ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗೆ ಶಿಕ್ಷಕನಾಗಿ ಸೇರಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ನನ್ನ ಬೋಧನಾ ಶೈಲಿ, ಇಂಗ್ಲೀಷ್ ಭಾಷೆ ಆರಂಭದಲ್ಲಿ ಅಲ್ಲಿಯ ಶ್ರೀಮಂತ ಹಿನ್ನೆಲೆಯ ಮಕ್ಕಳನ್ನು ಆಕರ್ಷಿಸುವಲ್ಲಿ ವಿಫಲವಾಯಿತು. ಮಕ್ಕಳು ಒಂದೇ ತಿಂಗಳಿಗೆ ಈ ಟೀಚರ್ ನಮಗೆ ಬೇಡ ಎಂದು ಬರೆದು ದೂರು ಪೆಟ್ಟಿಗೆಯಲ್ಲಿ ಹಾಕಿದರು.
ಓದಿನಲ್ಲಿ ಚುರುಕಾಗಿದ್ದ ನಾನು ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ತರಗತಿಗೇ ದ್ವಿತೀಯ ಸ್ಥಾನಗಳಿಸಿದ್ದೆ. ಆದರೆ, ದ್ವಿತೀಯ ಪಿ.ಯು.ಸಿ ಫಲಿತಾಂಶ ಕೈಕೊಟ್ಟಿತು. ಇದಕ್ಕೆ ಮನನೊಂದು ಹೋಟೆಲ್ ಒಂದರಲ್ಲಿ ಬಿಲ್ ರೈಟರ್ ಕೆಲಸಕ್ಕೆ ಸೇರಿಕೊಂಡೆ. ನನ್ನ ಮೇಲಿನ ಭರವಸೆ ಹುಸಿಯಾಗಿದ್ದಕ್ಕೆ ಪ್ರಾಯಶ್ಚಿತ್ತವೆಂಬಂತೆ ಆ ವೃತ್ತಿಯನ್ನು ಆಯ್ದುಕೊಂಡಿದ್ದೆ. ಶಿಕ್ಷಣ, ಸ್ಪರ್ಧಾತ್ಮಕ ಪರೀಕ್ಷೆ, ಸರ್ಕಾರಿ ನೌಕರಿ ಎಂದೆಲ್ಲಾ ಆಲೋಚನೆಯಲ್ಲಿದ್ದ ನನ್ನನ್ನು ಈ ದಿಕ್ಪಲ್ಲಟ ಘಾಸಿಗೊಳಿಸಿತ್ತು.
ನಾನು ಬಿಲ್‌ರೈಟರ್ ಆಗಿದ್ದರೂ, ಸಂದರ್ಭ ಸನ್ನಿವೇಶಕ್ಕನುಗುಣವಾಗಿ ಮಾಲೀಕರ ಆಣತಿಯಂತೆ, ಲೋಟ ತೊಳೆಯುವುದರಿಂದ ಹಿಡಿದು, ಒಲೆ ಮುಂದೆ ನಿಂತು ಪೂರಿ ಕರಿಯುವವರೆಗೆ ಎಲ್ಲಾ ಕೆಲಸಗಳನ್ನೂ ಮಾಡಬೇಕಾಗಿತ್ತು. ಒಮ್ಮೊಮ್ಮೆ ತಮ್ಮ ಪಾಳಿ ಮುಗಿಸಿ ಹೋಗುತ್ತಿದ್ದ ಕ್ಲೀನರ್ ಹುಡುಗರು ಬೆಳಗ್ಗೆ ನಾಪತ್ತೆಯಾಗುತ್ತಿದ್ದರು. ಹಾಗಂತ ಹೋಟೆಲ್ ಮುಚ್ಚುವಂತಿರಲಿಲ್ಲ. ಆಗೆಲ್ಲಾ ಬಕೆಟ್ ಹಿಡಿದು ಟೇಬಲ್ ಕ್ಲೀನ್ ಮಾಡಬೇಕಾದ ಅನಿವಾರ್ಯತೆ. ಹಾಗೆ ನೋಡಿದರೆ, ಈ ಕೆಲಸಗಳು ನನಗೆ ಹೊಸತೇನಲ್ಲ. ಹಿಂದೆ ಬೇಸಿಗೆ ರಜೆಯಲ್ಲಿ ಈ ಬಗೆಯ ಹೋಟೆಲ್ ಕೆಲಸಕ್ಕೆಲ್ಲಾ ಹೋಗುತ್ತಿದ್ದೆ.
