ಮಾಗಡಿ: ಪ್ರತಿಯೊಬ್ಬ ಮನುಷ್ಯ ಆರೋಗ್ಯ ದಿಂದ ಬದುಕಲು ಪಂಚೇಂದ್ರಿಯಗಳು ಮತ್ತು ಕರ್ಮೇಂದ್ರಿಯಗಳು ಕ್ರಿಯಾತ್ಮಕವಾಗಿರಬೇಕು ಎಂದು ಗುಮ್ಮಸಂದ್ರದ ಮಠಾಧೀಶ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು. ಪಟ್ಟಣದ ಮಾರುಕಟ್ಟೆ ಬಳಿ ಇರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಬೆಂಗಳೂರಿನ ಸೋಲಂಕಿ ಆಸ್ಪತ್ರೆ ಮತ್ತು ಪ್ರೊಜೆಕ್ಟ್ ದೃಷ್ಟಿ ಸಹಯೋಗದಲ್ಲಿ ಏರ್ಪಡಿಸಿದ್ದ ಮೆಘಾ ನೇತ್ರಾ ಉಚಿತ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯನ ಸೃಷ್ಟಿಕರ್ತ ಶಿವ, ಆದರೂ ಸಹ ಬದುಕಿನ ಅಂಗಾಂಗ ನ್ಯೂನತೆಗಳನ್ನು ಸರಿಪಡಿಸುವ ದೇವರು ವೈದ್ಯರು. ಜತೆಗೆ ಅಜ್ಞಾನದ ಅಂಧಕಾರವನ್ನು ದೂರ ಮಾಡಿ, ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ತ್ರಿವೇಣಿ ಅಕ್ಕ ಮತ್ತು ಗಂಗಾಧರಣ್ಣನವರ ನಿಸ್ವಾರ್ಥ ಸೇವೆ ನಿಜಕ್ಕೂ ಅವಿಸ್ಮರಣೀಯ ಎಂದು ಹೇಳಿದರು.
ಜಾತ್ಯತೀತವಾಗಿ ಎಲ್ಲಾ ವರ್ಗದವರಿಗೆ ಪ್ರತಿದಿನ ಓಂಕಾರದ ಮೂಲಕ ಶಿವನ ದರ್ಶನ ಮಾಡಿಸಿ, ಅವರ ಅಂಗಾಂಗ ನ್ಯೂನತೆಗಳನ್ನು ಸರಿಪಡಿಸಲು ದಾನಿಗಳ ಸಹಕಾರದೊಂದಿಗೆ ಕಣ್ಣಿನ ಉಚಿತ ತಪಾಸಣೆ ಶಿಬಿರಗಳನ್ನು ಆಯೋಜಿಸಿದ ಸಂಸ್ಥೆಯ ನಿಸ್ವಾರ್ಥಸೇವೆಯನ್ನು ಸ್ವಾಮೀಜಿಗಳು ಶ್ಲಾಸಿದರು. ಸೋಲಂಕಿ ಆಸ್ಪತ್ರೆಯ ನಿರ್ದೇಶಕ ನಲಪತ್ತು ಸೋಲಂಕಿ ಮಾತನಾಡಿ , ಮನುಷ್ಯನ ಎಲ್ಲ ಅಂಗಗಳಲ್ಲಿ ಕಣ್ಣು ಶ್ರೇಷ್ಠವಾದುದು. ಕಣ್ಣಿಲ್ಲದಿದ್ದರೆ ಪ್ರಪಂಚವೇ ಶೂನ್ಯ. ಸೋಲಂಕಿ ಆಸ್ಪತ್ರೆಯಿಂದ ಇಲ್ಲಿಯವರೆಗೆ ಸುಮಾರು 2.60 ಲಕ್ಷ ಮಂದಿಗೆ ಉಚಿತವಾಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿದ್ದೇವೆ. ಸಂಸ್ಥೆಯ ಸೇವೆ ಹೀಗೆಮುಂದುವರಿಯಲಿದೆ.
ಬಡವರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ತ್ರಿವೇಣಿಯಕ್ಕ ಮಾತನಾಡಿ, ಸ್ವಸ್ಥ ಸಮಾಜ ನಿರ್ಮಾಣದಲ್ಲಿ ನಮ್ಮ ಸಂಸ್ಥೆ ತೊಡಗಿಸಿಕೊಂಡಿದೆ. ಮನಸ್ಸು ಹೇಗೆ ಯೋಚಿಸುತ್ತದೋ ಹಾಗೆ ಇರುತ್ತೇವೆ. ನಾವು ಸ್ವಸ್ಥನಾಗಿದ್ದೇವೆ ಎಂದು ಭಾವಿಸಬೇಕು. ಆಗ ನಮ್ಮ ಕಷ್ಟಗಳು ದೂರವಾಗಿ ಉತ್ತಮ ಜೀವನ ಮಾಡಲು ಅನುಕೂಲವಾಗುತ್ತದೆ. ತಮ್ಮ ವಿದ್ಯಾಲಯದ ವತಿಯಿಂದ ಸಾಮಾಜಿಕ
ಸೇವೆಯಲ್ಲಿ ನಿರತರಾಗಿದ್ದೇವೆ ಎಂದು ತಿಳಿಸಿದರು. ಸಮಾಜ ಸೇವಕ ನಂದಿ ಡ್ರೈವಿಂಗ್ ಸ್ಕೂಲ್ ಪ್ರಾಂಶುಪಾಲ ತಗಚಕುಪ್ಪೆ ನರಸಿಂಹಮೂರ್ತಿ ಮಾತನಾಡಿ, ನೇತ್ರದಾನ ಪವಿತ್ರವಾದ ದಾನ. ಸತ್ತಾಗ ಕಣ್ಣುಗಳನ್ನು ಮಣ್ಣು ಮಾಡಿ ನಾಶ ಮಾಡುವ ಬದಲಾಗಿ ನೇತ್ರದಾನ ಮಾಡಿದರೆ ಮತ್ತೂಬ್ಬರ ಬದುಕಿಗೆ ಬೆಳಕಾಗಬಹುದು.
ಮೇರುನಟ ದಿ.ಡಾ.ರಾಜ್‌ಕುಮಾರ್ ನೇತ್ರದಾನ ಮಾಡುವ ಮೂಲಕ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ. ವಿಶ್ವಖ್ಯಾತಿ ಬೆಂಗಳೂರು ಕಟ್ಟಿದ ಮಾಗಡಿ ಕೆಂಪೇಗೌಡರ ತವರೂರು ಮಾಗಡಿಯೂ ಮಾನವೀಯತೆಯಲ್ಲಿ ವಿಶ್ವಕ್ಕೆ ಮಾದರಿಯಾಗಿ ನಿಲ್ಲಬೇಕಿದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಮಾರಣ್ಣ, ಎಂಜಿನಿಯರ್ ರಮೇಶಣ್ಣ, ಟಿ.ಎಂ.ಶ್ರೀನಿವಾಸ್ ಮಾತನಾಡಿದರು. ಇದೇ ವೇಳೆನೂರಾರು ಮಂದಿಗೆ ಕಣ್ಣಿನ ಉಚಿತ ತಪಾಸಣೆ ಮಾಡಿ ಕನ್ನಡ ವಿತರಣೆ ಮಾಡಲಾಯಿತು. ಅಗತ್ಯವುಳ್ಳವರನ್ನು ಬೆಂಗಳೂರಿಗೆ ಕರೆದೊಯ್ಯುವುದು ಶಸ್ತ್ರ ಚಿಕಿತ್ಸೆ ಮಾಡಿಸಿ ವಾಪಸ್ಸು ಕರೆತರುವುದಾಗಿ ಗಂಗಾಧರಣ್ಣ ತಿಳಿಸಿದರು.
ಬಿವೇರ್ ಸಂಘ ಯುವಶಂತ ಅಧ್ಯಕ್ಷೆ ಲಲಿತ್ ಕುಮಾರ್ ದಕ್ಲಿಯಾ, ಕಾರ್ಯದರ್ಶಿ ಕುಲ್‌ದೀಪ್, ರಾಜಾಬಾಬು ಪರಕ್, ಮೊನಿಷಾಜಿ ಜೈನ್, ನರೇಶ್ ಬೋರಾ, ಜಿತೇಂದ್ರ ಜಿಕಿಬರ್, ಸೌರಭಾ ಜೈನ್,ವೆಂಕಟೇಶ್, ಕೃಷ್ಣ ಕಿಶೋರ್ ರಾಚಯ್ಯ, ಸೊಲಮ್ ಸುಲೈರ್, ಚಿಕ್ಕರಂಗಯ್ಯ, ಭೈರಪ್ಪ, ರಂಗಮ್ಮ, ಗೀತಾ, ಸವಿತಾ, ಮಂಜುಳಾ ಸೇರಿದಂತೆ ಇತರರು ಶಿಬಿರದಲ್ಲಿ ಪಾಲ್ಗೊಂಡಿದ್ದರು.