ಬೋಳಾರ ಹಳೇಕೋಟೆ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ನೆರವೇರಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹೃನ್ಮನ ಸೆಳೆದವು. ಸಂಗೀತ ವಿದ್ಯಾನಿಧಿ ವಿದ್ಯಾಭೂಷಣ ಮತ್ತು ಬಳಗದವರು ಭಕ್ತಿಸುಧೆ ಕಾರ್ಯಕ್ರಮದ ಮೂಲಕ ಮಧುರ ಹಾಗೂ ಭಕ್ತಿಪೂರಿತ ಗಾಯನದ ಆನಂದವನ್ನುಂಟು ಮಾಡಿದರು. ಮಾಧುರ್ಯ ಸಂಗೀತ ವಿದ್ಯಾಲಯದ ಅನುಶ್ರೀ ರಾವ್- ಸ್ವಾತಿ ರಾವ್ ಬಳಗದವರ ಗಾನ ಮಾಧುರ್ಯ ಕಾರ್ಯಕ್ರಮ ಮನಸೆಳೆಯಿತು. ರಾವ್ ಸೋದರಿಯರು ಹಂಸಧ್ವನಿ ರಾಗಾಲಾಪನೆಯೊಂದಿಗೆ ಅಭೀಷ್ಟ ವರದ ಶ್ರೀ ಮಹಾಗಣಪತೇ ತ್ಯಾಗರಾಜರ ರಚನೆಯನ್ನು ಸ್ವರ ಪ್ರಸ್ತಾರದೊಂದಿಗೆ ಹಾಡಿ ಕಾರ್ಯಕ್ರಮ ಆರಂಭಿಸಿದರು. ದಾಸವರೇಣ್ಯರ ರಚನೆಗಳನ್ನೇ ಹೆಚ್ಚಾಗಿ ಪ್ರಸುತಪಡಿಸುವುದರ ಮೂಲಕ ಕೇಳುಗರಿಗೆ ದಾಸ ಸಾಹಿತ್ಯದ ರಸದೌತಣವನ್ನಿತ್ತರು . ವಾದಿರಾಜ ತೀರ್ಥರಿಂದ ರಚಿತ ಹಾಡಿನೊಂದಿಗೆ ಸಂಪನ್ನಗೊಂಡ ಈ ಗಾನ ಮಾಧುರ್ಯ ಕಾರ್ಯಕ್ರಮ ಹೃನ್ಮನಸೂರೆಗೊಳಿಸಿತು. ಬ್ರಹ್ಮಕಲಶೋತ್ಸವದ ದಿನಗಳಲ್ಲಿ ಹಳೇಕೋಟೆ ವೇದಿಕೆಯಲ್ಲಿ ವಿವಿಧ ಕಲಾತಂಡಗಳಿಂದ ಹಲವು ಸಾಂಸ್ಕೃತಿಕ ವೈವಿಧ್ಯಗಳು ಪ್ರಸ್ತುತಗೊಂಡವು. ಪ್ರಸಿದ್ಧ ಅರ್ಥದಾರಿ ಜಬ್ಟಾರ್ ಸಮೊ ಸಾರಥ್ಯದ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಮೂಡಿಬಂದ ಶಿವಭಕ್ತ ವೀರಮಣಿ ತಾಳಮದ್ದಳೆ ಮನಸೆಳೆಯಿತು. ಸತೀಶ್ ಶೆಟ್ಟಿ ಬೋಂದೆಲ್‌ರವರ ಸುಶ್ರಾವ್ಯವಾದ ಭಾಗವತಿಕೆ , ಪಾತ್ರಧಾರಿಗಳ ಅಪ್ರತಿಮ ಅರ್ಥಗಾರಿಕೆ ಮನಸೂರೆಗೊಂಡಿತು .
– ಶ್ರವಣ್ ಶೆಟ್ಟಿ