ಬಹುಬೇಗನೆ ಸಾಹುಕಾರರ ಮೆಚ್ಚಿನ ಕೆಲಸಗಾರನಾದೆ. ಕ್ರಮೇಣ ಕ್ಯಾಷಿಯರ್ ಆಗಿ ಬಡ್ತಿ ಪಡೆದೆ. ಮುಂದೆ ಹೆಗಲೇರಿದ ಹೋಟೆಲ್ ನಿರ್ವಹಣೆಯ ಜವಾಬ್ದಾರಿಯನ್ನೂ ಸಮರ್ಥವಾಗಿ ನಿರ್ವಹಿಸಿದೆ. ಆದರೂ ಒಳ್ಳೆಯ ಶಿಕ್ಷಣ, ಒಳ್ಳೆಯ ನೌಕರಿ ಬಗೆಗಿನ ಆಸಕ್ತಿ ಮಾತ್ರ ಬತ್ತಿರಲಿಲ್ಲ. ಹೋಟೆಲ್‌ಗೆ ಬರುತ್ತಿದ್ದ ಪರಿಚಯದವರು, ಕ್ಯಾಶ್‌ನಲ್ಲಿ ಕುಳಿತಿರುತ್ತಿದ್ದ ನನ್ನನ್ನು ನೋಡಿ, ಒಂದು ಸಲ “ನೀನು ಏಕೆ ಓದು ನಿಲ್ಲಿಸಿದೆ? ಇದು ನಿನಗೆ ಹೇಳಿ ಮಾಡಿಸಿದ ಕೆಲಸವಲ್ಲ ‘ ಅಂದರು. ಆಗ ನನ್ನೊಳಗಿನ ಕನಸು ಮತ್ತೆ ಜೀವಕಳೆಯಿಂದ ಪುಟಿದೇಳುತ್ತಿತ್ತು. ಹಾಗೆಯೇ ಸುಮಾರು ಎರಡು ವರ್ಷಗಳ ಕಾಲ ಕೆಲಸ ಮಾಡಿ ಡಿ.ಎಡ್ ಕೋರ್ಸ್ ಪ್ರವೇಶಾತಿಗೆ ಅರ್ಜಿ ಹಾಕಿದೆ. ಸರಕಾರಿ ಸೀಟ್ ಕೂಡಾ ಸಿಕ್ಕಿತು. ನನ್ನ ಕನಸು ರೆಕ್ಕೆ ಬಿಚ್ಚಿತು. ಹೋಟೆಲ್‌ನಲ್ಲಿ ದುಡಿದು ಮಾಡಿದ ಉಳಿತಾಯದಿಂದ ನನ್ನ ಇಚ್ಛೆಯ ಕೋರ್ಸ್ ಮಾಡಿದೆ. ಜಿಲ್ಲೆಗೇ ಎರಡನೇ ಸ್ಥಾನ ಗಳಿಸಿ ಉತ್ತೀರ್ಣನಾದೆ. ನಂತರವೇ ಅರಿವಾಗಿದ್ದು ತಕ್ಕುದಾದ ಉದ್ಯೋಗ ಹುಡುಕಿಕೊಳ್ಳುವ ಕಷ್ಟ.
ರೆಸ್ಯೂಮ್ ಸಿದ್ಧಪಡಿಸಿಟ್ಟುಕೊಂಡು ಸಿಕ್ಕ ಸಿಕ್ಕ ಖಾಸಗಿ ಶಾಲೆಗಳ ಮೆಟ್ಟಿಲು ಹತ್ತಿಳಿದದ್ದು ಬಂತೇ ಹೊರತು, ಕೆಲಸ ಮಾತ್ರ ಸಿಕ್ಕಿರಲಿಲ್ಲ. ಈ ನಡುವೆ ಒಂದು ಎನ್‌ಜಿಓನಲ್ಲಿ ಒಂದಷ್ಟು ಸಮಯ ಕೆಲಸ ಮಾಡಿದೆ. ಅದರಲ್ಲಿ ವೇಶ್ಯೆಯರು ಹಾಗೂ ವಲಸಿಗರ ಮಾಹಿತಿಗಳನ್ನು ಕಲೆಹಾಕಬೇಕಾಗಿತು. ಕೊನೆಗೂ ದೂರದ ಮಂಡ್ಯ ಜಿಲ್ಲೆಯ ಹಳ್ಳಿಯೊಂದರ ಖಾಸಗಿ ಶಾಲೆಯಲ್ಲಿ ಕೆಲಸ ಸಿಕ್ಕಿತು. ವೇತನ ತೀರಾ ಕಡಿಮೆಯಿದ್ದರೂ, ಇಷ್ಟದ ವೃತ್ತಿಯನ್ನು ಮಾಡುತ್ತಿರುವೆನೆಂಬ ಆತ್ಮ ತೃಪ್ತಿಯಿತ್ತು. ಅದೇ ಅವಧಿಯಲ್ಲಿ ದೂರ ಶಿಕ್ಷಣದ ಮೂಲಕ ಪದವಿಯನ್ನೂ ಪೂರ್ಣಗೊಳಿಸಿಕೊಂಡೆ.
ಇನ್ನೂ ಒಂದಷ್ಟು ಉತ್ತಮ ಬೋಧನಾ ಕಲಿಕಾ ಅನುಭವವನ್ನು ಪಡೆಯುವ ಉದ್ಧೇಶದಿಂದ ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಶಾಲೆಗೆ ಶಿಕ್ಷಕನಾಗಿ ಸೇರಿದೆ. ಗ್ರಾಮೀಣ ಹಿನ್ನೆಲೆಯಿಂದ ಬಂದ ನನ್ನ ಬೋಧನಾ ಶೈಲಿ, ಇಂಗ್ಲೀಷ್ ಭಾಷೆ ಆರಂಭದಲ್ಲಿ ಅಲ್ಲಿಯ ಶ್ರೀಮಂತ ಹಿನ್ನೆಲೆಯ ಮಕ್ಕಳನ್ನು ಆಕರ್ಷಿಸುವಲ್ಲಿ ವಿಫಲವಾಯಿತು. ಮಕ್ಕಳು ಒಂದೇ ತಿಂಗಳಿಗೆ ಈ ಟೀಚರ್ ನಮಗೆ ಬೇಡ ಎಂದು ಬರೆದು ದೂರು ಪೆಟ್ಟಿಗೆಯಲ್ಲಿ ಹಾಕಿದರು. ಕೆಲಸ ಬಿಡುವ ಯೋಚನೆಯಲ್ಲಿದ್ದ ನನ್ನನ್ನು ಸಂಸ್ಥೆಯ ಪ್ರಾಂಶುಪಾಲೆ ಗೀತಿಕಾ ಸಿಂಗ್ ಖರೋಲಾ ಹುರಿದಂಬಿಸಿ, ಅಲ್ಲಿಯ ಪಟ್ಟುಗಳನ್ನು ಕಲಿಯಲು ನೆರವಾದರು. ಆನಂತರ ಒಂದೇ ವರ್ಷಕ್ಕೆ ಹೈಸ್ಕೂಲ್ ವಿದ್ಯಾರ್ಥಿಗಳಿಗೂ ಬೋಧಿಸಲಾರಂಭಿಸಿದೆ. ಇಂಗ್ಲೀಷ್ ಭಾಷೆಯ ಮೇಲೆ ಹಿಡಿತವನ್ನೂ ಸಾಧಿಸಿದೆ. ಅಲ್ಲಿ ಎರಡು ವರ್ಷ ಪೂರೈಸುವುದರೊಳಗೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಿ ಶಿಕ್ಷಕನಾಗಿ ನೇಮಕವಾದೆ. ಅದರೊಂದಿಗೆ ನನ್ನ ಕನಸು ಕೈಗೂಡಿತು. ಈ ನಡುವೆ ಇಂಗ್ಲೀಷ್‌ನೆಡೆಗಿನ ಆಸಕ್ತಿ ಹಾಗೂ ಅಭಿರುಚಿ ವೃತ್ತಿ ಜೀವನದಲ್ಲಿ ನನಗೆ ಹಲವಾರು ವಿಶೇಷ ಅವಕಾಶಗಳನ್ನೂ ಒದಗಿಸಿತು. ಇದೀಗ, ನನ್ನಿಷ್ಟದ ವೃತ್ತಿಯಲ್ಲಿರುವ ಸಮಾಧಾನ ಹಾಗೂ ಆತ್ಮತೃಪ್ತಿ ನನ್ನದು.
ಸಂದೇಶ್. ಎಚ್.ನಾಯ್ಕ… ಹಕ್ಲಾಡಿ
ಕುಂದಾಪುರ