದಲು ಇಟ್ಟುಕೊಂಡ, ಓದಬೇಕಾದ ಆದ್ಯತೆಯ ಆಧಾರದ ಮೇಲೆ ಸ್ಥಾನಪಲ್ಲಟವಾಗುತ್ತಿತ್ತು ಮೇಲಿಂದ ಮೇಲೆ. ಅದು ಅವರ ಓದಿನ ವೇಗವನ್ನು ಮತ್ತು ಓಘವನ್ನು ಅವಲಂಬಿಸಿತ್ತು ಹಾಗೂ ಪ್ರತಿಬಿಂಬಿಸುತ್ತಿತ್ತು. ಯಾವುದೇ ಉದ್ಯೋಗದ ನೇಮಕಾತಿ ವಿವರ ಕೇಳಿದರೂ ಅವರ ನಾಲಗೆ ತುದಿಯಲ್ಲೇ! ಅಡ್ಮಿಶನ್ ಟಿಕೆಟ್‌ಗಳು, ಯಾವ ಪರೀಕ್ಷೆ? ಯಾವ ಭಾನುವಾರ? ಯಾವ ಊರಲ್ಲಿ? ಎಂಬ ಗೊಂದಲ ಮೂಡಿಸುವಂತಿರುತ್ತಿದ್ದವು.
ಜೊತೆಗೊಂದಿಷ್ಟು ಅಡಿಯೋ ಕ್ಲಿಪ್‌ಗ್ಳು ಅವರ ಮೊಬೈಲ್‌ನ ಸಂಗೀತ ಕಡತಗಳ ಮೊದಲ ಪಟ್ಟಿಯಲ್ಲಿ ಮಾತಾಡುತ್ತಿದ್ದವು. ಮೊಬೈಲ್ ಹೋಂಸ್ಕ್ರೀನ್‌ನಲ್ಲಿ ಜಾಗ ಪಡೆದ ಅಪ್ಲಿಕೇಶನ್‌ಗಳು ಪರೀಕ್ಷಾ ಸಂಬಂಧಿಯೇ ಎಂಬುದರಲ್ಲಿ ವಿಶೇಷತೆಯೇನೂ ಇರಲಿಲ್ಲ. ಅದು ಆ ಮೊಬೈಲ್‌ನ ಸಹಜ ಧರ್ಮವಾಗಿತ್ತು. ವಾಟ್ಸಾಪ್ ಗ್ರೂಪ್‌ಗ್ಳು ದಿನ ವಿ ಡೀ ಪ್ರಶ್ನೋತ್ತರಗಳನ್ನೇ ಚಾಟಿಸುತ್ತಿದ್ದವು. ಅವರೆಲ್ಲರ ಬಳಿ ಲ್ಯಾಪ್‌ಟಾಪ್ ಇತ್ತು. ಬ್ರೌಸಿಂಗ್ ಹಿಸ್ಟರಿಯನ್ನು ನೋಡಿದರೂ ಸಾಕು, ಪ್ರತ್ಯೇಕವಾಗಿ ಓದುವ ಅಗತ್ಯವೇ ಇರಲಿಲ್ಲ. ಅಷ್ಟರಲ್ಲಿಯೇ ಅಂಕ ಪಡೆಯುವ ಸರಕು ಸಿಗುತ್ತಿತ್ತು.
ಇವರು ಓದಿ ಓದಿ ಕೆಟ್ಟ ಕೂಚುಭಟ್ಟರಲ್ಲ. ಬಹಳಷ್ಟು ನೌಕರಿಗಳ ಬಾಗಿಲಿಗೆ ಹೋಗಿ ಮರಳಿದ್ದಾರೆ. ಅದು ಸೋಲಲ್ಲ, ಮತ್ತೂಂದು ಪ್ರಯತ್ನಕ್ಕೆ ತೆರೆದ ಬಾಗಿಲು ಎಂದುಕೊಳ್ಳುತ್ತಾರೆ. ಕೆಲವೇ ಪಾಯಿಂಟ್‌ಗಳ ಅಂತರದಲ್ಲಿ ಆಯ್ಕೆಪಟ್ಟಿಯಿಂದ ಕೆಳಜಾರಿದ್ದಾರೆ. ಆದರೂ ಓದುವುದನ್ನು ಬಿಡುವುದಿಲ್ಲ. ಇಷ್ಟು ಓದಿಗೆ ನೌಕರಿ ಸಿಗದಿದ್ದರೆ ಹೋಯ್ತು. ಕೊನೇಪಕ್ಷ ಅಳಿಸಲಾಗದ ಜ್ಞಾನದ ಮುದ್ರೆ ಶಾಶ್ವತವಾಗಿ ಉಳಿಯುತ್ತದಲ್ಲ ಎಂಬ ಆಶಾಭಾವನೆಯಲ್ಲಿ ಪುಸ್ತಕದ ಪುಟ ತಿರುಗಿಸುತ್ತಾರೆ. ಈ ಸಲವಾದರೂ ಇವರಿಗೊಂದು ನೌಕರಿ ಸಿಗಲಿ ಎಂಬ ಖುಷಿಯೊಂದಿಗೆ ಕಿಟಕಿಯನ್ನು ದಾಟಿ ಬಂದ ತಂಗಾಳಿ ಒಮ್ಮೆಲೇ ಹತ್ತು ಪುಟಗಳನ್ನು ಹೊರಳಿಸಿ ನಗುತ್ತದೆ.
* ಸೋಮು ಕುದರಿಹಾಳ, ಗಂಗಾವತಿ