ಕೊಪ್ಪಳ: ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಜೋರಾಗಿರುವ ಬಗ್ಗೆ ಮಾಹಿತಿ ದೊರೆತಿದೆ. ಈ ಬಗ್ಗೆ ನಿಗಾ ವಹಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ. ಪಾಟೀಲ್ ಅವರು ಪೊಲೀಸ್ ಇಲಾಖೆಗೆ ನೇರವಾಗಿ ಸಭೆಯಲ್ಲಿ ಖಡಕ್ ಎಚ್ಚರಿಕೆ ಕೊಟ್ಟರು.
ಜಿಲ್ಲೆಯಲ್ಲಿ ಅಕ್ರಮದ ಬಗ್ಗೆ ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಜನತೆಗೂ ಮರಳು ಸುಲಭವಾಗಿ ಲಭ್ಯವಾಗುವಂತೆ ಮಾಡಬೇಕಿದೆ. ಅಕ್ರಮ ಗಣಿ ಮತ್ತು ಮರಳು ಸಾಗಾಣಿಕೆ ನಿಯಂತ್ರಣಕ್ಕೆ ಮೈನಿಂಗ್, ಕಂದಾಯ, ಅರಣ್ಯ ಹಾಗೂ ಪೊಲೀಸ್ ಇಲಾಖೆ ದಕ್ಷತೆಯಿಂದ ಕಾರ್ಯನಿರ್ವಹಿಸಬೇಕು. ಮರಳು ಗಣಿಗಾರಿಕೆಯನ್ನು ಸುಗಮಗೊಳಿಸಲು ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕೊಪ್ಪಳ ಜಿಲ್ಲೆಯನ್ನು ಆದ್ಯತೆಯ ಮೇಲೆ ಪರಿಗಣಿಸಿದ್ದು, ಗಣಿಗಾರಿಕೆ ಮತ್ತು ಮರಳುಗಾರಿಕೆಯಲ್ಲಿ ಆದಷ್ಟು ಬೇಗನೆ ಪಾರದರ್ಶಕತೆ ತರಲು ಪ್ರಯತ್ನಿಸಲಾಗುತ್ತಿದೆ ಎಂದರು.
ರೈಲ್ವೆ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೇಂದ್ರ ಸರ್ಕಾರದ ಕಾಮಗಾರಿಗಳಾಗಿದ್ದರಿಂದ ಈ ಎಲ್ಲ ಕಾಮಗಾರಿಗಳು ಅತೀ ದೊಡ್ಡ ಯೋಜನೆಗಳದ್ದಾಗಿವೆ. ಈ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಅವುಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅವುಗಳಿಗೆ ಏಲ್ಲಿಂದ ಮರಳು ಪೂರೈಕೆ ಮಾಡಲಾಗುತ್ತಿದೆ. ಅದರ ಗುಣಮಟ್ಟ ಏನು ಎಂಬ ಇತರೆ ಅಂಶಗಳ ಬಗ್ಗೆ ಗಮನಿಸಬೇಕು ಎಂದರು.
ಕುಷ್ಟಗಿ ಶಾಸಕ ಅಮರೇಗೌಡ ಬಯ್ನಾಪೂರ ಅವರು ಮಾತನಾಡಿ, ಜಿಲ್ಲೆಯ ಗ್ರ್ಯಾನೇಟ್ ಉದ್ಯಮ ಸಂಕಷ್ಟದಲ್ಲಿದೆ. ರಾಜ್ಯ ಸರ್ಕಾರದಿಂದ ಇದಕ್ಕೆ ಅನುಕೂಲವಾಗುವ ರೀತಿಯಲ್ಲಿ ಹೊಸದೊಂದು ಯೋಜನೆ ರೂಪಿಸುವಂತೆ ಕೇಳಿಕೊಂಡರು. ಇನ್ನೂ ಜಿಲ್ಲೆಯಲ್ಲಿನ ಅಕ್ರಮ ಮರಳು ದಂಧೆಯ ಕುರಿತು ಡಿಸಿ ಸುನೀಲ್ ಕುಮಾರ ಅವರು 10 ಅಂಶಗಳ ಪಟ್ಟಿಯನ್ನು ಸಚಿವರ ಗಮನಕ್ಕೆ ತಂದು ಇದಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಎಲ್ಲೆಡೆಯಿಂದ ಸರ್ಕಾರಕ್ಕೆ ರಾಜಧನ ಕಡಿಮೆ ಬರುತ್ತಿದೆ. ಸರ್ಕಾರಕ್ಕೆ ಬರಬೇಕಾದ ರಾಜಸ್ವ ಸರಿಯಾಗಿ ಬರಬೇಕು. ಅಕ್ರಮದ ಬಗ್ಗೆ ನಿಗಾ ವಹಿಸಬೇಕು. ಅಧಿಕಾರಿಗಳಿಗೆ ಯಾರಾದರೂ ಕಿರುಕುಳ ನೀಡಿದರೆ ದೂರು ನೀಡಬೇಕು ಎಂದರಲ್ಲದೇ ಪೊಲೀಸ್ ಇಲಾಖೆ ಇತ್ತೀಚೆಗೆ ಎಸ್ಕಾರ್ಟ್ ಭದ್ರತೆಯಲ್ಲಿ ಮರಳು ಸಾಗಾಟ ಮಾಡಲಾಗುತ್ತಿದೆ ಎನ್ನುವ ಮಾಹಿತಿ ನಮಗೆ ಬಂದಿದೆ. ಇದು ಪೊಲೀಸ್ ಇಲಾಖೆ ಆಡಳಿತದ ವೈಫಲ್ಯ. ಯಾವುದೇ ರಾಜಕಾರಣದ ಒತ್ತಡ ಬಂದರೆ ಹೆದರುವ ಅವಶ್ಯಕತೆಯಿಲ್ಲ. ಈ ಬಗ್ಗೆ ನನ್ನ ಗಮನಕ್ಕೆ ತನ್ನಿ, ಇಲ್ಲವೇ ಸಿಎಂ ಅವರಿಗೆ ವರದಿ ಮಾಡಿಕೊಂಡು ಇಲ್ಲಿನ ವಾಸ್ತುವ ಸ್ಥಿತಿ ವಿವರಿಸಬೇಕು. ಈ ಬಗ್ಗೆ ನಿಷ್ಕಾಳಜಿ ವಹಿಸಿದರೆ ನಾನು ಶಿಸ್ತು ಕ್ರಮ ಕೈಗಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ದಂಡ ವಸೂಲಾತಿಗೆ ಗಡುವು ಕೊಡಿ: ಜಿಲ್ಲೆಯಲ್ಲಿ ಸ್ಟೋನ್ ಕ್ರಷರ್‌ನ ಪರವಾನಿಗೆ ನವೀಕರಣ ಮಾಡದೇ ಅನಧೀಕೃತವಾಗಿ ಕೆಲಸ ನಡೆಸಿದ ಮಾಲಿಕರ ಮೇಲೆ 28 ಕೋಟಿ ದಂಡ ಹಾಕಿದ್ದು, ಇನ್ನು ಪಟ್ಟಾ ಜಮೀನಿನಲ್ಲಿ ಅಕ್ರಮ ಮರಳು ಎತ್ತುವಳಿ ಮಾಡಿದ ಪ್ರಕರಣಕ್ಕೆ ಸಂಬಂಸಿದಂತೆ 5 ಕೋಟಿ ದಂಡ ಹಾಕಿದೆ ಎಂದು ಡಿಸಿ ಅವರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರಿಗೆ ದಂಡ ಹಾಕಿ ನೊಟೀಸ್ ನೀಡಿದರೆ ವ್ಯರ್ಥ ಅವರಿಗೆ ಗುಡುವು ನೀಡಬೇಕು. ನಿಮ್ಮ ನೊಟೀಸ್ ಅನ್ನು ಅವರು ಕುರ್ಚಿ ಬುಡಕ್ಕೆ ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಈ ಬಗ್ಗೆ ಎಚ್ಚರಿಕೆ ಕೊಡಿ ಎಂದು ಡಿಸಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಂಸದ ಕರಡಿ ಸಂಗಣ್ಣ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಹಾಲಪ್ಪ ಆಚಾರ್, ಪರಣ್ಣ ಮುನವಳ್ಳಿ, ಡಿಸಿ ಪಿ.ಸುನೀಲ್ ಕುಮಾರ್, ಎಸ್ಪಿ ರೇಣುಕಾ ಸುಕುಮಾರ್, ಜಿ.ಪಂ ಸಿಇಒ ರಘುನಂದನ ಮೂರ್ತಿ, ಡಿಎಫ್‌ಒ ಯಶ್‌ಪಾಲ ಕ್ಷೀರಸಾಗರ, ಪ್ರೊಬೇಷನರಿ ಐಎಎಸ್ ಅಧಿಕಾರಿ ನೇಹಾ ಜೈನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು.