Advertisement

ಮಲೆ ಮಹದೇಶ್ವರಸ್ವಾಮಿ ಉತ್ಸವ ವೈಭವ

09:07 PM Nov 25, 2019 | Lakshmi GovindaRaj |

ಕೆ.ಆರ್‌.ನಗರ: ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿರುವ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನ ಮತ್ತು ಉತ್ಸವ ಸಮಿತಿಯ ವತಿಯಿಂದ ಕಡೇ ಕಾರ್ತೀಕ ಸೋಮವಾರದ ಅಂಗವಾಗಿ ಮಹದೇಶ್ವಸ್ವಾಮಿಯ 49ನೇ ವರ್ಷದ ಉತ್ಸವ ಅತ್ಯಂತ ವೈಭವದಿಂದ ಜರುಗಿತು.

Advertisement

ಸೋಮವಾರ ಬೆಳಗ್ಗೆ 10 ಗಂಟೆಗೆ ಗಾವಡಗೆರೆ ಗುರುಲಿಂಗ ಜಂಗಮ ಮಠದ ನಟರಾಜ ಸ್ವಾಮೀಜಿ, ಶಾಸಕ ಸಾ.ರಾ.ಮಹೇಶ್‌, ಹುಣಸೂರು ಕ್ಷೇತ್ರದ ಅನರ್ಹ ಶಾಸಕ ಎಚ್‌.ವಿಶ್ವನಾಥ್‌, ಜಿಪಂ ಸದಸ್ಯ ಡಿ.ರವಿಶಂಕರ್‌, ಅಖೀಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಕೆಂಪರಾಜು, ನವನಗರ ಅರ್ಬನ್‌ ಕೋ-ಆಪರೇಟಿವ್‌ ಬ್ಯಾಂಕಿನ ಅಧ್ಯಕ್ಷ ಕೆ.ಎನ್‌.ಬಸಂತ್‌ ಮತ್ತಿತರರು ದೇವಾಲಯದ ಮುಂಭಾಗ ಉತ್ಸವಕ್ಕೆ ಚಾಲನೆ ನೀಡಿದರು.

ಪಲ್ಲಕ್ಕಿ ಮೆರವಣಿಗೆ: ಬಳಿಕ ಮುತ್ತಿನ ಪಲ್ಲಕ್ಕಿಯಲ್ಲಿ ದೇವರ ಮೆರವಣಿಗೆ ಕೀಲು ಕುದುರೆ, ಕಂಸಾಳೆ ನೃತ್ಯ, ಗಾರುಡಿ ಗೊಂಬೆ, ತಮಟೆ ವಾದ್ಯ, ಡೊಳ್ಳು ಕುಣಿತ, ಗೊರವನ ಕುಣಿತ, ವೀರಗಾಸೆ, ನಾಸಿಕ್‌ ಡ್ರಮ್‌, ಪೂಜಾ ಕುಣಿತ, ಚಂಡೇ ಮೇಳ, ನಂದಿ ಧ್ವಜದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿಜೃಂಭಣೆಯಿಂದ ನಡೆಯಿತು.

ಹರಕೆ: ಈ ಸಂದರ್ಭದಲ್ಲಿ ಸಾವಿರಾರು ಮಂದಿ ಭಕ್ತರು ರಸ್ತೆಯ ಎರಡೂ ಬದಿಗಳಲ್ಲಿ ನಿಂತು ಮಹದೇಶ್ವರಸ್ವಾಯಿ ದರ್ಶನ ಪಡೆದು ವಿವಿಧ ಹರಕೆ ತೀರಿಸಿ, ಧನ್ಯತಾಭಾವ ಮೆರೆದರು. ನೆರೆದಿದ್ದ ಭಕ್ತರಿಗೆ ಪಾನಕ, ಮಜ್ಜಿಗೆ ಮತ್ತು ಪ್ರಸಾದ ವಿತರಿಸಿ ಕಡೇ ಕಾರ್ತೀಕ ಸೋಮವಾರದ ಪೂಜೆ ನೆರವೇರಿಸಿದರು.

ಹತ್ತಾರು ಜಾನಪದ ಕಲಾ ತಂಡಗಳು ಮೆರವಣಿಗೆಗೆ ರಂಗು ನೀಡಿದವು. ಮಿನಿ ದಸರಾ ವೈಭವವನ್ನು ನೆನಪಿಸಿ ನೆರೆದಿದ್ದವರು ಕುಣಿದು ಕುಪ್ಪಳಿಸುವಂತೆ ಮಾಡಿದವು. ಉತ್ಸವದಲ್ಲಿ ಕೆ.ಆರ್‌.ನಗರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಭಾಗಗಳಿಂದ ಹತ್ತಾರು ಸಾವಿರಕ್ಕೂ ಅಧಿಕ ಮಂದಿ ಭಕ್ತರು ಪಾಲ್ಗೊಂಡು ಸ್ವಾಮಿಯ ದರ್ಶನ ಪಡೆದರು.

Advertisement

ಉತ್ಸವದ ಅಂಗವಾಗಿ ಮಲೆಮಹದೇಶ್ವರಸ್ವಾಮಿ ದೇವಾಲಯದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜಾ ವಿಧಿ ವಿಧಾನಗಳನ್ನು ನಡೆಸಿ ದೇವರಿಗೆ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ಬೆಳಗ್ಗೆಯಿಂದ ಸಂಜೆಯವರೆಗೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ದಾಸೋಹ: ಸಂಜೆ 6-30ಕ್ಕೆ ಕೊಂಡೋತ್ಸವ, 7 ಗಂಟೆಗೆ ಪಟಾಕಿ ಮತ್ತು ಬಾಣ ಬಿರುಸುಗಳ ಪ್ರದರ್ಶನ ನಡೆಸಿ 8-30ಕ್ಕೆ ಸಾಲುಪಂಕ್ತಿ ಅನ್ನ ದಾಸೋಹ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ದೇವಾಲಯದ ಟ್ರಸ್ಟಿಗಳಾದ ಆರ್‌.ಬಿ.ನಾಗರಾಜು, ಆರ್‌.ಎಚ್‌.ನಟರಾಜು, ಸಿ.ಪಾಲಾಕ್ಷ, ವೈ.ಎಸ್‌.ಸುರೇಶ್‌, ಕೆ.ಟಿ.ಬಸವರಾಜು, ಎಂ.ಡಿ.ನಟರಾಜು, ಚನ್ನಬಸಪ್ಪ ಮತ್ತು ಮಲೆಮಹದೇಶ್ವರ ಯುವ ಸೇನೆಯ ಅಧ್ಯಕ್ಷ ಭೋಜರಾಜು ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next